ಸನ್ಮಾರ್ಗ ವಾರ್ತೆ
ಬೆಂಗಳೂರು: ಜಾತಿ ತಾರತಮ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಇಬ್ಬರು ಪ್ರಾಧ್ಯಾಪಕರನ್ನು ಬೆಂಗಳೂರು ಐಐಎಂ ಮಂಡಳಿಯ ಸದಸ್ಯ ಚುನಾವಣೆಗೆ ಮೂವರು ಅಭ್ಯರ್ಥಿಗಳ ಸಮಿತಿಗೆ ಸೇರಿಸಿರುವುದು ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ದಲಿತ ಅಧ್ಯಾಪಕನ ವಿರುದ್ಧ ಜಾತಿ ತಾರತಮ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಐಐಎಂ ಬೆಂಗಳೂರು ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್, ಗ್ಲೋಬಲ್ ಐಐಎಂ ಅಲುಮ್ನಿ ನೆಟ್ವರ್ಕ್ ತ್ರಿಸದಸ್ಯ ಸಮಿತಿಗೆ ಇತರ ಇಬ್ಬರು ಆರೋಪಿಗಳನ್ನು ನಾಮನಿರ್ದೇಶನ ಮಾಡಿರುವುದು ಪ್ರತಿಭಟನೆಗೆ ಕಾರಣವಾಗಿದೆ.
ಅಸೋಸಿಯೇಟ್ ಪ್ರೊಫೆಸರ್ ಗೋಪಾಲ್ ದಾಸ್ ಅವರು ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಿಚಾರಣೆಯಲ್ಲಿ ಕೃಷ್ಣನ್, ಡೀನ್ ದಿನೇಶ್ ಕುಮಾರ್ ಮತ್ತು ಆರು ಶಿಕ್ಷಕರ ವಿರುದ್ಧ ಆರೋಪ ಹೊರಿಸಲಾಗಿತ್ತು. ಅವರೆಲ್ಲರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಆದರೆ, ಕರ್ನಾಟಕ ಹೈಕೋರ್ಟ್ ಐಐಎಂಬಿ ಅಧಿಕಾರಿಗಳ ವಿರುದ್ಧದ ಎಫ್ಐಆರ್ನ ವಿಚಾರಣೆಗೆ ತಡೆ ನೀಡಿದೆ.
ರಾಜ್ಯ ಸರ್ಕಾರದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಈ ಬಗ್ಗೆ ತನಿಖೆ ನಡೆಸಿದ್ದು, ಸಂಸ್ಥೆಯು ಸಾಮೂಹಿಕ ಇ-ಮೇಲ್ಗಳ ಮೂಲಕ ಅವರ ಜಾತಿಯನ್ನು ಬಹಿರಂಗಪಡಿಸಿದ ಕಾರಣ ದಾಸ್ ನಿರಂತರ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.
‘ಕೆಲಸದ ಸ್ಥಳದಲ್ಲಿ ಸಮಾನ ಅವಕಾಶವನ್ನು ನಿರಾಕರಿಸಿದೆ ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳನ್ನು ಪರಿಹರಿಸಲು IIM ಬೆಂಗಳೂರಿನ ಸಾಂಸ್ಥಿಕ ಕಾರ್ಯವಿಧಾನದ ಶಾಸನಬದ್ಧ ಜವಾಬ್ದಾರಿಗಳನ್ನು ಅನುಸರಿಸಲು ವಿಫಲವಾಗಿದೆ’ ಎಂದು ತನಿಖೆಯಿಂದ ತಿಳಿದು ಬಂದಿದೆ..












