ನಾನು ಕಂಡ ಇಬ್ರಾಹೀಮ್ ತಣ್ಣೀರುಬಾವಿ; ಗೆಳೆಯ ಮಹಮ್ಮದ್ ಕುಳಾಯಿಯವರಿಂದ ಮೆಲುಕು

0
1207

ಸ್ಮರಣೆ

ನಾನು ಇಬ್ರಾಹೀಮ್ ತಣ್ಣೀರುಬಾವಿಯವರ ಹೆಸರು ಕೇಳಿದ್ದೆ. ಆದರೆ ನನಗೆ ಅವರ ಪರಿಚಯವಾದದ್ದು ಮತ್ತು ಅವರು ನನಗೆ ಬಹಳ ಆತ್ಮೀಯರಾದದ್ದು 1997ರಲ್ಲಿ. 1997ರಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಬೆಂಗಳೂರು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‍ನವರು ನಡೆಸಿದ ಎರಡು ದಿನಗಳ ಬ್ಯಾರಿ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಮಗೆ ವಹಿಸಿದಾಗ ನನಗೆ ಮೊದಲು ನೆನಪಾದದ್ದು ಇಬ್ರಾಹೀಮ್ ತಣ್ಣೀರುಬಾವಿ. ಒಂದು ದಿನ ಬಿ.ಎ. ಮುಹಮ್ಮದ್ ಅಲಿ, ಬಶೀರ್ ಬೈಕಂಪಾಡಿ ಜೊತೆ ನಾನು ಕೃಷ್ಣಾಪುರ ಚೊಕ್ಕಬೆಟ್ಟುವಿನಲ್ಲಿರುವ ಅವರ ಮನೆಗೆ ಹೋದಾಗ, ಮನೆಯ ಚಾವಡಿಯಲ್ಲಿ ಒಂದು ಬೆಂಚಿನ ಮೇಲೆ ಅವರು ಕುಳಿತಿದ್ದರು. ನನಗೆ ಅಂದು ಅವರನ್ನು ಮೊದಲ ಬಾರಿಗೆ ನೋಡಿದ ನೆನಪು. ಚಿಕ್ಕ ಹೆಂಚಿನ ಮನೆ. ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳು. ಅನಾರೋಗ್ಯ ಪೀಡಿತ ಪತ್ನಿ. ಮನೆಯೊಳಗೆ ಬಡತನವೇ ಕಾಲುಮುರಿದು ಬಿದ್ದುಕೊಂಡಂತಹ ವಾತಾವರಣ.

ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿದ್ದ ಇಬ್ರಾಹೀಮ್ ತಣ್ಣೀರುಬಾವಿಗೆ ಚಿಕ್ಕಂದಿನಲ್ಲೇ ಸಾಹಿತ್ಯ, ಹಾಡು ಕೇಳುವ ಅಭಿರುಚಿ ಇತ್ತಂತೆ. 18 ವರ್ಷ ಪ್ರಾಯದಲ್ಲೇ ಹಾಡು ರಚಿಸಲು ಪ್ರಾರಂಭಿಸಿದ ಅವರು, ಹಲವಾರು ತುಳು ನಾಟಕಗಳಿಗೆ ಹಾಡು ಬರೆದು ಕೊಡುತ್ತಿದ್ದರಂತೆ. ಹಾಗೆಯೇ ಬೀಡಿಯ ಪ್ರಚಾರಕ್ಕೆ, ವೋಟಿನ ಪ್ರಚಾರಕ್ಕೆ ಅವರು ಬರೆದು ಕೊಟ್ಟ ಹಾಡಿಗೆ ಲೆಕ್ಕವಿಲ್ಲ. ವೋಟಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಪP್ಷÀದವರು ಹಾಡಿಗಾಗಿ ಇವರನ್ನು ಹುಡುಕಿಕೊಂಡು ಬರುತ್ತಿದ್ದರಂತೆ. ಮನೆಯಲ್ಲಿ ಅವರು ಇಲ್ಲದಾಗ, ಬಸ್ಸು ನಿಲ್ದಾಣದಲ್ಲೇನಾದರೂ ಸಿಕ್ಕಿದರೆ ಅಲ್ಲಿಯೇ ಕಿಸೆಯಲ್ಲಿದ್ದ ಬೀಡಿ ಕಟ್ಟಿನ ಲೇಬಲ್ ಬಿಡಿಸಿ ಅದರಲ್ಲೇ ಹಾಡು ಬರೆದು ಕೊಡುತ್ತಿದ್ದರಂತೆ. ನಂತರ ಇವರು ಜನರ ಒತ್ತಾಯಕ್ಕೆ ಮದುವೆ, ಮೆಹಂದಿ ಇನ್ನಿತರ ಕಾರ್ಯಕ್ರಮಗಳಿಗೆ ಹಾಡು ಬರೆದುಕೊಟ್ಟು ಬಹಳ ಪ್ರಸಿದ್ಧರಾಗಿದ್ದರು. ಹೀಗೆ ಇವರು 500ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. 60ಕ್ಕೂ ಹೆಚ್ಚು ತುಳು, ಬ್ಯಾರಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ‘ಮುನ್ನುಡಿ’ ಅಲ್ಲದೆ ಇನ್ನೂ ಒಂದು ಕನ್ನಡ ಸಿನೆಮಾ (ಹೆಸರು ನೆನಪಿಲ್ಲ)ದಲ್ಲಿ ಅಭಿನಯಿಸಿದ್ದಾರೆ. ಟೆಲಿ ಫಿಲಂಗಳನ್ನು ಬರೆದು, ನಿರ್ದೇಶಿಸಿ ಅಭಿನಯಿಸಿದ್ದಾರೆ.

ಇಬ್ರಾಹೀಮ್ ತಣ್ಣೀರುಬಾವಿ ಕಥೆ, ಕವನ, ಲೇಖನ, ಹಾಡುಗಳನ್ನು ರಚಿಸುತ್ತಿದ್ದುದು ಮಾತ್ರವಲ್ಲ, ಸ್ವತಃ ಗಾಯಕರೂ ಆಗಿದ್ದರು. ‘ನೀವು ಬರೆದಿದ್ದನ್ನೆಲ್ಲ ಕೊಡಿ, ಪುಸ್ತಕ ಮಾಡುವ’ ಎಂದು ಕೇಳಿದ್ದಕ್ಕೆ, ‘ನನ್ನಲ್ಲಿ ಯಾವುದೂ ಇಲ್ಲ, ಯಾವುದನ್ನೂ ನಾನು ಇಟ್ಟುಕೊಂಡಿಲ್ಲ’ ಎಂದಿದ್ದರು. ಸಂದೋಲ, ಮೆಹರ್ ದಪ್ಪು ಹಾಡು ಹೀಗೆ ಹತ್ತಕ್ಕೂ ಹೆಚ್ಚು ಆಡಿಯೋ ಕ್ಯಾಸೆಟ್‍ಗೆ ಇವರು ಸಾಹಿತ್ಯ ರಚಿಸಿದ್ದಾರೆ. ಇವರು ಬರೆದು, ನಿರ್ದೇಶಿಸಿದ ಹಲವಾರು ಬ್ಯಾರಿ ನಾಟಕದ ಆಡಿಯೋ ಕ್ಯಾಸೆಟ್‍ಗಳು ಬಹಳ ಜನಪ್ರಿಯವಾಗಿವೆ. ಹಾಗೆಯೇ ‘ಸಾವುಂಞಾಕರೊ ಸಾಲೆ’ ಎಂಬ ನಾಟಕವನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ.

ಇವರು ಬರೆದು, ನಿರ್ದೇಶಿಸಿದ ‘ಸಾವುಂಞಾಕರೊ ಸಾಲೆ’ ಬ್ಯಾರಿ ನಾಟಕವನ್ನು ನಾವು ಮೊದಲ ಬಾರಿಗೆ ಪ್ರದರ್ಶನ ಮಾಡಿದ್ದು ಬೆಂಗಳೂರಿನಲ್ಲಿ ನಡೆದ ಬ್ಯಾರಿ ಸಮ್ಮೇಳನದಲ್ಲಿ. ಅನಂತರ ಮಂಗಳೂರು ಪುರಭವನದಲ್ಲಿ. ಮತ್ತೆ ಚಿಕ್ಕಮಗಳೂರಿನಲ್ಲಿ ಸಹಿತ ಹಲವಾರು ಕಡೆ ಪ್ರದರ್ಶನ ಮಾಡಿದ್ದೆವು. ಬ್ಯಾರಿಗಳ ಶಿಕ್ಷಣದ ಬಗ್ಗೆ ಒಂದು ವಿಮರ್ಶಾತ್ಮಕ ಕಥೆ ಇರುವ ಈ ನಾಟಕ ವೀಕ್ಷಿಸಿ ಹೋದವರು ಬಹಳಷ್ಟು ಶಾಲೆಗಳಲ್ಲಿ ಸ್ಕೂಲ್‍ಡೇ ಸಂದರ್ಭದಲ್ಲಿ ಮಕ್ಕಳಿಂದ ಈ ನಾಟಕವನ್ನು ಆಡಿಸಿದ್ದಾರೆ. ನಂತರ ಈ ನಾಟಕದ ಆಡಿಯೋ, ವೀಡಿಯೋ ಕೂಡಾ ಬಂತು. ಅಷ್ಟೊಂದು ಜನಪ್ರಿಯವಾಗಿತ್ತು ಈ ನಾಟಕ. ಈಗಲೂ ಈ ನಾಟಕ ಅಲ್ಲಲ್ಲಿ ಪ್ರದರ್ಶನವಾಗುತ್ತಿದೆ.

ನಾಟಕ ಒಂದು ಬಹಳ ಪರಿಣಾಮಕಾರಿ ಮಾಧ್ಯಮ. ನಾಟಕದ ಮೂಲಕ ಸಮಾಜಕ್ಕೆ ಸಂದೇಶ ಕೊಡಲು, ಸಮಾಜವನ್ನು ಪರಿವರ್ತಿಸಲು ಸಾಧ್ಯ. ಆದರೆ ನಮ್ಮಲ್ಲಿ ಕೆಲವರು ಮನೆಯಲ್ಲಿ ಟಿ.ವಿ. ನೋಡುತ್ತಾರೆ. ಸಿನೆಮಾ, ಧಾರಾವಾಹಿ, ಕಾಮೆಡಿ ಶೋ ಎಲ್ಲ ನೋಡುತ್ತಾರೆ. ನಾಟಕ ಎಂದಾಗ ಮುಖ ಸಿಂಡರಿಸುತ್ತಾರೆ ಎನ್ನುವುದು ಇವರ ಅಳಲು. ಆದರೆ ‘ಸಾವುಂಞಾಕರೊ ಸಾಲೆ’ ನಾಟಕ ಪ್ರದರ್ಶನದ ಬಳಿಕ ಬಹಳಷ್ಟು ಬ್ಯಾರಿ ನಾಟಕಗಳು ಅಲ್ಲಲ್ಲಿ ಪ್ರದರ್ಶನವಾಗುತ್ತಿವೆ. ಬ್ಯಾರಿಗಳು ಅದಕ್ಕೆ ಪ್ರೋತ್ಸಾಹ ನೀಡುವಂತಹ ವಾತಾವರಣ ಕಂಡುಬಂತು ಎಂದು ಅವರು ಹೇಳುತ್ತಿದ್ದರು.

ಮಂಗಳೂರು ಪುರಭವನದಲ್ಲಿ ನಡೆದ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಇವರು ನಿರ್ದೇಶಿಸಿದ ‘ನೆನಲ್ ಕಲಿ’ ಎಂಬ ಒಂದು ಸಾಂಸ್ಕೃತಿಕ ಕಾರ್ಯಕ್ರಮ ನೋಡಿದ ಪ್ರೇಕ್ಷಕರೆಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ವೇದಿಕೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲದೆ, ಪರದೆಯ ಮೇಲೆ ನೆರಳಿನ ಮೂಲಕ ನಟರು, ದೋಣಿ, ನೀರು, ಮರ-ಗಿಡ ಎಲ್ಲವನ್ನೂ ‘ನಾನೊರು ಮುಸ್ಲಿಮ್ ಚೆನ್ನೆಂಗ್ ಪೋರ’ ಎಂಬ ಅವರೇ ಬರೆದ ಒಂದು ಹಾಡಿನ ಮೂಲಕ ಪ್ರದರ್ಶಿಸಿದ ಅವರ ಪ್ರತಿಭೆ ಬಹುಶಃ ಬ್ಯಾರಿಗಳಲ್ಲಿ ಇಂದಿಗೂ ಯಾರಲ್ಲೂ ಇ¯್ಲÁಂತ ಹೇಳಬಹುದು.

ಇಬ್ರಾಹೀಮ್ ತಣ್ಣೀರುಬಾವಿ ಓರ್ವ ಭಾವ ಜೀವಿ. ಅವರು ನಮ್ಮೊಡನೆ ಮಾತನಾಡುವಾಗ ಅವರ ತುಟಿಗಳು ಮಾತ್ರ ಮಾತನಾಡುತ್ತಿರಲಿಲ್ಲ. ಅವರ ಕಣ್ಣು, ಮುಖ, ಕೈ, ಇಡೀ ದೇಹವೇ ನಮ್ಮೊಡನೆ ಮಾತಾಡುತ್ತಿತ್ತು. ಅಷ್ಟೊಂದು ಆತ್ಮೀಯತೆ, ಅಷ್ಟೊಂದು ಪ್ರೀತಿ, ಅಷ್ಟೊಂದು ಮುಗ್ಧತೆ, ಜೇನಿನಂತಹ ಸಿಹಿ ಅವರ ಮಾತಿನಲ್ಲಿ. ಅವರ ಮೇಲೆ ಯಾರಿಗೂ ಕೋಪ, ಹಗೆತನವಿಲ್ಲ. ಅವರನ್ನಾಗಲಿ, ಅವರ ಸಾಹಿತ್ಯವನ್ನಾಗಲಿ ಟೀಕಿಸಿದವರನ್ನು ನಾನು ಈತನಕ ಕಂಡಿಲ್ಲ. ಬಹಳಷ್ಟು ಬಡತನ, ಹೃದಯ ಸಂಬಂಧಿ ಕಾಯಿಲೆಯಿಂದ ತುಂಬಾ ಕಷ್ಟದಲ್ಲಿದ್ದರೂ ಅವರ ಪ್ರತಿಯೊಂದು ಮಾತಿನಲ್ಲೂ ಹಾಸ್ಯ ತುಂಬಿರುತ್ತಿತ್ತು. ವಿವೇಕ, ಸಂದೇಶ, ಬುದ್ಧಿವಾದ ಇರುತ್ತಿತ್ತು. ಇಬ್ರಾಹೀಮ್ ಎಂದೂ ತನ್ನನ್ನು ತಾನು ಹೊಗಳಿಕೊಂಡವರಲ್ಲ. ತನ್ನ ಹೆಸರಿನ ಮುಂದೆ ಕವಿ, ಸಾಹಿತಿ ಎಂದು ಬರೆದುಕೊಂಡವರಲ್ಲ. ಸಾಹಿತಿ ಎಂದು ಗುರುತಿಸಿಕೊಳ್ಳುವುದೆಂದರೆ ಅವರಿಗೆ ಒಂಥರಾ ಮುಜುಗರ.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಎಂದು ನಾವು ಅವರನ್ನು ಆಹ್ವಾನಿಸಿದರೆ ‘ನಾನು ಬೇಡ. ನಾನು ಅಷ್ಟು ದೊಡ್ಡ ವ್ಯಕ್ತಿ ಅಲ್ಲ. ನೀವು ಬೇರೆ ಯಾರನ್ನಾದರೂ ಕರೆಯಿರಿ’ ಎಂದು ಸೌಜನ್ಯದಿಂದ ಹೇಳುತ್ತಿದ್ದರು. ಒತ್ತಾಯಿಸಿದರೆ, ‘ನಾನು ಒಂದು ಕವನ ವಾಚಿಸುತ್ತೇನೆ ಆಯಿತಾ’ ಎಂದು ನಮ್ಮನ್ನು ಸಮಾಧಾನಪಡಿಸುತ್ತಿದ್ದರು. ಸಾಮಾನ್ಯವಾಗಿ ಹೆಚ್ಚಿನ ಕವಿಗಳು ಕವನ ವಾಚಿಸಿ ವೇದಿಕೆಯಿಂದ ಇಳಿದು ಬಂದ ನಂತರ ಪರಿಚಿತರು, ಗೆಳೆಯರೊಡನೆ, ‘ನನ್ನ ಕವನ ಹೇಗಿತ್ತು? ಚೆನ್ನಾಗಿತ್ತಲ್ವಾ’ ಎಂದು ಕೇಳುವುದನ್ನು ನಾವು ನೋಡಿದ್ದೇವೆ. ಆದರೆ ಇವರು ಕವನ ವಾಚಿಸಿ ಕೆಳಗೆ ಬಂದು ಅವರ ಕವನವನ್ನು ಅವರೇ ಹಾಸ್ಯ ಮಾಡುತ್ತಿದ್ದರು. ಕೀಳು ಮಾಡುತ್ತಿದ್ದರು. ಹೊಗಳಲು ಯಾರಿಗೂ ಅವಕಾಶ ನೀಡುತ್ತಿರಲಿಲ್ಲ. ಅವರು, ಅವರ ಕವನ, ಹಾಡು, ಸಾಹಿತ್ಯವನ್ನು ಹೊಗಳುವುದನ್ನು ಯಾವತ್ತೂ ಇಷ್ಟಪಡುತ್ತಿರಲಿಲ್ಲ.

ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಬೇಕು ಎಂದು ಅವರನ್ನು ಕೇಳಿಕೊಂಡಾಗ ಅವರು ಒಪ್ಪಿರಲಿಲ್ಲ. ನಂತರ ಅವರು ಸಂಘ ಸ್ಥಾಪನೆಯಿಂದ ಕೊನೆಯ ತನಕ ಉಪಾಧ್ಯಕ್ಷರಾಗಿದ್ದರು. ಪ್ರಯಾಣಕ್ಕೆ ದುಡ್ಡಿಲ್ಲದಿದ್ದರೆ ಯಾರಿಂದಲಾದರೂ ಸಾಲ ಮಾಡಿ ಪ್ರತಿ ಮೀಟಿಂಗ್‍ಗೂ ತಪ್ಪದೆ ಹಾಜರಾಗುತ್ತಿದ್ದರು. ಸಮಾಜಕ್ಕೆ ಸಂದೇಶ ನೀಡುವಂತಹ ಸಲಹೆ, ಸೂಚನೆ, ಮಾರ್ಗದರ್ಶನ ಮಾಡುತ್ತಿದ್ದರು. ಸಂಘಟನೆಯ ಮೂಲಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಲು ಪ್ರೇರಣೆ ನೀಡುತ್ತಿದ್ದರು. 1998ರಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆದ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮವನ್ನು ನಾವು ಇಬ್ರಾಹೀಮ್ ತಣ್ಣೀರುಬಾವಿಯ ಸಲಹೆಯಂತೆ ಆಯೋಜಿಸುತ್ತಿದ್ದೆವು.

ಅವರ ಮನಸ್ಸಲ್ಲಿ ‘ನಾನು’ ಎಂಬ ಅಹಂ ಇರಲಿಲ್ಲ. ಬಡತನ, ಕಷ್ಟ ಇದ್ದರೂ ಅದನ್ನು ಯಾರೊಡನೆಯೂ ಹೇಳಿಕೊಳ್ಳುತ್ತಿರಲಿಲ್ಲ. ತೋರಿಸುತ್ತಿರಲಿಲ್ಲ. ಯಾವಾಗಲೂ ಹಾಸ್ಯ ಚಟಾಕಿ ಹಾರಿಸುತ್ತಾ, ನಗುತ್ತಾ ಎಲ್ಲರನ್ನೂ ನಗಿಸುತ್ತಾ ಇದ್ದರು. ಆ ನಗು, ಹಾಸ್ಯದ¯್ಲÉೀ ಸಂದೇಶವನ್ನು ಕೊಡುತ್ತಾ ಎಲ್ಲರನ್ನೂ ಚಿಂತನೆಗೆ ದೂಡುತ್ತಿದ್ದರು.

ಅವರ ಪ್ರತಿಭೆಯನ್ನು ಗುರುತಿಸಿ ಹಲವಾರು ತುಳು ಸಂಘಟನೆಗಳು ಅವರನ್ನು ಸನ್ಮಾನ ಮಾಡಿ ಪುರಸ್ಕರಿಸಿವೆ. ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಅವರು ಬೇಡ ಎಂದರೂ ಒತ್ತಾಯಪೂರ್ವಕವಾಗಿ ಅವರನ್ನು ಸನ್ಮಾನಿಸಿದ್ದೆವು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2008ರಲ್ಲಿ ಅವರಿಗೆ ಗೌರವ ಪ್ರಶಸ್ತಿ, ದ.ಕ. ಜಿಲ್ಲಾ ಕಸಾಪ 2014ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಬಡತನ, ಮದುವೆ, ಮಹಿಳೆಯ ಶೋಷಣೆ, ದೌರ್ಜನ್ಯ, ವರದಕ್ಷಿಣೆ, ಹಿಂಸೆ, ಸೌಹಾರ್ದ, ದಾಂಪತ್ಯ, ದೇಶಪ್ರೇಮ, ಧರ್ಮ, ಈ ಜಗತ್ತು, ರೋಗ-ರುಜಿನ, ತಂದೆ-ತಾಯಿ, ಮಕ್ಕಳು, ರಾಜಕೀಯ, ಸಾಮಾಜಿಕ ಹೀಗೆ ಮಾನವ ಬದುಕಿನ ಎಲ್ಲ ರಂಗವನ್ನೂ ಅವರು ತಮ್ಮ ಲೇಖನಿಯ ಮೂಲಕ ಬಿಡಿಸಿಟ್ಟಿದ್ದಾರೆ. ವಿಮರ್ಶಿಸಿದ್ದಾರೆ. ಮನಸ್ಸನ್ನು ತಟ್ಟಿ ಬಡಿದೆಬ್ಬಿಸುವಂತಹ, ಚಿಂತನೆಗೆ ಹಚ್ಚುವಂತಹ ಇವರ ಕವನಗಳಲ್ಲಿ ಮನುಷ್ಯನ ನೋವು ಅಸಹಾಯಕತೆಯ ಜೊತೆಗೆ ಕಂಡೂ ಕಾಣದಂತಹ ಒಂದು ಹಾಸ್ಯ ನೆರಳಿನಂತೆ ತೆಳುವಾಗಿ ಹಾದು ಮಾಯವಾಗುವುದನ್ನು ನಾವು ಕಾಣಬಹುದು. ಆ ಹಾಸ್ಯವೇ ನಮ್ಮೆಲ್ಲರ ಮರಣವಾಗಿರಬಹುದೇ? ಎಂಬುದು ನನ್ನ ಶಂಕೆ.

ಒಳ್ಳೆಯ ಮನಸ್ಸಿನ, ಉತ್ತಮ ಗುಣ ನಡತೆಯ, ವೈಚಾರಿಕ ಸಾಹಿತ್ಯದ ಮೂಲಕ ನಮಗೆಲ್ಲರಿಗೂ ಉಪದೇಶ ನೀಡುತ್ತಿದ್ದ, ಸಮಾಜ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಪ್ರೇರಣೆ, ಮಾರ್ಗದರ್ಶನ ಮಾಡುತ್ತಿದ್ದ ನಮ್ಮೆಲ್ಲರ ಪ್ರೀತಿಯ ಇಬ್ರಾಹೀಮ್ ತಣ್ಣೀರುಬಾವಿ ಈಗ ನಮ್ಮ ಜೊತೆ ಇಲ್ಲ. ಆದರೆ ಅವರು ಬಿಟ್ಟು ಹೋದ ಸಾಹಿತ್ಯ ನಮ್ಮಲ್ಲಿ ಇದೆ. ಅದನ್ನು ಎಲ್ಲರಿಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.