ಯುಎಇಗೆ ಭಾರತದ ಅಕ್ಕಿ ರಫ್ತು ಪುನರಾರಂಭ

0
340

ಸನ್ಮಾರ್ಗ ವಾರ್ತೆ

ದುಬೈ: ಮೂರು ತಿಂಗಳ ಅಂತರದ ನಂತರ ಮತ್ತೆ ಯುಎಇಗೆ ಅಕ್ಕಿ ರಫ್ತು ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. 75,000 ಟನ್ ಬಾಸುಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ಮೂಲಕ ಅಕ್ಕಿಯನ್ನು ರಫ್ತು ಮಾಡಲಾಗುವುದು ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡೈರಕ್ಟರೇಟರ್ ಜನರಲ್ ಆಫ್ ಫರಿನ್ ಟ್ರೇಡ್ (ಡಿಜಿಎಫ್‌ಟಿ) ಸೋಮವಾರ ಸಂಜೆ ಹೊರಡಿಸಿದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಯುಎಇ, ಕೀನ್ಯಾ, ಮಡಗಾಸ್ಕರ್ ಮತ್ತು ಬೆನಿನ್ ದೇಶಗಳಿಗೆ ಈ ವರ್ಷ 2.2 ಬಿಲಿಯನ್ ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡಲು ನಿರ್ಧಾರವಾಗಿದೆ. ಇದಕ್ಕಾಗಿ ಸರ್ಕಾರ ರಫ್ತು ನೀತಿಗೆ ತಿದ್ದುಪಡಿ ತಂದಿದೆ. ನೆರೆಯ ರಾಷ್ಟ್ರಗಳ ಆಹಾರ ಅಗತ್ಯವನ್ನು ಪೂರೈಸಲು ಸರ್ಕಾರದ ಅನುಮತಿಯ ಆಧಾರದ ಮೇಲೆ ಅಕ್ಕಿಯನ್ನು ರಫ್ತು ಮಾಡಬಹುದು ಎಂಬುದು ಹೊಸ ವ್ಯವಸ್ಥೆ. ಆದರೆ, ವಿದೇಶಗಳ ಕೋರಿಕೆಯ ಮೇರೆಗೆ ರಫ್ತಿಗೆ ಅವಕಾಶ ನೀಡಲಾಗುವುದು ಎಂದು ಡಿಜಿಎಫ್‌ಟಿವಿ ಪ್ರಕಟನೆಯಲ್ಲಿ ತಿಳಿಸಿದೆ.

ಜುಲೈ 20 ರಂದು, ಭಾರತ ಸರ್ಕಾರವು ದೇಶದಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ತಡೆಯಲು ಅಕ್ಕಿ ರಫ್ತು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಅಕ್ಕಿ ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಭಾರಿ ಮಳೆಯಿಂದಾಗಿ ಕೊಯ್ಲು ಕಡಿಮೆಯಾದ ನಂತರ ಅಕ್ಕಿ ರಫ್ತಿನ ಮೇಲೆ ತಾತ್ಕಾಲಿಕ ನಿಷೇಧ ಹೇರಲು ಸರ್ಕಾರ ನಿರ್ಧರಿಸಿದೆ. ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ, ಕಳೆದ ತಿಂಗಳು ಸಿಂಗಾಪುರಕ್ಕೆ ಅಕ್ಕಿ ರಫ್ತು ಪ್ರಾರಂಭಿಸಲಾಯಿತು. ಸಿಂಗಾಪುರ ಸರ್ಕಾರದ ಕೋರಿಕೆಯ ಮೇರೆಗೆ ರಫ್ತು ಅನುಮತಿ ನೀಡಲಾಯಿತು.

ಪಶ್ಚಿಮ ಆಫ್ರಿಕದ ದೇಶ ಬೆನಿನ್ ಬಸುಮತಿ ಅಲ್ಲದ ಅಕ್ಕಿಯನ್ನು ಕೇಳಿದೆ. ಅಲ್ಲಿಗೆ ರಫ್ತು ಆರಂಭಿಸಲಾಗುವುದು. ಯುಎಇ, ನೇಪಾಳ. ಬಾಂಗ್ಲಾದೇಶ, ಚೀನ, ಮಲೇಶ್ಯ, ಲೈಬ್ರೇರಿಯಗಳಿಗೂ ಭಾರತ ಅಕ್ಕಿ ಕಳುಹಿಸುತ್ತದೆ. ಕಳೆದ ಸೆಪ್ಟಂಬರಿನಲ್ಲಿ ಕೇಂದ್ರ ಸರಕಾರ ಅಕ್ಕಿ ರಫ್ತನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಅದೇ ನವೆಂಬರಿನಲ್ಲಿ ಪುನಃ ಅಕ್ಕಿ ರಫ್ತು ಪ್ರಾರಂಭಿಸಲಾಗಿತ್ತು.