ಹಮಾಸ್ ನೇತಾರ ಇಸ್ಮಾಯಿಲ್ ಹನಿಯ್ಯ ಹತ್ಯೆಯ ತುಸು ಮೊದಲು ಅವರ ಜತೆ ನಾನು ಮುಖತಃ ಮಾತುಕತೆ ನಡೆಸಿದ್ದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

0
640

ಸನ್ಮಾರ್ಗ ವಾರ್ತೆ

ಹಮಾಸ್ ನ ಮಾಜಿ ನೇತಾರ ಇಸ್ಮಾಯಿಲ್ ಹನಿಯ್ಯ ಹತ್ಯೆಯಾಗುವುದಕ್ಕಿಂತ ತುಸು ಮೊದಲು ಅವರ ಜೊತೆ ನಾನು ಮುಖತಃ ಮಾತುಕತೆ ನಡೆಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇರಾನಿನ ಟೆಹರಾನಿನಲ್ಲಿ ಇಸ್ಮಾಯಿಲ್ ಹನಿಯ ಅವರ ಹತ್ಯೆ ನಡೆದಿತ್ತು.

ಹೊಸದಾಗಿ ಆಯ್ಕೆಯಾದ ಇರಾನಿನ ಅಧ್ಯಕ್ಷ ಮಸೂದ್ ಪೆಷಸ್ಕಿಯ ಅವರ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ನಾನು ಇರಾನಿಗೆ ಹೋಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ನಾನು ಇರಾನಿಗೆ ಹೋಗಿದ್ದೆ ಎಂದವರು ಹೇಳಿದ್ದಾರೆ.

ಈ ಪ್ರತಿಜ್ಞಾವಿಧಿ ಸಮಾರಂಭಕ್ಕಿಂತ ಮೊದಲು ತೆಹರಾನಿನ ಪಂಚತಾರಾ ಹೋಟೆಲ್ ನಲ್ಲಿ ವಿವಿಧ ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರತಿನಿಧಿಗಳು ಚಹಾ ಸೇವಿಸುವ ಅನೌಪಚಾರಿಕ ಸಭೆ ನಡೆದಿತ್ತು. ಇವರಲ್ಲಿ ಇಸ್ಮಾಯಿಲ್ ಹನಿಯ ಕೂಡ ಇದ್ದರು. ನಾನು ಅವರ ಜೊತೆ ಮಾತುಕತೆ ನಡೆಸಿದೆ. ಇರಾನಿನ ಅಧ್ಯಕ್ಷ ರು ಮತ್ತು ಚೀಫ್ ಜಸ್ಟಿಸ್ ನ ಜೊತೆ ಇವರು ಪ್ರತಿಜ್ಞಾವಿಧಿ ಸಮಾರಂಭಕ್ಕೆ ಹೋಗುವುದನ್ನು ನಾನು ನೋಡಿದೆ. ಪ್ರತಿಜ್ಞಾವಿಧಿ ಸಮಾರಂಭದ ಬಳಿಕ ನಾನು ನನ್ನ ಹೊಟ್ಟೆಲಿಗೆ ಮರಳಿದೆ. ಬೆಳಿಗ್ಗೆ ನಾಲ್ಕು ಗಂಟೆಗೆ ಭಾರತದಲ್ಲಿರುವ ಇರಾನಿನ ರಾಯಭಾರಿ ನನ್ನ ಬಳಿಗೆ ಬಂದು ತಕ್ಷಣ ನೀವು ಇಲ್ಲಿಂದ ಹೋಗಬೇಕು ಎಂದು ತಿಳಿಸಿದರು. ಏನಾಯ್ತು ಎಂದು ಪ್ರಶ್ನಿಸಿದೆ. ಹಮಾಸ್ ನಾಯಕ ಹತ್ಯೆಗೆ ಈಡಾಗಿದ್ದಾರೆ ಎಂದು ಅವರು ನನಗೆ ತಿಳಿಸಿದರು. ನಾನು ಬೆಚ್ಚಿಬಿದ್ದೆ. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಉತ್ತರ ಕೊಟ್ಟರು ಎಂದು ಗಡ್ಕರಿ ನೆನಪಿಸಿದ್ದಾರೆ.

2024 ಜುಲೈ 31 ರಂದು ಮುಂಜಾನೆ ಒಂದು ಗಂಟೆ 15 ನಿಮಿಷಕ್ಕೆ ಹನಿಯ ಅವರ ಹತ್ಯೆ ನಡೆದಿತ್ತು. ಇರಾನಿನ ಸೇನೆಯ ಮೇಲ್ನೋಟದಲ್ಲಿ ಭಾರಿ ಭದ್ರತೆ ಇರುವ ಸೈನಿಕ ಸಮುಚ್ಚಯದಲ್ಲಿ ಹನಿಯ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಅಂಗರಕ್ಷಕ ಕೂಡ ಹತ್ಯೆಗೀಡಾಗಿದ್ದಾರೆ.

ಅವರು ಹೇಗೆ ಹತ್ಯೆಗೆ ಈಡಾದರು ಎಂಬುದು ಈಗಲೂ ಬಹಿರಂಗಕ್ಕೆ ಬಂದಿಲ್ಲ. ಒಂದು ಬಗೆಯ ಅನಿಶ್ಚಿತತೆ ಇದೆ. ಅವರು ಮೊಬೈಲ್ ಫೋನ್ ಉಪಯೋಗಿಸಿದ್ದರಿಂದ ಅವರ ಹತ್ಯೆ ನಡೆಯಿತು ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಬೇರೆ ರೀತಿಯಲ್ಲಿ ಹತ್ಯೆ ನಡೆಯಿತು ಎಂದು ಹೇಳುತ್ತಾರೆ ಎಂದು ಗಡ್ಕರಿ ಹೇಳಿದ್ದಾರೆ.

ಒಂದು ರಾಷ್ಟ್ರ ಪ್ರಬಲವಾಗಿದ್ದರೆ ಬೇರೆ ಯಾವ ರಾಷ್ಟ್ರಕ್ಕೂ ಅದರ ಮೇಲೆ ಕೈ ಎತ್ತಲು ಧೈರ್ಯ ಬರಲ್ಲ. ಇದಕ್ಕೆ ಉದಾಹರಣೆಯಾಗಿ ಅವರು ಇಸ್ರೇಲನ್ನು ತೋರಿಸಿದರು.