ಬಿಬಿಸಿ ಕಚೇರಿಯಿಂದ ಕದಲದ ಐಟಿ ಅಧಿಕಾರಿಗಳು : ಪರಿಶೀಲನೆ ಎರಡನೇ ದಿನಕ್ಕೆ ಮುಂದುವರಿಕೆ

0
131

ಸನ್ಮಾರ್ಗ ವಾರ್ತೆ

ದೆಹಲಿ : ಮಂಗಳವಾರ(ಫೆ.14) ಬೆಳಗ್ಗೆ ದೆಹಲಿ, ಮುಂಬೈಯಲ್ಲಿರುವ ಬಿಬಿಸಿ ಕಚೇರಿಗಳಿಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡದ ಬುಧವಾರವೂ ಪರಿಶೀಲನೆ ಮುಂದುವರಿಸಿದ್ದು, ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿಯ ಖಾತೆ ಮತ್ತು ಹಣಕಾಸು ಮೂಲದ ಬಗ್ಗೆ ಕೇಂದ್ರೀಕರಿಸಿ, ಈ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ದಾಳಿಯನ್ನು ಆದಾಯ ತೆರಿಗೆ ಇಲಾಖೆಯು ‘ಸರ್ವೇ’ ನಡೆಸುತ್ತಿರುವುದಾಗಿ ಹೇಳಿದೆ.

ಈ ನಡುವೆ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ತನ್ನ ಎಲ್ಲ ಉದ್ಯೋಗಿಗಳಿಗೆ ಈ ಮೇಲ್ ರವಾನಿಸಿದ್ದು, ‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏನಾದರೂ ಕಚೇರಿಗೆ ಸಂಬಂಧಿಸಿ ಮತ್ತು ಸಂಬಳ-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಿ, ಸಹಕಾರ ನೀಡಿ’ ಎಂದು ಸೂಚಿಸಿದೆ.

“ಉದ್ಯೋಗಿಗಳು ವೈಯಕ್ತಿಕ ಆದಾಯದ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ದೂರವಿರಬಹುದು. ಅವರು ಕಚೇರಿಗೆ ಸಂಬಂಧಿಸಿ ಕೇಳಿದರೆ ಉತ್ತರ ನೀಡಬಹುದು” ಎಂದು ಹೇಳಿದೆ.

ಪ್ರಸಾರ ವಿಭಾಗದವರು ಹೊರತುಪಡಿಸಿ, ಇತರ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮುಂದುವರಿಸುವಂತೆ ಬಿಬಿಸಿ ಸೂಚನೆ ನೀಡಿದೆ. ಈ ಮಧ್ಯೆ, ವಿರೋಧ ಪಕ್ಷಗಳು ಮತ್ತು ಪತ್ರಿಕಾ ಸಂಸ್ಥೆಗಳು ಬಿಬಿಸಿ ಕಚೇರಿಗಳಲ್ಲಿನ ಶೋಧವನ್ನು ಖಂಡಿಸಿವೆ. ಬಿಬಿಸಿ ಕಚೇರಿಯ ಸುತ್ತ ರಾಷ್ಟ್ರೀಯ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳು ಸೇರಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಹೇಳಿಕೆಗಾಗಿ ನಿನ್ನೆಯಿಂದ ಕಾಯುತ್ತಿದ್ದಾರೆ.

2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿಯು ಇತ್ತೀಚೆಗೆ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‍’ ಎಂಬ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿತ್ತು. ದೇಶದಲ್ಲಿ ಅದರ ಪ್ರಸಾರಕ್ಕೆ ನಿಷೇಧ ಹೇರಲಾಗಿತ್ತು.