“ಸಚಿನ್ ಪೈಲಟ್‌‌ರನ್ನು ಸಿಎಂ ಮಾಡಿ”: ಭಾರತ್ ಜೋಡೋ ವಿರುದ್ಧ ನಿಂತ ಗುರ್ಜರ್ ಸಮುದಾಯ

0
150

ಸನ್ಮಾರ್ಗ ವಾರ್ತೆ

ಜೈಪುರ: ಸಚಿನ್ ಪೈಲಟ್ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪಿಕೊಳ್ಳದಿದ್ದರೆ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜಸ್ಥಾನಕ್ಕೆ ಬಂದರೆ ಸಹಕಾರ ನೀಡುವುದಿಲ್ಲ ಎಂದು ಗುರ್ಜರ್ ಸಮುದಾಯದ ಮುಖಂಡ ವಿಜಯಸಿಂಗ್ ಬೈಂಸ್ಲಾ ಹೇಳಿದ್ದಾರೆ. ಸಮುದಾಯಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಇತರ ಸಮಸ್ಯೆಗಳಿಗೆ ಪಕ್ಷವು ಸಹಾನುಭೂತಿ ತೋರದ ಹೊರತು ಭಾರತ್ ಜೋಡೋ ಯಾತ್ರೆಗೆ ಸಹಕಾರ ಕೊಡಬೇಡಿ ಮತ್ತು ಯಾತ್ರೆಯನ್ನು ತಡೆಯಿರಿ ಎಂದು ಗುರ್ಜರ್ ಆರಕ್ಷಣ ಸಂಘರ್ಷ ಸಮಿತಿಯ ನಾಯಕರಿಗೆ ಅವರು ಕರೆ ನೀಡಿದರು.

ಈಗಿನ ಸರಕಾರ ರಾಜ್ಯದಲ್ಲಿ ನಾಲ್ಕು ವರ್ಷ ಪೂರ್ತಿಯಾಗಿಸಿದೆ. ಉಳಿದ ಒಂದು ವರ್ಷ ಮುಖ್ಯಮಂತ್ರಿ ಸ್ಥಾನಕ್ಕೆ ಸಚಿನ್ ಪೈಲಟ್‍ರನ್ನು ನೇಮಿಸಬೇಕು. ಇದಕ್ಕೆ ರಾಹುಲ್ ಗಾಂಧಿ ತಯಾರಾಗಬೇಕು. ಹೀಗಾದರೆ ಅವರ ಯಾತ್ರೆಯನ್ನು ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ವಿರೋಧಿಸುತ್ತೇವೆ ಎಂದು ಅವರು ಹೇಳಿದರು.

ಸಚಿನ್ ಪೈಲಟ್ ಗುರ್ಜರ್ ಸಮುದಾಯದವರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗುರ್ಜರ್ ಸಮುದಾಯದ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‍ಗೆ ವೋಟು ಹಾಕಿತ್ತು. ಆದರೆ ಸಚಿನ್ ಶಾಸಕರಾದರು. ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ನಮಗೆ ಗುರ್ಜರ್ ಸಮುದಾಯದ ಒಬ್ಬ ಮುಖ್ಯಮಂತ್ರಿ ಬೇಕು ಎಂದು ಬೈಂಸ್ಲಾ ಹೇಳಿದರು. ರಾಹುಲ್ ರಾಜಸ್ಥಾನಕ್ಕೆ ಬಂದಾಗ ನಮ್ಮ ಸಮುದಾಯಕ್ಕೆ ಒಂದೋ ಮುಖ್ಯಮಂತ್ರಿಯನ್ನು ಕೊಡಬೇಕು. ಇಲ್ಲದಿದ್ದರೆ ಗುರ್ಜರ್‌ ಸಮುದಾಯಕ್ಕೆ ಉತ್ತರ ನೀಡಬೇಕೆಂದು ಅವರು ಹೇಳಿದರು. ಡಿಸೆಂಬರ್ 3ರಂದು ರಾಹುಲ್‍ರ ಭಾರತ್ ಜೋಡೊ ಯಾತ್ರೆ ರಾಜಸ್ಥಾನ ಪ್ರವೇಶಿಸಲಿದೆ.