ನಮ್ಮದೇ ದಿನಪತ್ರಿಕೆ ಮತ್ತು ಚಾನೆಲ್ ಪರಿಹಾರವೇ?

0
197

ಸನ್ಮಾರ್ಗ ವಾರ್ತೆ

  • ಸಯ್ಯದ್ ಸಆದತುಲ್ಲಾ ಹುಸೈನಿ
    ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟೀಯ ಅಧ್ಯಕ್ಷರು

ಸಂವಹನವು(ಇಬ್‌ಲಾಗ್) ಆದರ್ಶ ಸಮಾಜದ ಮೂರನೇ ಗುಣವಾಗಿದೆ. ಇದಕ್ಕೆ ಎರಡು ಹಂತಗಳಿವೆ. ಒಂದು, ಮೃದು ಎಂದು ಕರೆಯಬಹುದಾದ ಹಂತ. ಅಂದರೆ, ಜನರಿಗೆ ಮನವರಿಕೆಯಾಗುವಂತೆ, ಅವರಿಗೆ ತಿಳಿದಿರುವ ಭಾಷೆಯಲ್ಲಿ ಆ ಸಿದ್ಧಾಂತವನ್ನು ಪ್ರಸ್ತುತ ಪಡಿಸುವುದು. ಇದನ್ನು ಪ್ರಸ್ತುತ ಸಮಸ್ಯೆಗಳು ಮತ್ತು ನಡೆಯುತ್ತಿರುವ ಚರ್ಚೆಗಳೊಂದಿಗೆ ಲಿಂಕ್ ಮಾಡಬೇಕು. ಚರ್ಚೆಗಳ ಪ್ರಸ್ತುತ ಪಡಿಸುವಿಕೆ ಹಾಗೂ ಪುರಾವೆಗಳ ಮಂಡನೆ ಎಲ್ಲವೂ ಸಂಭೋದಿತ ಸಮೂಹವನ್ನು ಗಮನದಲ್ಲಿರಿಸಿ ಆಗಿರಬೇಕು. ಹೀಗೆ ಜನರನ್ನು ಆಕರ್ಷಿಸುವ ಒಂದು ಶೈಲಿ ಇರಬೇಕು.

ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಮುಸ್ಲಿಮರು ಇನ್ನೂ ಬಹಳ ಹಿಂದಿದ್ದಾರೆ. ಭಾರತೀಯ ಸಮಾಜವನ್ನು ಅಥವಾ ಅವರ ಸಾಮಾಜಿಕ ಮನಸ್ಸನ್ನು ಒಂದು ದಅವತ್/ಸಂದೇಶ ಪ್ರಚಾರದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳುವ ಪ್ರಯತ್ನಗಳು ಬಹಳ ಅಪರೂಪವಾಗಿ ಕಂಡು ಬರುತ್ತದೆ. ನಮ್ಮಲ್ಲಿ ಈಗ ಎರಡು ಶೈಲಿಗಳಿವೆ. ಒಂದು, ಮುಸ್ಲಿಮರ ನಡುವೆ ಪ್ರಚಾರದಲ್ಲಿರುವ ಸಾಂಪ್ರದಾಯಿಕ ಶೈಲಿ. ಎರಡನೆಯದು, ಆಧುನಿಕತೆಯನ್ನು ಎದುರಿಸಲು ನಮ್ಮ ಕಾಲದ ಮುಸ್ಲಿಮ್ ಚಿಂತಕರು ಅಭಿವೃದ್ಧಿ ಪಡಿಸಿದ ಶೈಲಿ. ಈ ಎರಡೂ ಶೈಲಿಗಳಿಗೆ ಇಂದಿಗೂ ಪ್ರಸ್ತುತತೆ ಮತ್ತು ಅರ್ಹತೆಯಿದೆ. ಆದರೆ ಅತಿ ವೇಗವಾಗಿ ಬದಲಾಗುತ್ತಿರುವ ಭಾರತೀಯ ಮನಸ್ಸನ್ನು ಅಧ್ಯಯನ ಮಾಡುವುದೂ ತುಂಬಾ ಅನಿವಾರ್ಯವಾಗಿದೆ. ಅಂತಹ ಪ್ರಯತ್ನಗಳು ಬಹಳ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ.

ಪವಿತ್ರ ಕುರ್‌ಆನ್‌ನ ಆಯತ್‌ಗಳನ್ನು ನೋಡು ವಾಗ ಅವೆಲ್ಲವೂ ಪುರಾವೆಗಳ ಆಧಾರದಲ್ಲಿ ಅವತೀರ್ಣಗೊಂಡಿದೆಯೆಂದು ಸ್ಪಷ್ಟವಾಗುತ್ತದೆ. ಅಭಿಸಂಬೋಧಿತರು ಬದಲಾದಂತೆ ಸಾಕ್ಷಿಗಳೂ ಬದಲಾಗುತ್ತಿರುತ್ತವೆ. ಕೆಲವೊಮ್ಮೆ, ಪ್ರಪಂಚದಲ್ಲಿ ಮತ್ತು ಸ್ವಂತ ಶರೀರದಲ್ಲೂ ದೇವಾಸ್ತಿತ್ವದ ದೃಷ್ಟಾಂತವನ್ನು ನೋಡಿರಿ ಎಂದು ಕುರ್‌ಆನ್ ಕರೆ ನೀಡುತ್ತದೆ. ಕೆಲವೊಮ್ಮೆ ಇತಿಹಾಸದಿಂದ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಪವಿತ್ರ ಕುರ್‌ಆನ್ ಆಧಾರ ಪ್ರಮಾಣವಾಗಿ ತಿಳಿಸುತ್ತದೆ. ಮಕ್ಕಾದ ಕುರೈಶರನ್ನು ಅಭಿಸಂಬೋಧಿಸುವುದಾದರೆ, ಅವರು ಪ್ರತಿ ದಿನವೂ ಹಾದು ಹೋಗುತ್ತಿರುವ ಐತಿಹಾಸಿಕ ಸ್ಮಾರಕಗಳತ್ತ ಬೊಟ್ಟು ಮಾಡಿ ಅವರೊಡನೆ ಮಾತನಾಡುತ್ತದೆ. ಗ್ರಂಥದವರನ್ನು ಸಂಭೋದಿಸುವುದೆಂದಾದರೆ, ಇಸ್ರಾಯೀಲ್ ಸಂತತಿಗಳು ಮತ್ತು ಅವರಿಗೆ ಬಂದ ಪ್ರವಾದಿಗಳು ಹಾಗೂ ಮಹಾ ಪುರುಷರನ್ನು ಪವಿತ್ರ ಕುರ್‌ಆನ್ ಎತ್ತಿ ತೋರಿಸುತ್ತದೆ. ಅಂದರೆ, ಒಂದೇ ವಿಚಾರವನ್ನು ಸಮರ್ಪಿಸುವಾಗಲೂ, ಅಭಿಸಂಬೋಧಿತರಿಗೆ ಅನುಗುಣವಾಗಿ ಉದಾಹರಣೆಗಳು ಬದಲಾಗುತ್ತವೆ ಎಂಬುದು ಕುರ್‌ಆನ್‌ನ ಶೈಲಿಯಾಗಿದೆ. `ತಸ್‌ರೀಫುಲ್ ಆಯಾತ್’ ಎಂದು ಕುರ್‌ಆನ್ ಈ ಶೈಲಿಯ ನ್ನು ಹೆಸರಿಸುತ್ತದೆ. “ಹೀಗೆ ನಾವು ನಮ್ಮ ನಿದರ್ಶನಗಳನ್ನು ಆಗಾಗ ವಿವಿಧ ರೀತಿಗಳಲ್ಲಿ ವಿವರಿಸುತ್ತೇವೆ.” “ನೀವು ಯಾರಿಂದಲೋ ಕಲಿತು ಬಂದಿದ್ದೀರಿ” ಎಂದು ಇವರು ಹೇಳಲಿಕ್ಕಾಗಿಯೂ ಜ್ಞಾನ ಹೊಂದಿದವರ ಮೇಲೆ ವಸ್ತು ಸ್ಥಿತಿಯನ್ನು ಪ್ರಕಟಗೊಳಿಸಲಿಕ್ಕಾಗಿಯೂ ನಾವು ಹೀಗೆ ಮಾಡುತ್ತೇವೆ.” (ಅಲ್ ಅನ್‌ಆಮ್: 105)

“ನಾವು ನಮ್ಮ ಸಂದೇಶವನ್ನು ಸಾರಲಿಕ್ಕಾಗಿ ರವಾನಿಸಿದ ಪ್ರವಾದಿಗಳ ಪೈಕಿ ಪ್ರತಿಯೊಬ್ಬರೂ ತನ್ನ ಜನಾಂಗದವರಿಗೆ ಚೆನ್ನಾಗಿ ವಿವರಿಸಿಕೊಡಲಿಕ್ಕಾಗಿ ಅವರ ಭಾಷೆಯಲ್ಲೇ ಸಂದೇಶ ಕೊಟ್ಟಿರುತ್ತಾರೆ.” (ಇಬ್ರಾಹೀಮ್- 4) `ಜನರ ಭಾಷೆ’ ಎಂದರೆ ಅರೆಬಿಕ್, ಹಿಬ್ರೂ ಅಥವಾ ಪಾರ್ಸಿಯಂತಹ ಯಾವುದೇ ಭಾಷೆ. ಆದರೆ ಭಾಷೆಯು ತಾಂತ್ರಿಕ ಶಬ್ದಗಳು, ಪದಗಳು, ಪುರಾಣಗಳು, ಭಾಷಾ ವೈಶಿಷ್ಟ್ಯಗಳು, ರೂಪಕಾಲಂಕಾರಗಳು… ಹೀಗೆ ಎಲ್ಲವನ್ನೂ ಒಳಗೊಂಡಿರುತ್ತವೆ. ಭಾಷೆ ಎಂದು ಹೇಳುವಾಗ ಕುರ್‌ಆನ್ ಇವೆಲ್ಲವನ್ನೂ ಉದ್ದೇಶಿಸಿದೆ.

ಆದ್ದರಿಂದ ಪವಿತ್ರ ಕುರ್‌ಆನ್‌ನ ಭಾಷೆಯನ್ನು ಅರ್ಥಮಾಡಿಕೊಳ್ಳುವ ಪ್ರಮುಖ ಮೂಲವೆಂದರೆ ಪವಿತ್ರ ಕುರ್‌ಆನ್ ಅವತೀರ್ಣವಾದ ಕಾಲದ ಜಾಹಿಲೀ ಸಾಹಿತ್ಯವೆಂದು ಕೆಲವು ಕುರ್‌ಆನ್ ವ್ಯಾಖ್ಯಾನಗಾರರು ಅಭಿಪ್ರಾಯ ಪಟ್ಟಿದ್ದಾರೆ. ಹೇಳುವ ವಿಷಯ ಇಷ್ಟೇ. ನಮ್ಮ ದೇ ಶದಲ್ಲಿರುವ ಜನಪ್ರಿಯ ಭಾಷೆಗಳಲ್ಲಿ ಸಂವಹನ ನಡೆಸುವ ಸಾಮರ್ಥ್ಯವನ್ನು ಮುಸ್ಲಿಮರು ಹೊಂದಿರಬೇಕು. ಇಂದಿನ ದಿನಗಳ ಪ್ರಸ್ತುತ ಪಡಿಸುವ ರೀತಿಗಳ ಕುರಿತು ಆಳವಾದ ತಿಳುವಳಿಕೆ ಹೊಂದಿರಬೇಕು. ನಮ್ಮ ಕಾಲದಲ್ಲಿ ವಿವಿಧ ಭಾಷೆಗಳಿವೆ. ಅವುಗಳಲ್ಲಿ ಒಂದು ಶೈಕ್ಷಣಿಕ ಮತ್ತು ಪಾಂಡಿತ್ಯಪೂರ್ಣ ಭಾಷೆ. ಇನ್ನೊಂದು, ವೈಜ್ಞಾನಿಕ ಭಾಷೆ. ವೈಜ್ಞಾನಿಕ ಭಾಷೆಯಲ್ಲಿಯೇ ಶುದ್ಧ ವಿಜ್ಞಾನವು ಒಂದು ಶೈಲಿಯಾಗಿದೆ. ಸಮಾಜಶಾಸ್ತ್ರ ವಿಷಯಗಳಿಗೆ ತೀರಾ ಭಿನ್ನವಾದ ಶೈಲಿಗಳಿವೆ. ಇನ್ನು ಪ್ರತಿಯೊಬ್ಬರೂ ಮಾಡುವ ತಾರ್ಕಿಕತೆಯನ್ನೂ ನೋಡಿ. ಪ್ರತಿಯೊಬ್ಬರಿಗೂ ತನ್ನದೇ ಆದ ಪ್ರಸ್ತುತಪಡಿಸುವ ಶೈಲಿಯೂ, ತಾಂತ್ರಿಕ ಶಬ್ದಗಳೂ ಇವೆ. ಇನ್ನು ಸಾಹಿತ್ಯ ಭಾಷೆಯೆಂದಾದರೆ ಅದು ಬೇರೊಂದು ರೀತಿಯಲ್ಲಿದೆ. ಪತ್ರಿಕೆ/ಮಾಧ್ಯಮ ಭಾಷೆ ಎಂಬ ಇನ್ನೊಂದಿದೆ. ರಾಜಕೀಯ ವಿವರಣೆಗಳನ್ನು ನಡೆಸುವ, ಭಾವನಾತ್ಮಕ ಮನವಿಗಳನ್ನು ಮಾಡುವ ಮತ್ತು ಘೋಷಣೆಗಳನ್ನು ರಚಿಸುವ ಒಂದು `ಭಾಷಣ’ದ ಭಾಷೆಯೂ ಇದೆ. ಒಂದು ಆದರ್ಶ ಸಮಾಜಕ್ಕೆ ಒಂದು ಭಾಷೆಯೊಳಗಿನ ಈ ಎಲ್ಲಾ ಭಾಷಾ ಪ್ರಭೇದಗಳ ಉತ್ತಮ ಅರಿವು ಇರಬೇಕು. ಸೂಕ್ತ ಸಂದರ್ಭಗಳಲ್ಲಿ ಪ್ರತಿಯೊಂದನ್ನು ಪ್ರತಿಯೊಬ್ಬರಿಗೂ ಪ್ರಯೋಗಿಸಲು ಸಾಧ್ಯವಾದರೆ ಮಾತ್ರ ಆ ಜನ ವಿಭಾಗವು ಶಕ್ತಿಯುತವಾಗಲು ಸಾಧ್ಯ.

ಆಧುನಿಕ ಪ್ರಚಾರ ವಿಧಾನಗಳಲ್ಲಿ ಎರಡು ರೀತಿಗಳಿವೆ. ಮೊದಲ ವಿಧಾನವೆಂದರೆ ಮಾನವನ ಆಲೋಚನೆ ಮತ್ತು ಬುದ್ಧಿಶಕ್ತಿಯೊಂದಿಗೆ ಸಂವಾದ ಮಾಡುವುದು. ಆಧಾರಗಳನ್ನು ನೀಡಿಯೂ ಹಾಗೂ ತಾರ್ಕಿಕತೆಯ ಮೂಲಕ ಇನ್ನು ತರ್ಕಬದ್ಧ ಮಾದರಿ ಎಂದು ಕರೆಯಲಾಗುತ್ತದೆ. ಎರಡನೆಯ ವಿಧಾನವೆಂದರೆ ಕಥೆಯ ಮೂಲಕ ಅಥವಾ ಇನ್ನಿತರ ರೀತಿಯಿಂದ ಮನುಷ್ಯನಿಗೆ ಭಾವನಾತ್ಮಕವಾಗಿ ತಿಳಿಯಪಡಿಸುವುದು.
ಇದನ್ನು ನರೆಟಿವ್ ಪರಾಡಿಗಮ್ ಎಂದು ಕರೆಯಲಾಗುತ್ತದೆ. ಈ ಎರಡು ರೀತಿಯ ಶೈಲಿಗಳೂ ಅಗತ್ಯವೆಂದು ಪವಿತ್ರ ಕುರ್‌ಆನ್ ಹೇಳುತ್ತದೆ. “ಪ್ರವಾದಿಗಳೇ, ನೀವು ಯುಕ್ತಿ ಮತ್ತು ಸದುಪ ದೇಶದ ಮೂಲಕ ದೇವನ ಮಾರ್ಗಕ್ಕೆ ಆಹ್ವಾನಿಸಿರಿ ಮತ್ತು ಜನರೊಂದಿಗೆ ಉತ್ತಮ ರೀತಿಯಲ್ಲಿ ಸಂವಾದ ಮಾಡಿರಿ.” (ಅನ್ನಹ್ಲ್- 128)

ಇದರಲ್ಲಿ ಸುಂದರವಾದ ಸದುಪದೇಶ ಎಂದರೇನೆಂದು ಮೌಲಾನಾ ಮೌದೂದಿ ವ್ಯಾಖ್ಯಾನಿಸುವುದು ಹೀಗೆ:
“ಸಂಭೋದಿತರನ್ನು ಕೇವಲ ಉದಾಹರಣೆಗಳನ್ನು ನೀಡಿ ಸಮಾಧಾನ ಪಡಿಸುವುದಕ್ಕೆ ಸೀಮಿತವಾಗದೆ ಅವರ ಭಾವನೆಗಳನ್ನು ತಟ್ಟಿ ಎಬ್ಬಿಸಬೇಕು. ಕೇವಲ ಬೌದ್ಧಿಕ ವಿಧಾನದಿಂದ ದುಷ್ಕೃತ್ಯ ಗಳನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ. ಅದರೊಂದಿಗೆ ಅವುಗಳ ಕುರಿತು ಮನುಷ್ಯನಿಗಿರುವ ನೈಸರ್ಗಿಕ ದ್ವೇಷವನ್ನು ಎಬ್ಬಿಸಿ, ಅದರ ದುಷ್ಪರಿ ಣಾಮಗಳ ಕುರಿತು ಭೀತಿಯನ್ನು ಹುಟ್ಟು ಹಾಕಬೇಕು. ಅದೇರೀತಿ, ಸನ್ಮಾರ್ಗ ಮತ್ತು ಸತ್ಕರ್ಮಗಳ ಪ್ರಯೋಜನವನ್ನು ಬುದ್ಧಿಪೂರ್ವಕವಾಗಿ ಸ್ಥಾಪಿಸಿದರೆ ಮಾತ್ರ ಸಾಕಾಗದು. ಅವುಗಳೊಂದಿಗೆ ಒಲವು ಮತ್ತು ಬಯಕೆಯನ್ನು ಸಹ ಬೆಳೆಸಿಕೊಳ್ಳಬೇಕು. ಈ ಭಾವನಾತ್ಮಕ ಬಾಂಧವ್ಯದ ಭೋಧನೆಯನ್ನು ನಾವು `ಕಥನ ಮಾದರಿ’ ಎಂದು ಕರೆಯುತ್ತೇವೆ.

ನಮ್ಮ ಕಾಲದಲ್ಲಿ ಚರ್ಚೆ ಮತ್ತು ಚರ್ಚೆಗಳಿಗೆ ದಿಕ್ಕು ನಿರ್ಣಯಿಸಲು ಸಾಧ್ಯವಾಗುವುದು ಎಂಬುದು ಒಂದು ಉತ್ತಮ ಕಲೆಯಾಗಿದೆ. ಮ ನುಷ್ಯನ ಗಮನವನ್ನು ತಪ್ಪಿಸಲು ವಿವಿಧ ರೀತಿಯ ಕುತಂತ್ರಗಳು ನಡೆಯುತ್ತಿರುವ ಕಾಲವಿದು. ನಾವು ಬಯಸುವ ವಿಷಯಗಳ ಕಡೆಗೆ ಸಾರ್ವಜನಿಕ ಗಮನವನ್ನು ಹೇಗೆ ಸೆಳೆಯಬಹುದು? ಎಲ್ಲರಿಗೂ ಸ್ವೀಕಾರಾರ್ಹವಾದ ಚಿಂತನೆಯನ್ನು ರೂಪಿಸಿ, ಆಶಯಗಳನ್ನು ಅದಕ್ಕೆ ಹೇಗೆ ಜೋಡಿಸಬಹುದು. ಜನರನ್ನು ತಾವುದ್ದೇಶಿಸುವ ದಿಕ್ಕಿಗೆ ತರಲು ಘಟನೆಗಳನ್ನು ಹೇಗೆ ವಿಶ್ಲೇಷಿಸಬೇಕು? ಇವೆಲ್ಲವನ್ನೂ ಪ್ರತಿಭೆಯಾಗಿ ಕಾಣುವ ಕಾಲವಿದು. ಆದ್ದರಿಂದ ನಮ್ಮ ಹೋರಾಟವು ಜಾಹಿಲಿಯ ಮೂಲಭೂತ ತತ್ವಗಳ ವಿರುದ್ಧದ ಬದಲಿಗೆ ಅದು ಉತ್ಪಾದಿಸುವ ಸುಳ್ಳು ಪ್ರಚಾರ ತಂತ್ರಗಳು / ಪ್ರೊಪಗಂಡದ ವಿರುದ್ಧವಾಗಿದೆ. ಇದರ ಕುರಿತು ನಮಗೆ ಉತ್ತಮ ತಿಳುವಳಿಕೆ ಇದ್ದರೆ ಮಾತ್ರ. ನಾವು ಅಭಿವ್ಯಕ್ತಿಯ ವೈಜ್ಞಾನಿಕ ವಿಧಾನಗಳ ಪರಿಚಯವನ್ನು ಪಡೆಯಬಹುದು.

ಆದರ್ಶ ಪ್ರಚಾರದ ಎರಡನೇಯ ಹಂತವೆಂದರೆ ಮಾಧ್ಯಮಗಳು: ಯಾವುದೇ ಸಮಾಜದಲ್ಲೂ ಮಾಧ್ಯಮ ಗಳ ಪ್ರಭಾವವು ಹೆಚ್ಚಾದಂತೆ, ಆ ಸಮಾಜವು ಘಟನೆಗಳನ್ನು ನೈಜ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುತ್ತದೆ. ಆಗ ವ್ಯಕ್ತಿಯ ವರ್ತನೆಗಳು ಅವನ ನಂಬಿಕೆಗಳಿಂದ ರೂಪುಗೊಳ್ಳುವುದಿಲ್ಲ. ಅದನ್ನು ಒಂದು ಹೊರಗಿನ ಶಕ್ತಿಯು ರೂಪುಗೊಳಿಸುತ್ತದೆ. ಘಟನೆಗಳನ್ನು ಯಾವ ರೀತಿ ನೋಡಬೇಕೆಂದು ಮಾಧ್ಯಮಗಳು ಇಚ್ಛಿಸುತ್ತವೋ ಆ ರೀತಿಯಲ್ಲೇ ಪ್ರತಿಯೊಬ್ಬರೂ ಅದನ್ನು ನೋಡುತ್ತಾರೆ. ವ್ಯಕ್ತಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆಯಲ್ಲಾ ಎಂದು ನಮಗೆ ಹೇಳಬಹುದಾದರೂ, ಆತ ಒಂದು ಬಾಹ್ಯಶಕ್ತಿಗೆ ವಿಧೇಯನಾದ ರೀತಿಯಲ್ಲಿರುತ್ತಾನೆ. ಹೀಗೆ ಜನರಿಗೆ ದೊರೆಯುವ ವಿವರಗಳನ್ನು, ಅವರ ಅಭಿಪ್ರಾಯ ಗಳನ್ನು ನಿರ್ಬಂಧಿಸಲಾಗುತ್ತದೆ ಎಂಬುದು ಆಧುನಿಕ ಲೋಕದ ಶಾಪಗಳಲ್ಲಿ ಒಂದಾಗಿದೆ. ಮಾನವನ ಚಿಂತನೆ, ಸ್ವಾತಂತ್ರ್ಯ ಮುಕ್ತ ಮನಸ್ಸುಗಳ ಮೇಲೆ ಈ ನಾಗರಿಕತೆಯು ಸಂಕೋಲೆಗಳನ್ನು ಹಾಕಿದೆ. ಮುಖ್ಯವಾಗಿ ಮಾಧ್ಯಮಗಳ ಮೂಲಕ ಇವುಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹಿಂದಿನ ಕಾಲದ ಉಗ್ರ ಸರ್ವಾಧಿಕಾರಿಯೂ ಮಾಡಲಾಗದ್ದನ್ನು ಇಂದು ಹೊಸ ತಂತ್ರಜ್ಞಾನ ಮತ್ತು ಅದನ್ನು ಬಳಸಿಕೊಳ್ಳುವ ಮಾಧ್ಯಮಗಳ ಮೂಲಕವೂ ಮಾಡಬಹುದು. ಹೊರಗೆ ನೋಡುವಾಗ ಜನರಿಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ.

ಮಾಧ್ಯಮಗಳ ಪ್ರಭಾವವು ಆಯಾ ಕಾಲದ ರಾಜಕೀಯ ವಿಷಯಗಳಲ್ಲಿ ಸೀಮಿತವಾಗಿರುತ್ತದೆ ಎಂಬ ನಂಬಿಕೆಯಿದೆ. ಮಾಧ್ಯಮಗಳು ಆಯಾ ಕಾಲದ ಆರ್ಥಿಕ, ರಾಜಕೀಯ ದೃಷ್ಟಿಕೋನಗಳನ್ನು ಪ್ರಭಾವಿಸುತ್ತದೆ ಎಂಬ ವಿಷಯ ದಲ್ಲಿ ಸಂಶಯವಿಲ್ಲ. ಮಾಧ್ಯಮವು ಸಿದ್ಧಾಂತ ಮತ್ತು ಸಾಂಸ್ಕೃತಿಕ ಅಡಿಪಾಯಗಳ ಮೇಲೆ ಆಳವಾದ ಪ್ರಭಾವವನ್ನು ಹೊಂದಿಗೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಗ್ರಾಹಕರಿಗೆ ತಿಳಿಯದಂತೆ ಮಾಧ್ಯಮಗಳು ಪಾಶ್ಚಿಮಾತ್ಯ ತತ್ವ ಮತ್ತು ಸಂಸ್ಕೃತಿಯನ್ನು ಸದ್ದಿಲ್ಲದೆ ಬಿತ್ತರಿಸುತ್ತಿದೆ. ಮಾಧ್ಯಮ ಚಟುವಟಿಕೆಯು ನೈಜ ಮಾಹಿತಿಯನ್ನು ಮುಚ್ಚಿ ಹಾಕಲು, ಕೆಲವು ನೈತಿಕ ವ್ಯವಸ್ಥೆಯನ್ನು ನಾಶಮಾಡಲು ಅಥವಾ ಸಾರ್ವಜನಿಕ ಅಭಿಪ್ರಾಯವನ್ನು ಬೇರೆಡೆಗೆ ತಿರುಗಿಸಲು ಮಾತ್ರ ಸೀಮಿತವಾಗಿಲ್ಲ. ಇದು ಸಂಸ್ಕೃತಿಯನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿದೆ. ಚಿಂತನೆಯ ಚೌಕಟ್ಟನ್ನು ಬದಲಾಯಿಸುವುದು ಮಾತ್ರವಲ್ಲ, ಚಿಂತನೆಯ ಹಾಗೂ ಅಭಿಪ್ರಾಯ ರೂಪೀಕರಣದ ವಿಧಾನವನ್ನೇ ಬದಲಾಯಿಸುತ್ತಿದೆ. ವ್ಯಕ್ತಿ ಮತ್ತು ಸಮಾಜದ ಮನಸ್ಸನ್ನು ಮತ್ತು ಪ್ರಜ್ಞೆಯ ಮೇಲೆಯೂ ಪ್ರಭಾವ ಬೀರುತ್ತಿದೆ. ಆದ್ದರಿಂದ ಸಾರ್ವಜನಿಕ ಪ್ರಜ್ಞೆಯ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲ, ಅಭಿಪ್ರಾಯ ರೂಪೀಕರಣಕ್ಕೆ ಒಂದು ಚಿಂತನಾ ಮಾದರಿಯನ್ನು ಮಾಧ್ಯಮಗಳು ರೂಪಿಸಿಕೊಡುತ್ತಿವೆ.

ದಿನಪತ್ರಿಕೆ, ನಿಯತಕಾಲಿಕೆ ಅಥವಾ ಚಾನೆಲ್‌ನ್ನು ನಡೆಸಿದರೆ ಈ ಸಮಸ್ಯೆಯು ಮುಕ್ತಾಯಗೊಳ್ಳುತ್ತದೆ ಎಂಬುದು ಇದರ ಅರ್ಥವಲ್ಲ. ನಮಗೆ ಮಾಧ್ಯಮ ತಜ್ಞರು/ಮಾಧ್ಯಮ ಎಕ್ಸ್ಪರ್ಟ್ಸ್ ಬೇಕಾಗಿದೆ. ಮೀಡಿಯಾ ಡೈನಮಿಕ್ಸ್ ನ ಕುರಿತು ಆಳವಾದ ಪಾಂಡಿತ್ಯವಿರುವವರ ಅಗತ್ಯವಿದೆ. ಅಂತಹವರಿಗೆ ಮಾತ್ರ ಹೊಸ ಮಾಧ್ಯಮ ನಿರೂಪಣೆಗಳನ್ನು ನಿರ್ಮಿಸಲು ಸಾಧ್ಯ. ಅಂತಹ ತಜ್ಞರು ಇದ್ದರೆ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳಿಂದಲೇ ನಮಗೆ ಬಹಳಷ್ಟು ಮಾಡಬಹುದು. ಇತರರ ಮಾಲಿಕತ್ವದ ಮೀಡಿಯಾದ ಮೇಲೆ ಪ್ರಭಾವ ಬೀರಬಹುದು. ಇಲ್ಲದಿದ್ದರೆ `ನಮ್ಮ ಮಾಧ್ಯಮ’ವು ಮೇಲ್ನೋಟಕ್ಕೆ ನಮ್ಮ ಕೆಲವು ಭಾವನೆಗಳನ್ನು ಶಮನಗೊಳಿಸಲು ಸಹಾಯಕವಾಗಬಹುದು. ಅಂತಹ ಮೀಡಿಯಾ ವ್ಯವಸ್ಥೆಗಳಿಗೆ ಅಸ್ತಿತ್ವದಲ್ಲಿರುವ ಟ್ರೆಂಡ್‌ಗಳನ್ನು ತಡೆಯಲು ಸಾಧ್ಯವಿಲ್ಲ. ಮಾತ್ರವಲ್ಲ ಕೆಲವೊಮ್ಮೆ ಅದು ಮುಖ್ಯವಾಹಿನಿಯೊಂದಿಗೆಯೇ ಸಾಗುತ್ತದೆ.