ಸನ್ಮಾರ್ಗ ವಾರ್ತೆ
ದುಬೈಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ ಏನಾಗುತ್ತೆ? ಜಗತ್ತಿನಲ್ಲೇ ಅತ್ಯಂತ ಮುಂದುವರಿದ ನಗರ ಎಂದು ಗುರುತಿಸಿಕೊಂಡಿರುವ ದುಬೈಯಲ್ಲಿ ಮದ್ಯಪಾನಕ್ಕೆ ವಿರೋಧ ಇದೆಯಾ? ಅಲ್ಲಿ ಮದ್ಯ ಸೇವಿಸುವುದನ್ನು ತಡೆಯಲಾಗುತ್ತಾ? ಜಗತ್ತಿನ ವಿವಿಧ ರಾಷ್ಟ್ರಗಳಿಂದ ಬರುವ ಜನರಿಗೆ ಮದ್ಯ ಸೇವಿಸಲು ಅನುಮತಿ ಇಲ್ಲದಿದ್ದರೆ ಅವರು ಅಲ್ಲಿಗೆ ಬರ್ತಾರಾ ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. ಇದಕ್ಕೆ ಒಂದು ಕ್ಲಾರಿಟಿಯನ್ನು ದುಬೈ ಕ್ರಿಮಿನಲ್ ಕೋರ್ಟ್ ಮೊನ್ನೆ ಮೊನ್ನೆ ಒದಗಿಸಿದೆ.
ದುಬೈಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಪಾನ ಮಾಡುವಂತಿಲ್ಲ ಹಾಗೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಈ ನಿಯಮವನ್ನ ಉಲ್ಲಂಘಿಸಿ ಗಲ್ಫ್ ರಾಷ್ಟ್ರದ ಯುವತಿಯೋರ್ವಳು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿದ್ದಾಳೆ. ಪೊಲೀಸರು ಅದನ್ನು ಕಂಡು ಬಂಧಿಸಿದ್ದಾರೆ. ಆ ಸಂದರ್ಭದಲ್ಲಿ ಆಕೆ ಪೊಲೀಸರನ್ನು ನಿಂದಿಸಿದ್ದಾಳೆ. ಅಸಭ್ಯವಾಗಿ ವರ್ತಿಸಿದ್ದಾಳೆ. ಈ ಎಲ್ಲವನ್ನು ಕೂಡ ಮೊನ್ನೆ ದುಬೈ ಕ್ರಿಮಿನಲ್ ಕೋರ್ಟ್ ನಲ್ಲಿ ಪೊಲೀಸರು ನ್ಯಾಯಾಧೀಶರ ಮುಂದೆ ಆಧಾರ ಸಮೇತ ದಾಖಲಿಸಿದ್ದಾರೆ. ಇದೀಗ ದುಬೈ ಕ್ರಿಮಿನಲ್ ಕೋರ್ಟ್ ಈ ಯುವತಿಗೆ ಆರು ತಿಂಗಳು ಜೈಲು ಶಿಕ್ಷೆ ಮತ್ತು 20,000 ದಿರ್ಹಂ ದಂಡವನ್ನ ವಿಧಿಸಿದೆ.
ದುಬೈಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವಂತಿಲ್ಲ. ಮದ್ಯಪಾನಕ್ಕೆ ಅನುಮತಿ ಇರುವ ರೆಸ್ಟೋರೆಂಟ್ ಮತ್ತು ಲಾಂಚ್ ಗಳಲ್ಲಿ ಮಾತ್ರ ಮದ್ಯ ಸೇವಿಸಬಹುದಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಅನ್ನುವ ಸೂಚನೆಯನ್ನು ದುಬೈ ಕ್ರಿಮಿನಲ್ ಕೋರ್ಟು ನೀಡಿದೆ. ಮಾತ್ರ ಅಲ್ಲ ಶಿಕ್ಷೆಯನ್ನು ಪೂರೈಸಿದ ಬಳಿಕ ಈ ಯುವತಿಯನ್ನ ಆಕೆಯ ದೇಶಕ್ಕೆ ಗಡಿಪಾರು ಗೊಳಿಸಬೇಕು ಎಂದು ಕೂಡ ನ್ಯಾಯಾಲಯ ಕಟು ಆದೇಶ ನೀಡಿದೆ.
ಸಾಮಾನ್ಯವಾಗಿ ಇತರ ಗಲ್ಫ್ ರಾಷ್ಟ್ರಗಳಿಗಿಂತ ಭಿನ್ನವಾಗಿ ದುಬೈಯನ್ನು ಪರಿಗಣಿಸಲಾಗುತ್ತದೆ. ಅದು ಅತಿ ಹೆಚ್ಚು ಸ್ವಾತಂತ್ರ್ಯ ಇರುವ ಮತ್ತು ಯುರೋಪಿಯನ್ ರಾಷ್ಟ್ರಗಳಂತೆ ಬದುಕಲು ಅವಕಾಶ ಇರುವ ನಗರ ಎಂದು ಹೇಳಲಾಗುತ್ತೆ. ಆದರೆ ದುಬೈ ಹಾಗಿಲ್ಲ. ಯುರೋಪಿಯನ್ ರಾಷ್ಟ್ರಗಳಲ್ಲಿ ಎಲ್ಲಿ ಬೇಕಾದರೂ ಮದ್ಯ ಸೇವಿಸಬಹುದು. ಮಹಿಳಾ ಸ್ವಾತಂತ್ರ್ಯದ ವಿಷಯದಲ್ಲೂ ಯುರೋಪಿಯನ್ ರಾಷ್ಟ್ರಗಳ ನಿಲುವು ಬೇರೆ. ಆದರೆ ದುಬೈ ಜಗತ್ತಿನ ಎಲ್ಲಾ ನಾಗರಿಕರನ್ನು ಮತ್ತು ಕಂಪನಿಗಳನ್ನು ಆಹ್ವಾನಿಸುತ್ತಿದ್ದರೂ ಕೆಲವು ವಿಷಯಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಕಾನೂನನ್ನು ಈಗಲೂ ಪಾಲಿಸುತ್ತಿದೆ ಅದಕ್ಕೆ ಗಲ್ಫ್ ರಾಷ್ಟ್ರದ ಯುವತಿ ಒಂದು ಉದಾಹರಣೆ ಎಂದು ಹೇಳಲಾಗಿದೆ.












