ಸನ್ಮಾರ್ಗ ವಾರ್ತೆ
@ ಶಾಝಿಲ್ ಉಸ್ಮಾನ್
ಲೆಬನಾನಿನ ಹಿಝ್ಬುಲ್ಲದ ಮೇಲೆ ಇಸ್ರೇಲ್ ಪೇಜರ್ ದಾಳಿ ನಡೆಸಿತ್ತು. ಲೆಬನಾನ್ ಮತ್ತು ಸಿರಿಯದಲ್ಲಿ ಕೆಲವು ನಾಗರಿಕರು ಮೃತಪಟ್ಟಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು.
ಇಸ್ರೇಲ್ ಪೇಜರ್ ಸ್ಫೋಟದಲ್ಲಿ ಒಬ್ಬ ಭಾರತೀಯ ಶಾಮೀಲಾಗಿದ್ದ. ಆತನ ಹೆಸರು ರಿನ್ಸನ್ ಜೋಸ್. ಮೂಲತಃ ಕೇರಳದ ವ್ಯಕ್ತಿಯಾಗಿದ್ದಾನೆ. ತನಿಖೆಗಾಗಿ ನೋರ್ವೆ ಅವನನ್ನು ಹುಡುಕುತ್ತಿದೆ. ಅದರೆ ಈಗ ಅವನು ಎಲ್ಲಿದ್ದಾನೆಂದು ಗೊತ್ತಿಲ್ಲ. ಲೆಬನಾನ್, ಸಿರಿಯಗಳಲ್ಲಿ ಪೇಜರ್ ಸ್ಫೋಟಗೊಳ್ಳುವವರೆಗೂ ಈತ ಅಮೆರಿಕದಲ್ಲಿದ್ದ. ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ. ಪೇಜರ್ ಸ್ಫೋಟದ ನಂತರ ಇಸ್ರೇಲ್ ತನ್ನ ರಾಜತಾಂತ್ರಿಕ ಸಂಬಂಧವನ್ನು ಉಪಯೋಗಿಸಿ ಅಲ್ಲಿಂದ ಆತನನ್ನು ತಪ್ಪಿಸಿದೆ. ಎಲ್ಲಿಯೋ ಗುಟ್ಟಾದ ಸ್ಥಳದಲ್ಲಿ ಸುರಕ್ಷಿತವಾಗಿ ಅಡಗಿಸಿಟ್ಟಿದೆ. ಇದು ನ್ಯೂಯಾರ್ಕ್ ಟೈಮ್ಸ್ ನ ವರದಿ.
ಸೆಪ್ಟಂಬರ್ ಹದಿನೇಳಕ್ಕೆ ಲೆಬನಾನಿನಲ್ಲಿ ದಾಳಿ ನಡೆದಿತ್ತು. ಯಾರನ್ನು ಕೊಲ್ಲಲು ಯಾವುದೇ ಮಟ್ಟಕ್ಕೂ ಹೋಗಬಲ್ಲ ಇಸ್ರೇಲಿನ ಕ್ರೌರ‍್ಯದಲ್ಲಿ ಭಾರತೀಯನೊಬ್ಬ ಸೇರಿದ್ದಾನೆ. ಈ ರಿನ್ಸನ್ ಜೋಸ್. ಅಂತೂ ಅವನನ್ನು ಗುಟ್ಟಾಗಿ ಬಚ್ಚಿ ಇಡಲಾಗಿದೆ. ಎಂದಿದ್ದರೂ ಅಕ್ರಮಿಗಳು ಎದೆ ಯಾವಾಗಲೂ ಢವ ಢವ ಆಗಿರಬೇಕಿರುವುದು ಲೋಕ ನೀತಿ ಅಲ್ವೆ?
ಇತ್ತೀಚೆಗೆ ಜೋಸ್ ನಿಗೂಢ ಸಂಬಂಧ ಹೊಂದಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಪ್ರಕಟಿಸಿ ಸ್ಪಷ್ಟ ಸೂಚನೆಗಳನ್ನು ನೀಡಿತು. ಈ ಘಟನೆಯ ನಂತರ ಅಮೆರಿಕದಿಂದ ಎಲ್ಲಿಗೋ ಅವನನ್ನು ಕರೆದುಕೊಂಡು ಹೋಗಲಾಯಿತು ಮತ್ತು ಬಚ್ಚಿಡಲಾಯಿತು. ರಿನ್ಸನ್ ಈಗ ಒಂದು ಸುರಕ್ಷಿತ ಕೇಂದ್ರದಲ್ಲಿ ಇದ್ದಾನೆ ಎಂದು ಇಸ್ರೇಲಿನ ಹಿರಿಯ ರಕ್ಷಣಾ ಅಧಿಕಾರಿ ನ್ಯೂಯಾರ್ಕ್ ಟೈಮ್ಸ್ ಗೆ ತಿಳಿಸಿದ್ದಾರೆ.
ಕೇರಳದ ವಯನಾಡಿನಿಂದ ಹತ್ತು ವರ್ಷ ಮೊದಲು ಜೋಸ್ ನೋರ್ವೆಗೆ ವಲಸೆ ಹೋಗಿದ್ದ. ನಂತರ ಅಲ್ಲಿ ಪೌರತ್ವ ಪಡೆದಿದ್ದ. ಕಾಯಂ ಆಗಿ ವಾಸಿಸತೊಡಗಿದ್ದ. ಅವನು ಒಂದು ವರ್ಷದ ಹಿಂದೆ ಊರಿಗೆ ಬಂದು ಹೋಗಿದ್ದ.
ಹಿಝ್ಬುಲ್ಲದ ಪ್ರಧಾನ ಮಾಹಿತಿ ವಿನಿಮಯ ವಸ್ತು ಆಗಿದ್ದ ಪೇಜರ್‌ಗೆ ಡಿವೈಸ್ ಸೇರಿಸುವುದು ಮತ್ತು ಸರಣಿ ಬದ್ಧವಾಗಿ ಸ್ಫೋಟ ನಡೆಸುವುದು ಈ ಯೋಜನೆಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಜೋಸ್ ಭಾಗಿಯಾಗಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳುತ್ತಿದೆ.
ವಾಸ್ತವದಲ್ಲಿ 2018ರಲ್ಲಿ ಹಿಝ್ಬುಲ್ಲದ ಪೇಜರ್ ವ್ಯವಸ್ಥೆಯ ಮೇಲೆ ದಾಳಿ ನಡೆಸಲು ಇಸ್ರೇಲು ಮೊತ್ತ ಮೊದಲು ಚಿಂತನೆ ನಡೆಸಿತು. ಅದು ಕಳೆದ ಸೆಪ್ಟಂಬರ್ ಹದಿನೇಳಕ್ಕೆ ನಿಜವಾಯಿತು. ಸುಮಾರು ನಲ್ವತ್ತರಷ್ಟು ಮಂದಿ ಜೀವ ಕಳಕೊಂಡರು. ಮೂರು ಸಾವಿರದಷ್ಟು ಮಂದಿ ಗಾಯಗೊಂಡರು. ಸತ್ತವರು ಮತ್ತು ಗಾಯಗೊಂಡಿರುವವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ.
ಹೌದು, ಮೊಸಾದ್‌ನ ಓರ್ವ ಮಹಿಳಾ ಅಧಿಕಾರಿ ಇದಕ್ಕೆ ಸಂಬಂಧಿಸಿದ ಪ್ರಾಥಮಿಕ ಯೋಜನೆ ತಯಾರಿಸಿದ್ದರು. ಆರು ವರ್ಷದ ನಂತರ ಕಾರ್ಯರೂಪಕ್ಕೆ ತರುವಂತೆ ಪೇಜರಿನ ಬ್ಯಾಟರಿಯಲ್ಲಿ ಸ್ಫೋಟಕ ವಸ್ತು ಉಪಯೋಗಿಸುವುದು ಯೋಜನೆಯ ಗುರಿಯಾಗಿತ್ತು. ಇಂಟಲಿಜೆನ್ಸ್ ಕಮಾಂಡೊಗಳು ಈ ಯೋಜನೆಯನ್ನು ಪರಿಶೀಲಿಸಿ ವಿವಿಧ ಪ್ರಾಯೋಗಿಕ ಕಾರಣಗಳನ್ನು ಹೇಳಿ ಹಸಿರು ನಿಶಾನೆ ತೋರಿಸಿರಲಿಲ್ಲ.
ನಾಲ್ಕು ವರ್ಷಗಳ ನಂತರ 2022 ರಲ್ಲಿ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲಾಯಿತು. ಇಸ್ರೇಲ್ ಗುಪ್ತಚರ ವ್ಯವಸ್ಥೆಯ ಕುರಿತು ಗೊತ್ತಿದ್ದ ಹಿಝ್ಬುಲ್ಲ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ಅದಾಗಲೇ ತೊರೆದಿತ್ತು. ನಂತರ ಅದು ತನ್ನ ಸಂಪೂರ್ಣ ಮಾಹಿತಿ ವಿನಿಮಿಯಗಳನ್ನು ಪೇಜರ್ ವ್ಯವಸ್ಥೆಗೆ ಬದಲಿಸಿಕೊಂಡಿತ್ತು. ನಕಲಿ ಕಂಪೆನಿಗಳ ಮೂಲಕ ಸ್ಫೋಟಕ ತುಂಬಿಸಿದ ಪೇಜರ್‌ಗಳನ್ನು ತಯಾರಿಸಿ ಹಿಝ್ಬುಲ್ಲಾಗೆ ಮಾರುವ ಯೋಜನೆಯನ್ನು ಇಸ್ರೇಲ್ ಹಾಕಿತು. ಪೇಜರ್ ನಿರ್ಮಾಣದ ಮುಂಚೂಣಿ ಕಂಪೆನಿ ತೈವಾನಿನ ಗೋಲ್ಡ್ ಅಪೊಲೊವನ್ನು ಇದಕ್ಕಾಗಿ ಇಸ್ರೇಲ್ ಮೊದಲು ಸಂಪರ್ಕಿಸಿತು.
ಈ ಕಾರ್ಯಾಚರಣೆಯ ಭಾಗವಾಗಿ 2022 ಮೇಯಲ್ಲಿ ಹಂಗರಿಯ ಬುಡಾಪೆಸ್ಟಿನಲ್ಲಿ ಬಿಎಸಿ ಕನ್ಸಲ್ಟಿಂಗ್ ಎಂಬ ಕಂಪೆನಿ ಸ್ಥಾಪನೆಯಾಯಿತು. ಇದಾಗಿ ಒಂದು ತಿಂಗಳ ನಂತರ ಬಲ್ಗೇರಿಯದ ಸೋಫಿಯದಲ್ಲಿ ನೋರ್ತ್ ಗ್ಲೋಬಲ್ ಲಿಮಿಟೆಡ್ ಎಂಬ ಕಂಪೆನಿ ಕೂಡ ನೋಂದಾಯಿಸಲ್ಪಟ್ಟಿತು. ರಿನ್ಸನ್ ಜೋಸ್ ಹೆಸರಿನಲ್ಲಿ ಈ ಕಂಪೆನಿ ಇತ್ತು. ಹೊಸ ಮಾಡೆಲ್ ಪೇಜರ್‌ಗಳನ್ನು (ಎಆರ್-924) ನಿರ್ಮಿಸುವ ಲೈಸನ್ಸ್ ಗೋಲ್ಡ್ ಅಪೊಲೊದಿಂದ ಬುಡಾಪೆಸ್ಟಿನ ಬಿಎಸಿ ಕನ್ಸಲ್ಟಿಂಗ್ ಕಂಪೆನಿ ಸಂಪಾದಿಸಿತು.
ಗೋಲ್ಡ್ ಅಪೊಲೊ ನಿರ್ಮಿಸುವ ಪೇಜರುಗಳಿಗಿಂತ ಹೊಸ ಪೇಜರ್‌ಗಳು ದೊಡ್ಡದಾಗಿತ್ತು. ಆದರೆ ವಾಟರ್ ಪ್ರೂಪ್ ವ್ಯವಸ್ಥೆ, ಸುದೀರ್ಘ ಬ್ಯಾಟರಿ ಲೈಫ್ ಇರುವುದಾಗಿ ಬಿಎಸಿ ಭರವಸೆ ನೀಡಿತು. ಪೇಜರ್‌ಗಳು ಮೊಸಾದ್‌ನ ನೇತೃತ್ವದಲ್ಲಿ ಇಸ್ರೇಲಿನಲ್ಲಿ ನಿರ್ಮಾಣಗೊಳ್ಳುತ್ತಿತ್ತು. ಮೊಸಾದ್ ಮಾಡಿದ ಮಧ್ಯವರ್ತಿಗಳು ಮತ್ತು ಏಜೆಂಟುಗಳು ಪೇಜರ್ ವ್ಯವಹಾರದಲ್ಲಿ ಹಿಝ್ಬುಲ್ಲವನ್ನು ಸಂಪರ್ಕಿಸಿದರು. ಇಲ್ಲಿ ರಿನ್ಸನ್ ಜೋಸ್‌ನ ಕಂಪೆನಿಯ ಉಪಸ್ಥಿತಿ ಗಮನ ಸೆಳೆಯುತ್ತದೆ. ಭಾರೀ ಪ್ರಮಾಣದಲ್ಲಿ ಖರೀದಿಸುವುದಾದರೆ ರಿಯಾಯಿತಿ ದರದಲ್ಲಿ ನೀಡುತ್ತೇವೆ ಎಂದು ಕಂಪೆನಿಯು ಹಿಝ್ಬುಲ್ಲಗೆ ತಿಳಿಸಿತು.
ಈ ಚರ್ಚೆಗಳು ನಡೆದಾಗ 2023 ಮಾರ್ಚ್ ನಲ್ಲಿ ಸ್ಫೋಟಕ ವಸ್ತು ಇಟ್ಟ (ಡಿವೈಸ್ ಇದ್ದ) ಒಂದು ಪೇಜರ್ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಮೊಸಾದ್ ತೋರಿಸಿತು. ಪೇಜರ್‌ನ ಬಗ್ಗೆ ನೆತನ್ಯಾಹು ಸಂದೇಹ ವ್ಯಕ್ತಪಡಿಸಿದರು. ಇದು ಕೂಡಲೇ ಸ್ಫೋಟಗೊಳ್ಳುವುದೇ ಎಂದು ಮೊಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯವರನ್ನು ಪ್ರಶ್ನಿಸಿದರು.
ಏನೂ ಆಗುವುದಿಲ್ಲ ಎಂದು ಬರ್ನಿಯ ಹೇಳಿದರು. ಆದರೆ ಅವರ ಮಾತು ನೆತನ್ಯಾಹುಗೆ ತೃಪ್ತಿ ತರಲಿಲ್ಲ. ಕುರ್ಚಿಯಿಂದೆದ್ದ ನೆತನ್ಯಾಹು ಪೇಜರ್ ಅನ್ನು ಗೋಡೆಗೆ ಎಸೆದು ಅಪ್ಪಳಿಸಿ ಪರೀಕ್ಷಿಸಿ ನೋಡಿದರು. ಗೋಡೆಯಲ್ಲಿ ಗೆರೆಗಳು ಬಿದ್ದರೂ ಪೇಜರ್ ಹಾಗೆಯೇ ಇತ್ತು. ಅದಕ್ಕೆ ಏನೂ ಆಗಲಿಲ್ಲ. ಕೆಲವು ತಿಂಗಳ ನಂತರ ಪೇಜರಿನ ಹೊಸ ಬ್ಯಾಚ್ ಹಿಝ್ಬುಲ್ಲಕ್ಕೆ ಮಾರಾಟ ನಡೆಯಿತು. ಹಿಝ್ಬುಲ್ಲದೊಡನೆ ಯುದ್ಧದಲ್ಲಿ ಅತೀ ನಿರ್ಣಾಯಕವಾದ ಹಂತದಲ್ಲಿ ಉಪಯೋಗಿಸೋಣ ಎಂದು ಇಸ್ರೇಲ್ ಈ ಕಾರ್ಯಾಚರಣೆಯನ್ನು ನಡೆಸಿತು. ಈ ನಡುವೆ ಸೆಪ್ಟಂಬರ್ ಹನ್ನೊಂದಕ್ಕೆ ಇಸ್ರೇಲಿನ ಗುಪ್ತಚರ ವ್ಯವಸ್ಥೆಗೆ ಒಂದು ಮಾಹಿತಿ ಸಿಕ್ಕಿತು.
ಅದೇನೆಂದರೆ ಪೇಜರ್‌ನಲ್ಲಿ ಯಾಕೋ ಸಂದೇಹ ಮೂಡಿದ್ದರಿಂದ ಹಿಝ್ಬುಲ್ಲ ಪೇಜರಿನ ಕೆಲವು ಡಿಸೈನ್‌ಗಳನ್ನು ತಜ್ಞರ ಪರಿಶೀಲನೆಗೆ ಇರಾನಿಗೆ ಕಳುಹಿಸಿದೆ ಎಂಬುದೇ ಆ ಮಾಹಿತಿ. ಬೇಗನೆ ಏನಾದರೂ ಮಾಡದಿದ್ದರೆ ಪರಿಸ್ಥಿತಿ ಕೆಡುತ್ತಿದೆ ಎಂದು ಇಸ್ರೇಲ್ ಅಂದುಕೊಂಡಿತು. ಆದುದರಿಂದ ಆರು ದಿವಸಗಳ ನಂತರ ಸೆಪ್ಟಂಬರ್ ಹದಿನೇಳರಂದು ಸಂಜೆ 3:30ಕ್ಕೆ ಪೇಜರ್‌ಗಳಲ್ಲಿ ಸ್ಫೋಟ ನಡೆಯಿತು. ಅಂದರೆ ಇಸ್ರೇಲ್ ಅವಸರವಸರವಾಗಿ ಸ್ಫೋಟ ನಡೆಸಿತ್ತು.
ಇತ್ತ ಲೆಬನಾನಿನಲ್ಲಿ ಪೇಜರ್‌ಗಳು ಸ್ಫೋಟಗೊಂಡಾಗ ಅಮೆರಿಕದ ಬೋಸ್ಟನ್‌ನಲ್ಲಿ ಟೆಕ್ನಾಲಜಿ ಕಾನ್ಫರೆನ್ಸಿನಲ್ಲಿ ರಿನ್ಸನ್ ಜೋಸ್ ಭಾಗವಹಿಸಿದ್ದ. ಪೇಜರ್ ಸ್ಫೋಟದಲ್ಲಿ ರಿನ್ಸನ್ ಜೋಸ್‌ನ ಕಂಪೆನಿಯ ಹೆಸರು ದಿವಸಗಳೊಳಗೆ ವಾರ್ತೆಯಾಗಿ ಬರತೊಡಗಿತು. ಅಮೆರಿಕದಲ್ಲಿರುವ ಇಂಡಿಯನ್ ಮೂಲದ ರಿನ್ಸನ್ ಜೋಸ್ ಅನ್ನು ಹುಡುಕಿ ಕರಕೊಂಡು ಬಂದು ತನಿಖೆ ನಡೆಸುತ್ತೇವೆ ಎಂದು ಆತನಿಗೆ ಪೌರತ್ವ ನೀಡಿದ್ದ ನೋರ್ವೆ ಸರಕಾರ ಹೇಳಿತು. ಇಷ್ಟರಲ್ಲಿ ಇಸ್ರೇಲ್ ಮಧ್ಯ ಪ್ರವೇಶಿಸಿತು. ಅಮೆರಿಕ ಸರಕಾರದ ಮೇಲೆ ಒತ್ತಡ ಹೇರಿ ರಿನ್ಸನ್ ನೋರ್ವೆಗೆ ಮರಳದಂತೆ ನೋಡಿಕೊಂಡಿತು. ಅಂದಹಾಗೆ, ಇಸ್ರೇಲ್ ಅಮೆರಿಕ ಮೂಲಗಳನ್ನು ಉದ್ಧರಿಸಿ ನ್ಯೂಯಾರ್ಕ್ ಟೈಮ್ಸ್ ಈ ವಿವರಗಳನ್ನು ಬಹಿರಂಗಪಡಿಸಿದೆ.
ರಿನ್ಸನ್ ಈಗ ಎಲ್ಲಿದ್ದಾನೆಂದು ಇಸ್ರೇಲ್ ಹೇಳುತ್ತಿಲ್ಲ. ಒಂದು ಸುರಕ್ಷಿತ ಕೇಂದ್ರದಲ್ಲಿದ್ದಾನೆ ಎಂದು ಹಿರಿಯ ಇಸ್ರೇಲಿ ರಕ್ಷಣಾ ಅಧಿಕಾರಿ ನ್ಯೂಯಾರ್ಕ್ ಟೈಮ್ಸ್ ಗೆ ಹೇಳಿದ್ದಾರೆ. ಇಸ್ರೇಲ್ ಸರಕಾರ ಮತ್ತು ಮೊಸಾದ್‌ನೊಂದಿಗೆ ದೊಡ್ಡ ಸಂಬಂಧ ಇರುವ ರೊನನ್ ಬೊಗ್‌ಮ್ಯಾನ್ ನೇತೃತ್ವದ ಪತ್ರಕರ್ತರ ತಂಡ ಪೇಜರ್ ಆಪರೇಷನ್ ಕುರಿತು ಹೊಸ ವಿವರಗಳನ್ನು ಜಗತ್ತಿಗೆ ಬಹಿರಂಗಗೊಳಿಸಿದೆ.












