ಪಿ.ಚಿದಂಬರಂ ಬಂಧನ; ಇಂದು ಕೋರ್ಟಿಗೆ ಹಾಜರು ಪಡಿಸಲಿರುವ ಸಿಬಿಐ

0
327

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.22: ಐಎನ್‍ಎಕ್ಸ್ ಮೀಡಿಯ ಪ್ರಕರಣದಲ್ಲಿ ಬಂಧಿಸಲಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂರನ್ನು ಗುರುವಾರ ಮಧ್ಯಾಹ್ನದೊಳಗೆ ಕೋರ್ಟಿನಲ್ಲಿ ಹಾಜರುಪಡಿಸಲು ಸಿಬಿಐ ನಿರ್ಧರಿಸಿದೆ. ನಿನ್ನೆ ರಾತ್ರೆ ಅವರನ್ನು ಸಿಬಿಐ ಕೇಂದ್ರ ಕಚೇರಿಯಲ್ಲಿ ಒಂದೂವರೆ ಗಂಟೆಗಳವರೆಗೆ ಸಿಬಿಐ ವಿಚಾರಣೆ ನಡೆಸಿದೆ. ಗುರುವಾರ ಬೆಳಗ್ಗೆಯೂ ಅವರನ್ನು ಸಿಬಿಐ ಪ್ರಶ್ನಿಸಲಿದೆ. ನಂತರ ಕೋರ್ಟಿಗೆ ಹಾಜರು ಪಡಿಸಲಾಗುವುದು. ಪಿ.ಚಿದಂಬರಂರನ್ನು 14 ದಿವಸದ ಕಸ್ಟಡಿಗೆ ಸಿಬಿಐ ಕೋರ್ಟಿನಲ್ಲಿ ಮನವಿ ಮಾಡಲಿದೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿಯು ಚಿದಂಬರಂ ಸಿಬಿಐ ಮುಂದೆ ಹಾಜರಾಗಿರಲಿಲ್ಲ.

“ಇಂದ್ರಾಣಿ ಮುಖರ್ಜಿ ಪಿ.ಚಿದಂಬರಂ ವಿರುದ್ಧ ಪ್ರಮುಖ ಸಾಕ್ಷ್ಯ ಹೇಳಿದ್ದಾರೆ” ಎಂದು ಕೋರ್ಟಿಗೆ ಸಿಬಿಐ ತಿಳಿಸಲಿದೆ. ಐಎನೆಕ್ಸ್ ಮೀಡಿಯ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟು ಜಾಮೀನು ಅರ್ಜಿ ತಳ್ಳಿ ಹಾಕಿದ ಬಳಿಕ ಚಿದಂಬರಂ ಬಂಧನಕ್ಕೆ ಸಿಬಿಐ ಬಲೆ ಬೀಸಿತ್ತು. ಆದರೆ ನಿನ್ನೆ ಮೂರು ಬಾರಿ ಅವರ ಮನೆಗೆ ಭೇಟಿ ನೀಡಿದರೂ ಚಿದಂಬರಂರನ್ನು ಬಂಧಿಸಲಾಗಿರಲಿಲ್ಲ. ಇದೇ ವೇಳೆ ಬಂಧನ ತಡೆಯಬೇಕೆಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆಯನ್ನು ಶುಕ್ರವಾರವೇ ವಿಚಾರಣೆಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟಿನ ರಿಜಿಸ್ಟ್ರೀ ತಿಳಿಸಿದ ಹಿನ್ನೆಲೆಯಲ್ಲಿ ಬಂಧನ ಖಚಿತವಾಗಿತ್ತು. ತದನಂತರ ಬುಧವಾರ ರಾತ್ರೆ ಕಾಂಗ್ರೆಸ್ ಕಚೇರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿದರು. ನಂತರ ಸಿಬಿಐ ಅವರನ್ನು ಜೋರ್‍ಬಾಗ್‍ನ ಮನೆಯಿಂದ ಬಂಧಿಸಿತ್ತು.