“ನಾನಿನ್ನು ಆರು ತಿಂಗಳವರೆಗೆ ಮಾತ್ರ ಬದುಕಿರುವೆ… ಈ ವಿಷಯ ನನ್ನ ಹೆತ್ತವರ ಬಳಿ ಹೇಳಬೇಡಿ”: ಕ್ಯಾನ್ಸರ್ ಬಾಧಿತ ಆರು ವರ್ಷದ ಬಾಲಕನ ಕೊನೆಯ ಸಂಭಾಷಣೆ ಬಿಚ್ಚಿಟ್ಟ ವೈದ್ಯ

0
344

ಸನ್ಮಾರ್ಗ ವಾರ್ತೆ

“ನಾನಿನ್ನು ಆರು ತಿಂಗಳವರೆಗೆ ಮಾತ್ರ ಬದುಕಿರುವೆ, ಆದ್ದರಿಂದ ದಯವಿಟ್ಟು ನನ್ನ ತಂದೆ ಮತ್ತು ತಾಯಿಗೆ ಈ ವಿಷಯವನ್ನು ತಿಳಿಸಬೇಡಿ…” ಎಂದು ಕೋರಿಕೊಂಡ ಕ್ಯಾನ್ಸರ್ ಬಾಧಿತ ಆರು ವರ್ಷದ ಬಾಲಕನ ಹೃದಯ ವಿದ್ರಾವಕ ಕಥೆಯನ್ನು ವೈದ್ಯರು ಹಂಚಿಕೊಂಡಿದ್ದಾರೆ. ಬಾಲಕ ಮೃತಪಟ್ಟ ಬಳಿಕ ಹೈದರಾಬಾದಿನ ಅಪೋಲೋ ಆಸ್ಪತ್ರೆಯ ನ್ಯೂರಾಲಜಿಸ್ಟ್ ಆಗಿರುವ ಡಾಕ್ಟರ್ ಸುಧೀರ್ ಕುಮಾರ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

9 ತಿಂಗಳ ಹಿಂದೆ ಗಂಡ ಹೆಂಡತಿಯರಿಬ್ಬರೂ ನನ್ನನ್ನು ಭೇಟಿಯಾಗಲು ಬಂದಿದ್ದರು. ಇವರ ಆರು ವರ್ಷದ ಮಗ ನನ್ನ ರೂಮ್‌ನ ಹೊರಗಿದ್ದ. ನಮ್ಮ ಮಗನಿಗೆ ಕ್ಯಾನ್ಸರ್ ಕಾಯಿಲೆ, ಈ ವಿಚಾರವನ್ನು ಅವನೊಂದಿಗೆ ನಾವು ಹೇಳಿಲ್ಲ. ನೀವು ಆತನಿಗೆ ಚಿಕಿತ್ಸೆ ನೀಡಬೇಕು ಮತ್ತು ಕಾಯಿಲೆಯನ್ನು ಆತನ ಬಳಿ ಹೇಳಬಾರದು ಎಂದವರು ನನ್ನೊಂದಿಗೆ ವಿನಂತಿಸಿದರು. ಬಳಿಕ ಆತ ಒಂದು ವೀಲ್‌ಚೇರ್‌ನಲ್ಲಿ ಮುಗುಳ್ನಗೆಯೊಂದಿಗೆ ನನ್ನ ಬಳಿಗೆ ಬಂದ. ಆತನ ದಾಖಲೆಗಳನ್ನು ಪರಿಶೀಲಿಸಿದೆ. ಮಾರಕ ಮೆದುಳು ಕ್ಯಾನ್ಸರ್. ಆತನಿಗೆ ಅದಾಗಲೇ ಶಸ್ತ್ರಚಿಕಿತ್ಸೆ ಮತ್ತು ಕಿಮೋಥೆರಪಿ ಮಾಡಲಾಗಿತ್ತು. ಈ ಕುರಿತಂತೆ ಕುಟುಂಬದ ಜೊತೆ ಮಾತಾಡಿದೆ. ಈ ನಡುವೆ ವೈದ್ಯರ ಜೊತೆ ಪ್ರತ್ಯೇಕವಾಗಿ ನನಗೆ ಮಾತಾಡಬೇಕು ಎಂದು ಆ ಬಾಲಕ ಹೇಳಿದ. ಆದ್ದರಿಂದ ಆತನ ಹೆತ್ತವರನ್ನು ಹೊರಗೆ ಕಳುಹಿಸಿದೆ. ಹೆತ್ತವರು ಹೊರಗೆ ಹೋಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಬಾಲಕ ನನ್ನೊಂದಿಗೆ ಹೇಳಿದ..

“ನನ್ನ ಕಾಯಿಲೆಯ ಬಗ್ಗೆ ನಾನು ಐಪ್ಯಾಡ್‌ನಲ್ಲಿ ಪೂರ್ಣವಾಗಿ ವಿವರವನ್ನು ತಿಳಿದುಕೊಂಡಿದ್ದೇನೆ. ಆರು ತಿಂಗಳವರೆಗೆ ಮಾತ್ರ ನಾನು ಬದುಕಿರಬಲ್ಲೆ ಎಂಬುದು ನನಗೆ ಗೊತ್ತಿದೆ. ಆದರೆ ನನ್ನ ತಾಯಿ ಮತ್ತು ತಂದೆಯೊಂದಿಗೆ ನಾನು ಈ ವಿವರವನ್ನು ಹೇಳಿಲ್ಲ. ನಾನು ಸಾಯುವ ಸಂಗತಿ ನನಗೆ ಗೊತ್ತಿದೆ ಎಂದು ಅವರಿಗೆ ಗೊತ್ತಾದರೆ ಅವರಿಗೆ ಅದನ್ನು ಸಹಿಸಲು ಸಾಧ್ಯವಿಲ್ಲ. ಅವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ. ಆದ್ದರಿಂದ ಈ ವಿಷಯವನ್ನು ಅವರ ಜೊತೆ ಹೇಳಬೇಡಿ” ಎಂದಾತ ನನ್ನಲ್ಲಿ ವಿನಂತಿಸಿದ.

ನಾನು ಆತನ ಮಾತಿಗೆ ಒಪ್ಪಿಕೊಂಡೆ. ಆ ಬಳಿಕ ಹೆತ್ತವರನ್ನು ಒಳಗೆ ಕರೆದು ಆತನನ್ನು ಹೊರಗೆ ಕಳುಹಿಸಿದೆ. ಮಾತ್ರ ಅಲ್ಲ ಆತ ನನ್ನೊಂದಿಗೆ ಏನೆಲ್ಲ ಹೇಳಿದ್ದನೋ ಅವೆಲ್ಲವನ್ನೂ ಅವರ ಜೊತೆ ಹೇಳಿದೆ. ಅದು ಅವರು ತಿಳಿದುಕೊಳ್ಳಲೇಬೇಕಾದ ವಿಷಯವಾಗಿತ್ತು. ಉಳಿದ ದಿನಗಳನ್ನು ಸಂತೋಷದಿಂದ ಕಳೆಯುವುದಕ್ಕೆ ಇದು ಅಗತ್ಯವಾಗಿತ್ತು. ನನ್ನ ಮಾತು ಕೇಳಿ ಆ ಹೆತ್ತವರು ಅತ್ತರು ಮತ್ತು ಆ ಬಳಿಕ ಮಗುವಿನೊಂದಿಗೆ ಮರಳಿದರು ಎಂದು ಡಾಕ್ಟರ್ ಸುಧೀರ್ ಕುಮಾರ್ ಸರಣಿ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ಇದಾಗಿ 9 ತಿಂಗಳ ಬಳಿಕ ಆ ಹೆತ್ತವರು ನನ್ನ ಬಳಿಗೆ ಬಂದಾಗಲೇ ನನಗೆ ಮಗುವಿನ ನೆನಪಾಯಿತು. ಒಂದು ತಿಂಗಳ ಹಿಂದೆ ಬಾಲಕ ಮೃತಪಟ್ಟಿರುವ ಸಂಗತಿಯನ್ನು ಅವರು ತಿಳಿಸಿದರು ಮತ್ತು ಆತನನ್ನು ಸಾಧ್ಯವಾದಷ್ಟು ಸಂತಸವಾಗಿ ಇಡುವುದಕ್ಕೆ ಪ್ರಯತ್ನಿಸಿದ್ದೇವೆ ಎಂದು ಹೇಳಿದರು. ಕೆಲಸದ ವಿಷಯದಲ್ಲಿ ಕೂಡ ನಾವು ಎರಡು ಅವಧಿಯನ್ನು ವಿಭಜಿಸಿ ಯಾರಾದರೂ ಒಬ್ಬರು ಆತನ ಜೊತೆ ಇರುವಂತೆ ನೋಡಿಕೊಂಡೆವು. ಆತನಿಗೆ ಡಿಸ್ನಿಲ್ಯಾಂಡ್ ನೋಡಬೇಕೆಂದು ಆಸೆ ಇತ್ತು. ಅದನ್ನು ಕೂಡ ಪೂರ್ತಿ ಮಾಡಿದೆವು. ನಿಮಗೆ ಧನ್ಯವಾದಗಳು ಎಂದು ಅವರು ಹೇಳಿದರು ಎಂದು ಟ್ವೀಟ್ ಮಾಡಿದ್ದಾರೆ.