ಭಾರತ ನಮ್ಮ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಯೋಜನೆಯಲ್ಲಿದೆ: ಪಾಕ್ ವಿದೇಶಾಂಗ ಸಚಿವ ಖುರೇಷಿ

0
439

ಸನ್ಮಾರ್ಗ ವಾರ್ತೆ

ಯುಎಇ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ನಡೆಯುತ್ತಿರುವ ಜನಸಾಮಾನ್ಯರು ಹಾಗೂ ರೈತರ ಹೋರಾಟ ಹಾಗೂ ಇತರ ವೈಫಲ್ಯಗಳ ದಿಕ್ಕು ತಪ್ಪಿಸುವ ದೃಷ್ಟಿಯಿಂದ ಭಾರತವು ನಮ್ಮ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡುವ ಯೋಜನೆ ಹಾಕಿರುವುದಾಗಿ ನಮ್ಮ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ ಎಂದು ಪಾಕ್ ನ ವಿದೇಶಾಂಗ ಸಚಿವ ಷಾ ಮಹ್ಮೂದ್‌ ಖುರೇಷಿ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಎರಡು ದಿನಗಳ ಯುಎಇ ಪ್ರವಾಸದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಆರೋಪ ಮಾಡಿರುವ ಅವರು, ನಮ್ಮ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಗೆ ಯೋಜನೆ ಹಾಕಿರುವ ಭಾರತವು, ತನ್ನ ಜೊತೆಗಾರರ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಭಾರತದಲ್ಲಿ ನರೇಂದ್ರ ಮೋದಿಯವರು, ದೊಡ್ಡ ದೊಡ್ಡ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರ ಪಡೆದ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಸರಕಾರದ ಸಾಧನೆ ಮಾಡಿಲ್ಲ. ‌ಅಲ್ಲದೇ, ಕೇಂದ್ರ ಸರಕಾರವು ಜಾರಿಗೆ ತಂದ ಕೃಷಿ ಕಾನೂನಿನ ವಿರುದ್ಧ ರೈತರ ನಿರಂತರ ಹೋರಾಟಕ್ಕೆ ಜನಬೆಂಬಲ ದೊರೆಯುತ್ತಿರುವುದನ್ನು ಗಮನಿಸಿರುವ ಸರಕಾರವು ನಮ್ಮ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಯೋಜನೆ ಹಾಕಿದ್ದು, ಆ ಮೂಲಕ ಭಾರತೀಯರ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡಲು ಪ್ರಯತ್ನ ಪಡುತ್ತಿದೆ. ಈ ಬಗ್ಗೆ ಪಾಕ್ ನ ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದಾಗಿ ಪಾಕ್ ವಿದೇಶಾಂಗ ಸಚಿವ ಷಾ ಮೆಹ್ಮೂದ್ ಖುರೇಷಿ ತಿಳಿಸಿದ್ದಾರೆ.

ಈ ಆರೋಪಕ್ಕೆ ಈವರೆಗೆ ಭಾರತ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.