ಕುಟುಂಬ ಸಂಬಂಧಗಳ ದೌರ್ಬಲ್ಯತೆಗೆ ಕಾರಣವೇನು?

0
2048

ಖದೀಜ ನುಸ್ರತ್, ಅಬು ಧಾಬಿ

ಮಾನವನು ಸಮೂಹಜೀವಿ. ಒಂಟಿ ಜೀವನವು ನೆಮ್ಮದಿಯನ್ನು ನೀಡಲಾರದು. ತಂದೆ, ತಾಯಿ, ಸಹೋದರಿ, ಸಹೋದರಿ, ತಂದೆ ತಾಯಿಯ ಸಹೋದರ ಸಹೋದರಿಯರು, ಅತ್ತೆ, ಮಾವ, ನಾದಿನಿ ಹಾಗೂ ಇತರರೊಂದಿಗೆ ನಾವು ರಕ್ತ ಅಥವಾ ವಿವಾಹದ ಮೂಲಕ ಸಂಬಂಧವನ್ನು ಹೊಂದಿರುತ್ತೇವೆ. ನಾವು ಯಾವ ಕುಟುಂಬದಲ್ಲಿ ಹುಟ್ಟಬೇಕು ಮತ್ತು ಜೀವಿಸಬೇಕೆಂಬುದು ಅಲ್ಲಾಹನ ಆಯ್ಕೆಯಾಗಿರುತ್ತದೆ. ಏನಿದ್ದರೂ ನಾವೆಲ್ಲರೂ ಆದಮ್(ಅ) ರ ಸಂತತಿಗಳಾಗಿದ್ದೇವೆ.

ಕುಟುಂಬದ ಸದಸ್ಯರ ನಡುವಿನ ಪ್ರೀತಿ, ಮಮತೆ, ಸಹಕಾರ, ಐಕ್ಯತೆ, ನಿಕಟತೆ ಇತ್ಯಾದಿಗಳು ಮಾನವನಿಗೆ ಮಾನಸಿಕವಾಗಿ ರಕ್ಷಣೆಯನ್ನು ನೀಡುತ್ತದೆ. ಹಲವಾರು ಸಂಬಂಧಗಳೊಂದಿಗಿನ ಪರಸ್ಪರ ಹೊಂದಾಣಿಕೆಯೇ ಉತ್ತಮ ಕುಟುಂಬದ ಬುನಾದಿಯಾಗಿದೆ. ಬೇರೆ ಬೇರೆ ರೀತಿಯ ಸ್ವಭಾವ, ಆಸಕ್ತಿ, ಅಭಿರುಚಿ, ಪ್ರತಿಭೆ, ಜ್ಞಾನ, ಸಂಪತ್ತು, ಆಲೋಚನೆಗಳಿರುವ ವ್ಯಕ್ತಿಗಳು ನಮ್ಮ ಕುಟುಂಬದಲ್ಲಿರಬಹುದು. ಕೆಲವೊಮ್ಮೆ ನಮ್ಮ ಕುಟುಂಬದವರಿಗಾಗಿ ಕಷ್ಟ, ಸಹನೆ, ತ್ಯಾಗವನ್ನು ಮಾಡಬೇಕಾಗಬಹುದು. ನಾವು ಎಷ್ಟೇ ಉತ್ತಮರಾಗಿದ್ದರೂ ನಮ್ಮೊಂದಿಗೆ ಕಠೋರತೆ, ಒರಟಾಗಿಯೇ ವರ್ತಿಸುವವರು, ಚುಚ್ಚು ಮಾತಿನಿಂದ ನೋವಿಸುವವರು ಅಥವಾ ನಿರ್ಲಕ್ಷಿಸುವವರು ಇರಬಹುದು. ನಾವು ಉತ್ತಮ ಕೆಲಸ ಮಾಡಿದಾಗಲೂ ಅದನ್ನು ಕೆಟ್ಟದಾಗಿ ಕಾಣುವವರು ಕೂಡಾ ಇರಬಹುದು. ಇಂತಹ ಎಲ್ಲ ಸಂದರ್ಭಗಳಲ್ಲಿ ಸಕಾರಾತ್ಮಕಾವಾಗಿಯೇ ವರ್ತಿಸುವುದು ನಮ್ಮ ಯಶಸ್ಸಾಗಿರುತ್ತದೆ.

“ಸತ್ಯವಿಶ್ವಾಸಿಗಳಂತು ಪರಸ್ಪರ ಸಹೋದರರು. ಆದುದರಿಂದ ನಿಮ್ಮ ಸಹೋದರರ ನಡುವೆ ಸಂಬಂಧಗಳನ್ನು ಸರಿಪಡಿಸಿರಿ.” (ಅಲ್‌ ಹುಜುರಾತ್ :10)

ಸಂಬಂಧಿಕರನ್ನು ಭೇಟಿಯಾಗುವುದು, ವಿವಾಹ, ರೋಗ ಅಥವಾ ಇನ್ನಾವುದೇ ಸುಖ ದುಃಖದಲ್ಲಿ ಅವರೊಂದಿಗೆ ಸಮಯ ಕಳೆಯುತ್ತಾ ಭಾಗಿಯಾಗುವುದರಿಂದ ಸಂಬಂಧವು ದೃಢವಾಗುವುದು. ಸಾಂದರ್ಭಿಕವಾಗಿ ಸಣ್ಣ ಸಣ್ಣ ಉಡುಗೊರೆ ನೀಡುವುದು ಉತ್ತಮವಾಗಿದೆ. ಉಡುಗೊರೆಗಳಿಗೆ ಪ್ರತಿ ಉಡುಗೊರೆ ನೀಡಿರಿ. ಯಾರಾದರೂ ನೀಡಿದ ಉಡುಗೊರೆಯನ್ನು ತುಚ್ಛವಾಗಿ ಕಾಣಬೇಡಿರಿ. ಕುಟುಂಬದಲ್ಲಿ ಯಾರಿಂದಲೂ ಉಡುಗೊರೆ ಅಥವಾ ಒಳಿತನ್ನು ನಿರೀಕ್ಷಿಸಬೇಡಿರಿ. ಉಡುಗೊರೆ ನೀಡುವುದು ಕಡ್ಡಾಯವಲ್ಲ. ವಿವಾಹ ಅಥವಾ ಇನ್ನಿತರ ಸಂದರ್ಭಗಳಲ್ಲಿ ನೀಡುವಂತಹ ಉಡುಗೊರೆಗಳು ಕೆಲವರಿಗೆ ಆರ್ಥಿಕ ಭಾರವಾಗುತ್ತಿದೆ. ಸಾಲ ಮಾಡಿಯಾದರೂ ಉಡುಗೊರೆ ನೀಡುವವರಿದ್ದಾರೆ. ಉತ್ತಮ ಸಂಬಂಧಿಕರು ನಮ್ಮಿಂದ ಉತ್ತಮ ಮಾತನ್ನು ನಿರೀಕ್ಷಿಸುತ್ತಾರೆ. ನಾವು ಆಡುವ ಉತ್ತಮ ಮಾತು ಮತ್ತು ನಗು ಅತ್ಯುತ್ತಮ ಉಡುಗೊರೆಯಾಗಿರುತ್ತದೆ. ಕೆಲವು ಕುಟುಂಬಗಳಲ್ಲಿ ಸ್ತ್ರೀಯರು ತಮ್ಮ ಮಾತು ಮತ್ತು ಧಾರ್ಮಿಕ ಕರ್ಮಗಳ ಫಲವಾಗಿ ತಮ್ಮ ಕುಟುಂಬಗಳಲ್ಲಿ ಅತ್ಯುತ್ತಮ ಬದಲಾವಣೆಗಳನ್ನು ಉಂಟುಮಾಡಿದ ಅನೇಕ ಉದಾಹರಣೆಗಳು ಕೂಡಾ ಇದೆ.

ಕುಟುಂಬದಲ್ಲಿ ಇತರರಲ್ಲಿರುವ ಯಾವುದೇ ಅನುಗ್ರಹ, ಸಂಪತ್ತು, ಒಳಿತುಗಳಿಗಾಗಿ ಅಸೂಯೆ ಪಡಬೇಡಿರಿ. ನಮ್ಮ ಸಂಬಂಧಿಕರು ಸುಸ್ಥಿತಿಯಲ್ಲಿದ್ದರೆ ಮಾತ್ರ ನಮಗೂ ಸಂತೋಷದಿಂದ ಜೀವಿಸಬಹುದು. ಕುಟುಂಬದಲ್ಲಿ ಯಾರಿಗೂ ಕೆಡುಕನ್ನು ಬಯಸಬೇಡಿರಿ. ನಮ್ಮ ಮನಸ್ಸಿನಲ್ಲಿರುವ ದುರ್ಭಾವನೆಗಳನ್ನು ಅಲ್ಲಾಹನು ಅರಿಯುತ್ತಾನೆ. ಇತರರಿಗೆ ಹಿತ ಮತ್ತು ಒಳಿತಾಗುವಂತಹ ಉಪದೇಶವನ್ನು ಮಾತ್ರ ನೀಡಿರಿ. ನಮ್ಮ ಸಂಬಂಧಿಕರು ಇಹಲೋಕ ಜೀವನದ ಪ್ರತಿಸ್ಪರ್ಧಿ ಅಲ್ಲ ಎಂಬುದು ನೆನಪಿನಲ್ಲಿರಬೇಕು.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು: “ನನ್ನ ಆತ್ಮ ಯಾರ ಹಸ್ತದಲ್ಲಿದೆಯೋ ಆತನಾಣೆ! ಓರ್ವನು ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ಸತ್ಯವಿಶ್ವಾಸಿಯಾಗುವುದಿಲ್ಲ.”

ಕುಟುಂಬದಲ್ಲಿ ಐಕ್ಯತೆಯಿಂದ ಜೀವಿಸಬೇಕಾಗಿದ್ದ ಸದಸ್ಯರಲ್ಲಿ ದುರದೃಷ್ಟವಶಾತ್ ಪೈಪೋಟಿ, ದ್ವೇಷ, ಅಸೂಯೆ ಗಳು ಕಂಡು ಬರುತ್ತಿದೆ. ಅದಕ್ಕೆ ಮುಖ್ಯ ಕಾರಣಗಳು ಸ್ತ್ರೀಯರಲ್ಲಿ ಕಂಡು ಬರುವ ಅಧಿಕಾರ ಮೋಹ. ಮನೆಯಲ್ಲಿ ಎಲ್ಲರೂ ತನ್ನನ್ನು ಗೌರವಿಸಬೇಕು, ತನಗೆ ಕುಟುಂಬದಲ್ಲಿ ವಿಶಿಷ್ಟ ಸ್ಥಾನಮಾನವಿರಬೇಕೆಂಬ ಬಯಕೆ. ಕುಟುಂಬದ ಎಲ್ಲಾ ವಿಷಯ, ಆಗು ಹೋಗುಗಳನ್ನು ಸಮಯಕ್ಕೆ ಸರಿಯಾಗಿ ನನಗೆ ತಿಳಿಸಬೇಕೆಂದು ಭಾವಿಸಬೇಡಿರಿ. ನನಗೆ ತಿಳಿಸಲೇ ಇಲ್ಲ, ನನ್ನ ಅನುಮತಿಯಿಲ್ಲದೇ ಆ ಕೆಲಸ ಮಾಡಿದರೆಂದು ಜಗಳಾಡಬೇಡಿರಿ. ಎಲ್ಲರನ್ನೂ ನಿಯಂತ್ರಿಸುವುದು ನನ್ನ ಕೆಲಸವಲ್ಲ. ಎಲ್ಲರಿಗೂ ಬೇರೆ ಬೇರೆ ರೀತಿಯ ಜವಾಬ್ದಾರಿಗಳಿರುತ್ತದೆ. ನಾನು ಯಾರು ಎಂಬುದನ್ನು ಮಾತಿನಲ್ಲಿ ಸಾಭೀತುಪಡಿಸಲು ಪ್ರಯತ್ನಿಸಬೇಡಿರಿ. ನಮ್ಮಲ್ಲಿರುವ ಒಳಿತುಗಳಿಗೆ ನಮ್ಮ ಮಾತು ಮತ್ತು ಕರ್ಮವು ಸಾಕ್ಷಿಯಾಗಲಿ. ಜನರೊಂದಿಗೆ ಉತ್ತಮವಾಗಿ ವರ್ತಿಸುವವರನ್ನು, ಎಲ್ಲರ ಹಕ್ಕುಬಾಧ್ಯತೆಗಳನ್ನು ನೀಡುವವರನ್ನು ಎಲ್ಲರೂ ಪ್ರೀತಿಸುವರು, ಗೌರವಿಸುವರು.

“ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು.” (ಅಲ್‌ ಹುಜುರಾತ್ :13)

ಕುಟುಂಬದಲ್ಲಿ ಇನ್ನೊಬ್ಬರ ಬಗ್ಗೆ ಅತಿಯಾಗಿ ಚಿಂತಿಸಬೇಡಿರಿ. ಅವರು ಮಾಡುವುದಿಲ್ಲ, ಕೊಡುವುದಿಲ್ಲ, ಹೇಳುವುದಿಲ್ಲ, ಕರೆಯುವುದಿಲ್ಲ, ಮಾತಾಡುವುದಿಲ್ಲ, ಅವರು ತಂದೆತಾಯಿಯನ್ನು ನೋಡುವುದಿಲ್ಲ….. ಹೀಗೆ ಇನ್ನೊಬ್ಬರನ್ನು ದೂರುವುದಕ್ಕಿಂತ ನಾನೆಷ್ಟು ಮಾಡುತ್ತೇನೆ, ನಾನೆಷ್ಟು ಕೊಡುತ್ತೇನೆ, ನಾನೆಷ್ಟು ತಂದೆತಾಯಿಯ ಸೇವೆ ಮಾಡುತ್ತೇನೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿದರೆ ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಬಹುದು.

“ಸತ್ಯವಿಶ್ವಾಸಿಗಳೇ, ನೀವು ಮಾಡದ್ದನ್ನು ಆಡುತ್ತೀರೇಕೆ?

ಮಾಡದ್ದನ್ನು ಆಡುವುದು ಅಲ್ಲಾಹನ ಬಳಿ ಅತ್ಯಂತ ಅಪ್ರಿಯ ಕೃತ್ಯವಾಗಿದೆ.” (ಅಸ್ಸಫ್ಫ್ 2-3)

ಇಲ್ಲಿ ಯಾರು ಎಂತಹ ವಸ್ತ್ರ ಧರಿಸುತ್ತಾರೆ, ಏನು ತಿನ್ನುತ್ತಾರೆ, ಎಂತಹ ಮನೆಯಲ್ಲಿ ಮನೆಯಲ್ಲಿ ವಾಸಿಸುತ್ತಾರೆ, ಯಾರು ರುಚಿಯಾದ ಅಡುಗೆ ಮಾಡುತ್ತಾರೆ, ಯಾರು ಹೆಚ್ಚು ವಿದ್ಯಾವಂತರು, ಯಾರ ಬಳಿ ಎಷ್ಟು ಚಿನ್ನ, ಹಣ, ಸಂಪತ್ತಿದೆ ಎಂಬುದು ಮಹತ್ವದ ವಿಷಯವಲ್ಲ. ಎಲ್ಲರೂ ಪರಸ್ಪರ ಗೌರವಿಸುತ್ತಾ, ಹಕ್ಕು ಬಾಧ್ಯತೆಗಳನ್ನು ಪೂರೈಸುತ್ತಾ, ತಮ್ಮ ಮಾತು ಕೃತಿಯಿಂದ ಯಾರ ಮನಸ್ಸನ್ನೂ ನೋವಿಸದೆ, ದ್ವೇಷಿಸದೆ, ಹಗೆತನವಿರಿಸದೆ, ಯಾರನ್ನು ಅವಮಾನಿಸದೆ, ನಿಂದಿಸದೆ ಜೀವಿಸಬೇಕು ಮತ್ತು ಇನ್ನೊಬ್ಬರನ್ನು ನೆಮ್ಮದಿಯಿಂದ ಜೀವಿಸಲು ಬಿಡಬೇಕು. ಯಾರಿಂದಾದರೂ ಅನ್ಯಾಯವಾಗಿದ್ದರೆ, ಕಹಿ ಘಟನೆಗಳು ಸಂಭವಿಸಿದ್ದರೆ ಅದನ್ನು ಮರೆತುಬಿಡಬೇಕು. ಇನ್ನೊಬ್ಬರು ಮಾಡಿದಂತಹ ಉಪಕಾರವನ್ನು ನೆನಪಿನಲ್ಲಿಡಬೇಕು. ಕೆಲವೇ ದಿನಗಳ ಜೀವನವಿದು. ನಾವು ಜೀವಂತವಿರುವಾಗಲೂ ಮರಣ ಹೊಂದಿದಾಗಲೂ ಜನರು ನಮ್ಮ ಸಚ್ಚಾರಿತ್ರ್ಯ, ಉತ್ತಮ ನಡೆ-ನುಡಿಯನ್ನು ನೆನಪಿಡುತ್ತಾರೆ ಹೊರತು ನಮ್ಮ ಸಂಪತ್ತು, ಸ್ಥಾನಮಾನವನ್ನು ಯಾರೂ ನೆನಪಿಡುವುದಿಲ್ಲ.

ನಾವೆಷ್ಟೇ ಒಳಿತುಗಳನ್ನು ಮಾಡಿದರೂ ನಮ್ಮೊಂದಿಗೆ ಕೆಡುಕಾಗಿಯೇ ವರ್ತಿಸುವವರು ಇರುತ್ತಾರೆ. ಅಂತಹ ಸಂದರ್ಭಗಳಲ್ಲಿ ನಮ್ಮ ಜೀವನದ ಸಂತೋಷವು ನನ್ನೊಂದಿಗೆ ಇತರರು ಯಾವ ರೀತಿ ವರ್ತಿಸುತ್ತಾರೆಂಬುದನ್ನು ಅವಲಂಬಿಸಿರುವುದಿಲ್ಲ. ಯಾರಾದರೂ ನಮ್ಮ ಮನಸ್ಸನ್ನು ನೋವಿಸಿದರೂ, ನಮ್ಮನ್ನು ದ್ವೇಷಿಸಿದರೂ ಕಡೆಗಣಿಸಬೇಕು. ಹಣವಿದ್ದರೂ, ಇಲ್ಲದಿದ್ದರೂ, ಒಂಟಿಯಾಗಿದ್ದರೂ, ಜತೆಯಾಗಿದ್ದರೂ ಸಂತೋಷದಲ್ಲಿರಬೇಕು. ನನ್ನ ಸಂತೋಷ ಹಾಗು ದುಃಖವನ್ನು ತೀರ್ಮಾನಿಸುವುದು ನನ್ನ ಮನಸ್ಸಿನಲ್ಲಿರುವ ಭಾವನೆಗಳಾಗಿರುತ್ತದೆ.

Think positive, be positive….