ಸನ್ಮಾರ್ಗ ವಾರ್ತೆ
ನುಸ್ರತ್ ಪರ್ವಿನ್ ಎಂಬ ವೈದ್ಯೆಯ ಜೊತೆ ಬಿಹಾರದ ಮುಖ್ಯಮಂತ್ರಿ, ನಿತೀಶ್ ಕುಮಾರ್ ವರ್ತಿಸಿದ ರೀತಿಯನ್ನು ಖಂಡಿಸಿ ಕಲ್ಬುರ್ಗಿಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ನಿತೀಶ್ ಕುಮಾರ್ ಅವರ ವರ್ತನೆ ತೀವ್ರ ಖಂಡನೀಯವಾದದ್ದು ಎಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಎಂಬುದು ವೈಯಕ್ತಿಕ ಗೌರವ ಮತ್ತು ಸಂವಿಧಾನ ನೀಡಿದ ಹಕ್ಕಾಗಿದೆ. ಈ ಹಕ್ಕನ್ನು ಭಾರತದ ಸಂವಿಧಾನ ರಕ್ಷಿಸುತ್ತದೆ. ಅಲ್ಲದೆ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಕೂಡ ಈ ಸಂವಿಧಾನ ನೀಡಿದೆ. ಯಾವುದೇ ವ್ಯಕ್ತಿ ಈ ಸ್ವಾತಂತ್ರ್ಯವನ್ನು ಕಸಿಯುವುದು ಮತ್ತು ಮಹಿಳೆಯ ಘನತೆಗೆ ಕುಂದುಂಟಾಗುವಂತೆ ನಡುಕೊಳ್ಳುವುದು ಪ್ರಜಾತಂತ್ರ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಮಹಿಳೆಯರು ಅಭಿಪ್ರಾಯ ಪಟ್ಟಿದ್ದಾರೆ.
ನಿತೀಶ್ ಕುಮಾರ್ ಅವರು ತಕ್ಷಣ ಸಾರ್ವಜನಿಕ ಕ್ಷಮೆ ಯಾಚಿಸಬೇಕು. ಮುಖ್ಯಮಂತ್ರಿಯಾಗಿರುವುದರಿಂದ ಈ ವರ್ತನೆಗೆ ಅವರಿಗೆ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೂಡ ಪ್ರತಿಭಟನಾಕಾರರು ಘೋಷಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಮಾ ಅತೆ ಇಸ್ಲಾಮಿ ಹಿಂದ್ ನಾಯಕಿ ಕೌಸರ್ ಫಾತಿಮಾ, ಸಾಮಾಜಿಕ ಹೋರಾಟಗಾರ್ತಿಯರಾದ ಶಹನಾಜ್ ಅಕ್ಥರ್, ಸಮ್ರಿನ್ ಶೈಕ್, ಸುರಯ್ಯ, ತಹ್ ಮಿಯಾ, ಮುಂತಾದವರು ಭಾಗಸಿದ್ದರು.
ಹಿಜಾಬ್ ನಮ್ಮ ಗೌರವ, ಇದು ಸಾಂವಿಧಾನಿಕ ಹಕ್ಕು, ನಮ್ಮ ಡಿಗ್ನಿಟಿಯನ್ನು ನಾವು ಕಾಪಾಡಿಕೊಳ್ಳುತ್ತೇವೆ ಎಂದು ಮುಂತಾಗಿ ಮಹಿಳೆಯರು ಘೋಷಣೆ ಕೂಗಿದರು.












