ಸಕಾರಾತ್ಮಕ ಚರ್ಚೆಗಳು ಪ್ರತಿ ಮನೆಯಲ್ಲೂ ನಡೆಯಲಿ…

0
268

ಸನ್ಮಾರ್ಗ ಸಂಪಾದಕೀಯ

ಕೊರಗ ಸಮುದಾಯದ ದಿನಕರ ಕೆಂಜೂರು ಅವರ ಡಾಕ್ಟರೇಟ್ ಪದವಿ ನಿಜಕ್ಕೂ ಈ ಸಮಾಜ ಸಂಭ್ರಮಿಸಬೇಕಾದ ಮತ್ತು ವಿಶೇಷವಾಗಿ ಮುಸ್ಲಿಮ್ ಸಮುದಾಯದ ಪ್ರತಿ ಮನೆಗಳಲ್ಲೂ ಉಲ್ಲೇಖಕ್ಕೆ ಒಳಗಾಗಿ ಚರ್ಚೆಯ ಹಂತಕ್ಕೆ ಬರಬೇಕಾದ ಬಹುಮುಖ್ಯ ಸಂಗತಿಯಾಗಿದೆ.

ಕಾಡಂಚಿನಲ್ಲಿ ಬದುಕುತ್ತಿರುವ ಮತ್ತು ಕಾಡುತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಸಮುದಾಯವಾಗಿ ಕೊರಗ ಸಮುದಾಯ ಪರಿಚಿತವಾಗಿದೆ. ಕರಾವಳಿ ಭಾಗದ ಮೂಲ ನಿವಾಸಿಗಳಾಗಿ ಮತ್ತು ಅಳಿವಿನ ಅಂಚಿನಲ್ಲಿರುವ ಸಮುದಾಯವಾಗಿಯೂ ಕೊರಗ ಸಮುದಾಯ ಗುರುತಿಸಿಕೊಂಡಿದೆ. ದೇಶದ ಜನಸಂಖ್ಯೆಯ ಸರಾಸರಿ ಜೀವಿತಾವಧಿಗೆ ಹೋಲಿಸಿದರೆ ಕೊರಗ ಸಮುದಾಯದ ಜೀವಿತಾವಧಿ ಅರ್ಧಕ್ಕರ್ಧ ಎಂಬಂತಿದೆ. ದುಶ್ಚಟ, ಕಾಯಿಲೆ, ಪೌಷ್ಟಿಕ ಆಹಾರದ ಕೊರತೆ ಇತ್ಯಾದಿಗಳು ಇವರ ಜೀವಿತಾವಧಿಯನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದೂ ಹೇಳಲಾಗುತ್ತಿದೆ. ಇಂಥ ಸಮುದಾಯದ ದಿನಕರ ಕೆಂಜೂರು ಅವರು ಇದೀಗ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ, ‘ನಾಲೇಜ್ ಮ್ಯಾನೇಜ್‌ಮೆಂಟ್ ಪಾಲಿಸೀಸ್ ಆಂಡ್ ಪ್ರಾಕ್ಟೀಸಸ್: ಎ ಸ್ಟಡಿ ವಿದ್ ರೆಫರೆನ್ಸ್ ಟು ಕಂಪ್ಯೂಟರ್ ಸಾಫ್ಟ್ವೇರ್ ಆಂಡ್ ಸರ್ವಿಸಸ್ ಕಂಪನೀಸ್ ಇನ್ ಕರ್ನಾಟಕ’ ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ದಿನಕರ ಕೆಂಜೂರು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ವಿಶೇಷ ಏನೆಂದರೆ,

ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೂರನೇ ವ್ಯಕ್ತಿ ಈ ದಿನಕರ ಕೆಂಜೂರು. 2022ರಲ್ಲಿ ಡಾಕ್ಟರೇಟ್ ಪಡೆದ ಸವಿತಾ ಗುಂಡ್ಮಿ ಮಹಿಳೆಯರಲ್ಲಿ ಮೊದಲಿಗರು. ಅಲ್ಲದೇ, ಬಾಲ್ಯದಲ್ಲೇ ಎಡಗಾಲು ಪೋಲಿಯೋ ಕಾಯಿಲೆಗೆ ತುತ್ತಾದ್ದರಿಂದ ಈ ದಿನಕರ ಕ್ಲಚಸ್‌ನ ಸಹಾಯದಿಂದಲೇ ನಡೆಯುತ್ತಿದ್ದಾರೆ. ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಇವರು ವಿವಿಯ ಬಹುಮಹಡಿ ಮೆಟ್ಟಿಲುಗಳನ್ನು ಈ ಕ್ಲಚಸ್ ಮೂಲಕವೇ ಹತ್ತಿಳಿಯುತ್ತಿದ್ದಾರೆ. 4 ಮತ್ತು 10ನೇ ತರಗತಿಯಲ್ಲಿ ಡ್ರಾಪ್ ಔಟ್ ಆದವರು ಈ ದಿನಕರ. ಕಿತ್ತು ತಿನ್ನುವ ಬಡತನ, ಅಸ್ಪೃಶ್ಯತೆ ಮತ್ತು ಅತಿ ಕ್ರೂರ ಅಜಲು ಪದ್ಧತಿಯಿಂದಲೂ ಧೃತಿಗೆಡದೇ ಸತತ ಏಳು ವರ್ಷಗಳ ಅಧ್ಯಯನ ಮತ್ತು ಸಂಶೋಧನೆಯನ್ನು ನಡೆಸಿ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ‌.

ಸಾಧಿಸುವ ಛಲ ಇದ್ದರೆ ಕಿತ್ತು ತಿನ್ನುವ ಬಡತನವಿದ್ದರೂ ಅಸ್ಪೃಶ್ಯತೆಗೆ ಗುರಿಯಾಗಿಯೂ, ಮೇಲ್ಜಾತಿಗಳು ಅತಿ ಹೀನಾಯವಾಗಿ ನಡೆಸಿಕೊಳ್ಳುವ ಅಜಲು ಪದ್ಧತಿಯ ಶೋಷಣೆಗೊಳಪಟ್ಟೂ ಮತ್ತು ಪೊಲಿಯೋ ಪೀಡಿತರಾಗಿ ಕ್ಲಚಸನ್ನು ಆಶ್ರಯಿಸಿ ಬದುಕಬೇಕಾಗಿ ಬಂದರೂ ಸಾಧ್ಯವಿದೆ ಎಂಬುದಕ್ಕೆ ಈ ದಿನಕರ ಕೆಂಜೂರು ಒಂದು ಅದ್ಭುತ ಉದಾಹರಣೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಕೆಂಜಾರು ಕಲ್ಲುಗುಡ್ಡೆಯ 40 ವರ್ಷದ ಈ ದಿನಕರ, ಕೊರಗ ಸಮುದಾಯದ ಹೆಮ್ಮೆ ಮಾತ್ರ ಅಲ್ಲ, ಸಾಧನೆಯ ಹಸಿವುಳ್ಳ ಎಲ್ಲರ ಹೆಮ್ಮೆ. ನಿಜವಾಗಿ,

ಸಾಧನೆಗೆ ಅಡ್ಡಿಯಾಗಿರುವ ಸಂಗತಿಗಳನ್ನು ಪಟ್ಟಿ ಮಾಡುತ್ತಾ ನಕಾರಾತ್ಮಕವಾಗಿ ಯೋಚಿಸುವುದು ಒಂದು ರೀತಿಯಾದರೆ, ಸರ್ವ ಅಡ್ಡಿಗಳನ್ನೂ ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕವಾಗಿ ಯೋಚಿಸುವುದು ಇನ್ನೊಂದು ರೀತಿ. ದಿನಕರ ಈ ಸಕಾರಾತ್ಮಕತೆಯ ಪ್ರತೀಕ. ಅವರಿಗೆ ಡಾಕ್ಟರೇಟ್ ಪದವಿ ಪಡೆಯುವುದು ಬಿಡಿ, ಶಾಲೆಗೇ ಹೋಗದಿರುವುದಕ್ಕೆ ಬೇಕಾದ ಬಲವಾದ ಕಾರಣ ಇತ್ತು. ದೈಹಿಕವಾಗಿ ಸಮರ್ಥವಾಗಿ ಇರುವವರೇ ಶಾಲೆಗೆ ಹೋಗದಿರುವ ಈ ಕಾಲದಲ್ಲಿ ತಾನು ಹೋಗದಿದ್ದರೇನು ಎಂದು ಅಂದುಕೊಂಡು ಸುಮ್ಮ ನಿರಬಹುದಿತ್ತು. ಅಲ್ಲದೇ, ಕೊರಗ ಸಮುದಾಯದಲ್ಲಿ ಶೈಕ್ಷಣಿಕ ಮಟ್ಟವೂ ಅತ್ಯಂತ ಕಡಿಮೆ. ಇದರ ಜೊತೆಗೇ ನಾಲ್ಕನೇ ತರಗತಿಯಲ್ಲಿ ಡ್ರಾಪ್‌ಔಟ್ ಆದ ಬಳಿಕವಂತೂ ಮರಳಿ ಹೋಗದಿರುವುದಕ್ಕೆ ಬೇರೆ ಕಾರಣಗಳೇ ಬೇಕಿರಲಿಲ್ಲ. ಅವರ ಸಮುದಾಯದಲ್ಲಿ ಶಿಕ್ಷಿತರು, ಉನ್ನತ ಹುದ್ದೆಯಲ್ಲಿರುವವರ ಸಂಖ್ಯೆಯೂ ತೀರಾ ತೀರಾ ಕಡಿಮೆ. ಇನ್ನು 10ನೇ ತರಗತಿಯಲ್ಲಿ ಡ್ರಾಪ್‌ಔಟ್ ಆದ ಬಳಿಕವಂತೂ ಶಾಲೆ ಕಡೆಗೆ ತಿರುಗಿ ನೋಡಬೇಕಾದ ಅಗತ್ಯವೇ ಇರಲಿಲ್ಲ. ಆದರೆ, ನಕಾರಾತ್ಮಕ ಸಂಗತಿಗಳು ಮತ್ತು ಸವಾಲುಗಳನ್ನೆಲ್ಲ ಬದಿಗಿಟ್ಟು ಇವರು ಎಂಬಿಎ ಪದವಿ ಮುಗಿಸಿದರಲ್ಲದೇ ಬಳಿಕ ಎಂ.ಕಾಮ್. ಕೂಡಾ ಮಾಡಿದರು.
ಒಂದುರೀತಿಯಲ್ಲಿ, ಛಲ ಮತ್ತು ಸಾಧನೆಯ ಹಸಿವಿದ್ದರೆ ಯಾವ ವ್ಯಕ್ತಿಗೂ ಸಾಧಕರಾಗಿ ಮಾರ್ಪಡಬಹುದು ಎಂಬುದನ್ನು ಇವು ಸಾರಿ ಹೇಳುತ್ತವೆ.

ಕೊರಗ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯಕ್ಕೆ ಅನುಕೂಲಕರವಾದ ಹಲವು ಸಂಗತಿಗಳಿವೆ. ಈ ಸಮುದಾಯದೊಳಗೆ ಅಸ್ಪೃಶ್ಯತೆಯ ಆಚರಣೆಯಿಲ್ಲ. ದುಶ್ಚಟಗಳಿಗೆ ಧಾರ್ಮಿಕ ನಿಷೇಧವಿದೆ. ಸ್ಥಿತಿವಂತರಿದ್ದಾರೆ. ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನೂ ಈ ಸಮುದಾಯ ಹೊಂದಿದೆ. ಸಮುದಾಯವನ್ನು ಒಂದೇಕಡೆ ಸೇರಿಸುವ ಮಸೀದಿ-ಮದ್ರಸಾಗಳಂಥ ಪ್ರಬಲ ಕೊಂಡಿ ಕೇಂದ್ರಗಳಿವೆ. ಉನ್ನತ ಹುದ್ದೆಯಲ್ಲಿದವರೂ ಇದ್ದಾರೆ. ಈ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಅನಿವಾಸಿಗಳೂ ಇದ್ದಾರೆ‌. ಹುಡುಕಿದರೆ ಇಂಥ ಪಾಸಿಟಿವ್ ಸಂಗತಿಗಳು ರಾಶಿರಾಶಿ ಸಿಗಬಹುದು. ಹಾಗಿದ್ದೂ ಮುಸ್ಲಿಮ್ ಸಮುದಾಯ ಶೈಕ್ಷಣಿಕವಾಗಿ ಪ್ರಬಲವಾಗಿದೆಯೇ? ಏರಬೇಕಾದ ಎತ್ತರಕ್ಕೆ ಏರಿದೆಯೇ? ಸಾಮಾಜಿಕವಾಗಿ ಪ್ರಭಾವಶಾಲಿಯಾಗಿದೆಯೇ? ಆರ್ಥಿಕವಾಗಿ ಎಷ್ಟು ಬಲಶಾಲಿಯಾಗಿದೆ?

ಒಂದು ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಶಾಲಿಯಾಗುವುದನ್ನು ಆ ಸಮುದಾಯದ ಶೈಕ್ಷಣಿಕ ಮಟ್ಟ ನಿರ್ಧರಿಸುತ್ತದೆ. ಶೈಕ್ಷಣಿಕವಾಗಿ ತೀರಾ ಕಳಪೆ ಸಾಧನೆಗೈಯುವ ಸಮುದಾಯವೊಂದು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವುದು ಅಸಾಧ್ಯ. ಮುಸ್ಲಿಮ್ ಸಮುದಾಯದ ಮಟ್ಟಿಗೆ ಕಲಿಕೆಗೆ ಅಂಥ ಅಡ್ಡಿಗಳೇನಿಲ್ಲ. ಆರ್ಥಿಕ ಚೈತನ್ಯ ವಿಲ್ಲದಿದ್ದರೂ ಕಲಿಕೆಯ ದಾಹವಿದ್ದರೆ ನೆರವಾಗುವ ಕೈಗಳೂ ಸಮುದಾಯದಲ್ಲಿ ಸಾಕಷ್ಟಿದೆ. ಆದರೂ, ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಮಟ್ಟ ಸಮಾಧಾನಕರವಾಗಿಲ್ಲ. ಈ ಸಮುದಾಯದಿಂದ ವೈದ್ಯರು, ಇಂಜಿನಿಯರ್‌ಗಳು, ಪ್ರೊಫೆಸರ್, ವಿಜ್ಞಾನಿಗಳು, ಉಪನ್ಯಾಸಕರು, ಸರಕಾರಿ ಉದ್ಯೋಗಿಗಳು, ನಾಗರಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರು, ಐಎಎಸ್, ಐಪಿಎಸ್‌ಗಳು, ಡಾಕ್ಟರೇಟರ್‌ಗಳು ನಿರೀಕ್ಷಿತ ಮಟ್ಟದಲ್ಲಿ ತಯಾರಾಗಿಲ್ಲ. ಉನ್ನತ ವ್ಯಾಸಂಗ ಪಡೆದು ದೇಶಸೇವೆ ಮಾಡುವವರ ಸಂಖ್ಯೆ ತೃಪ್ತಿಕರವಾಗಿಲ್ಲ. ಪ್ರಾಥಮಿಕ-ಪ್ರೌಢ ಶಿಕ್ಷಣಗಳ ಆಚೆಗೆ ಉನ್ನತ ಹಂತದ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಿದೆ. ಸೇನೆ ಮತ್ತು ಪೊಲೀಸು ವಿಭಾಗದಲ್ಲಿ ಮುಸ್ಲಿಮರ ಸೇರ್ಪಡೆಯೂ ತೀರಾ ಕಡಿಮೆ ಸಂಖ್ಯೆಯಲ್ಲಿದೆ. ಯಾವುದೇ ಸಮುದಾಯ ಆ ದೇಶದ ಎಲ್ಲ ಕ್ಷೇತ್ರದಲ್ಲೂ ಸಕ್ರಿಯವಾಗಿರುವಾಗ ಮತ್ತು ಪ್ರಾತಿನಿಧ್ಯ ಪಡೆದಾಗ ಮಾತ್ರ ಆದೇಶ ಸುಖವಾಗಿರುತ್ತದೆ. ಈ ಪ್ರಾತಿನಿಧ್ಯ ಸಿಗಬೇಕಾದರೆ ಅದಕ್ಕೆ ಬೇಕಾದ ಅರ್ಹತೆಯನ್ನು ಆ ಸಮುದಾಯ ಸ್ವಯಂ ಪಡೆದುಕೊಳ್ಳಬೇಕು. ಕೌಶಲ್ಯಭರಿತ ಪೀಳಿಗೆಯನ್ನು ಅದು ತಯಾರಿಸಬೇಕು. ಉನ್ನತ ಚಿಂತನೆ ಮತ್ತು ಸಕಾರಾತ್ಮಕ ವಿಚಾರಗಳುಳ್ಳ ಪೀಳಿಗೆಯ ನಿರ್ಮಾಣವಾಗಬೇಕು. ಈ ಪ್ರಕ್ರಿಯೆ ನಿರಂತರವಾದಾಗ ತನ್ನಿಂತಾನೇ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಲೇ ಹೋಗುತ್ತದೆ. ಪ್ರತಿಭೆಗೆ ಯಾವತ್ತೂ ಮೋಸವಾಗುವುದಿಲ್ಲ. ಶಿಕ್ಷಣ ಯಾರಿಗೂ ಕೈ ಕೊಡುವುದಿಲ್ಲ. ಶಿಕ್ಷಿತ ಸಮುದಾಯವೊಂದು ಎಲ್ಲಿಯವರೆಗೆ ಮೌಲ್ಯಗಳಿಗೆ ಬದ್ಧವಾಗಿತ್ತೋ ಅಲ್ಲಿಯ ವರೆಗೆ ಸಮಾಜದ ಅತಿ ಗೌರವಾನ್ವಿತ ಸಮುದಾಯವಾಗಿ ಅದು ಗುರುತಿಸಿಕೊಂಡಿದೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕ್ಷ್ಯವಿದೆ. ಅಂದಹಾಗೆ,

ಮುಸ್ಲಿಮ್ ಸಮುದಾಯಕ್ಕೆ ಇರುವ ಅನುಕೂಲತೆಗಳನ್ನು ಪರಿಗಣಿಸಿದರೆ ಅದು ಇವತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಉನ್ನತ ಮಟ್ಟದಲ್ಲಿ ಇರಬೇಕಿತ್ತು. ಆದರೆ ಯಾಕೆ ಇದು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ರಾಜಕೀಯ ಅನನುಕೂಲತೆ ಮತ್ತು ಪ್ರಭುತ್ವದ ತಾರತಮ್ಯ ನೀತಿಯನ್ನು ಬೊಟ್ಟು ಮಾಡಲಾಗುತ್ತದೆ. ನಿಜವಾಗಿ, ಇದುವೇ ಪ್ರಮುಖ ಕಾರಣವಲ್ಲ. ಕಾರಣಗಳ ಪಟ್ಟಿಯಲ್ಲಿ ಇದಕ್ಕೆ ಕೊನೆಯ ಸ್ಥಾನವನ್ನಷ್ಟೇ ನೀಡಬಹುದು. ಅದರಾಚೆಗೆ ಸಾಮುದಾಯಿಕ ವೈಫಲ್ಯದ ಪಾತ್ರ ಬಹುಮುಖ್ಯವಾಗಿದೆ. ಪ್ರತಿ ಮಸೀದಿಗಳನ್ನು ಕೇಂದ್ರವಾಗಿಟ್ಟುಕೊಂಡು ಆಯಾ ಮಸೀದಿ ವ್ಯಾಪ್ತಿಯ ಯುವ ಪೀಳಿಗೆಯಲ್ಲಿ ಐಎಎಸ್, ಐಪಿಎಸ್, ವೈದ್ಯರು, ಯೋಧರು, ಪೊಲೀಸರು, ಇಂಜಿನಿಯರ್‌ಗಳು, ಪ್ರೊಫೆಸರ್‌ಗಳು ಇತ್ಯಾದಿ ಕನಸುಗಳನ್ನು ನಿರಂತರ ಬಿತ್ತತೊಡಗಿದರೆ ಒಂದು ದಿನ ಆ ಕನಸು ನನಸಾಗುವುದಕ್ಕೆ ಖಂಡಿತ ಸಾಧ್ಯವಿದೆ. ನಕಾರಾತ್ಮಕ ಸಂಗತಿಗಳನ್ನೇ ಚರ್ಚಿಸುತ್ತಾ ಕುಳಿತುಕೊಳ್ಳುವುದರಿಂದ ನಕಾರಾತ್ಮಕ ಫಲಿತಾಂಶಗಳೇ ಲಭ್ಯವಾಗುತ್ತಿರುತ್ತವೆ. ನಕಾರಾತ್ಮಕ ಚರ್ಚೆಗಳು ಮನೆಯೊಳಗೆ ನಿರಂತರ ನಡೆಯುತ್ತಿದ್ದರೆ ಆ ಮನೆಯ ಮಕ್ಕಳೂ ನಕಾರಾತ್ಮಕವಾಗಿಯೇ ಯೋಚಿಸಲು ಆರಂಭಿಸುತ್ತಾರೆ. ಅದು ಅಂತಿಮವಾಗಿ ಪ್ರತಿಭೆಯನ್ನೇ ಚಿವುಟಿ ಹಾಕುತ್ತದೆ. ಈ ಹಿನ್ನೆಲೆಯಲ್ಲಿ ದಿನಕರ ಕೆಂಜೂರು ಅವರ ಸಾಧನೆ ಸಮುದಾಯಕ್ಕೆ ಪ್ರೇರಣೆಯಾಗಲಿ. ಸಕಾರಾತ್ಮಕ ವಿಷಯಗಳು ಪ್ರತಿ ಮನೆಯಲ್ಲೂ ಚರ್ಚೆಗೊಳಗಾಗಲಿ.