ಚೌಕಟ್ಟಿನೊಳಗಿನ ಇಸ್ಲಾಮ್ ಮತ್ತು ವಾಸ್ತವ

0
379

ಸನ್ಮಾರ್ಗ ಸಂಪಾದಕೀಯ

ಇಸ್ಲಾಮನ್ನು ಒಂದು ನಿರ್ದಿಷ್ಟ ಫ್ರೇಮ್‌ನೊಳಗಿಟ್ಟು ಹಂಚುವ ಪ್ರಯತ್ನವನ್ನು ಈ ದೇಶದಲ್ಲಿ ಒಂದು ಗುಂಪು ನಿರಂತರ ಮಾಡುತ್ತಿದೆ. ಈ ಫ್ರೇಮ್‌ನೊಳಗೆ ಜಿಹಾದ್, ಕಾಫಿರ್, ತಲಾಕ್, ಹಿಜಾಬ್, ಬುರ್ಖಾ, ಗಡ್ಡ, ಟೋಪಿ, ಜನಸಂಖ್ಯೆ, ಪ್ರವಾದಿ, ಅಲ್ಲಾಹು.. ಮುಂತಾದುವುಗಳನ್ನು ತುಂಬಿಸಿಟ್ಟಿದ್ದಲ್ಲದೇ ಇವುಗಳಿಗೆ ಕೋರೆ ಹಲ್ಲು, ವಿಕಾರ ಉಗುರು, ಭೀಕರ ಆಕಾರವನ್ನು ಕೊಟ್ಟು ಜನಸಾಮಾನ್ಯರನ್ನು ಭಯಪಡಿಸುತ್ತಲೂ ಇದೆ.

ಹಿಂದೂಗಳನ್ನು ಕೊಲ್ಲಲು ಕರೆ ಕೊಡುವ ಮತ್ತು ಹಿಂದೂ ಹೆಣ್ಮಕ್ಕಳನ್ನು ಮರುಳು ಮಾಡಿ ವರಿಸುವುದಕ್ಕೆ ಪ್ರಚೋದಿಸುವ ಪದವಾಗಿ ಜಿಹಾದನ್ನು ಅದು ಬಿಂಬಿಸುತ್ತಿದೆ. ಕಾಫಿರ್ ಎಂದರೆ ಹಿಂದೂ ಎಂದು ಅರ್ಥ ಎಂದೂ ಅದು ಹೇಳುತ್ತಿದೆ. ‘ಕಾಫಿರರನ್ನು ಕೊಲ್ಲಿರಿ’ ಎಂಬ ವಾಕ್ಯ ಕುರ್‌ಆನಲ್ಲಿದ್ದು, ಇದು ಹಿಂದೂಗಳ ಹತ್ಯೆಗೆ ನೇರವಾಗಿ ಕರೆ ಕೊಡುತ್ತಿದೆ ಎಂದೂ ಈ ಗುಂಪು ವಾದಿಸುತ್ತಿದೆ. ಕುರ್‌ಆನ್‌ನಲ್ಲಿ ಹಿಂದೂ ವಿರೋಧಿಯಾದ 24 ವಚನಗಳಿದ್ದು, ಅವನ್ನು ತೆರವುಗೊಳಿಸಬೇಕು ಎಂದು ವಾದಿಸುವವರೂ ಈ ಗುಂಪಿನಲ್ಲಿದ್ದಾರೆ. ಇಸ್ಲಾಮ್‌ನ ವಿವಾಹ ವಿಚ್ಛೇದನ, ವಸ್ತ್ರ ಸಂಹಿತೆಯಿಂದ ಹಿಡಿದು ಸಾಂಸ್ಕೃತಿಕ ಪ್ರತೀಕವಾದ ಗಡ್ಡ, ಟೋಪಿ, ಪೈಜಾಮಗಳ ವರೆಗೆ ಮತ್ತು ಪ್ರವಾದಿ ಮುಹಮ್ಮದ್‌ರಿಂದ ತೊಡಗಿ ಕುರ್‌ಆನ್ ಉಲ್ಲೇಖಿಸುವ ಅಲ್ಲಾಹು ವರೆಗೆ, ಎಲ್ಲದರ ಬಗ್ಗೆಯೂ ಈ ಗುಂಪು ಅತೀ ವಿಚಿತ್ರ ಮತ್ತು ಅತೀವ ದ್ವೇಷದ ಪ್ರಚಾರವನ್ನೂ ಮಾಡುತ್ತಿದೆ. ನಿಜವಾಗಿ,

ಯಾವುದೇ ಧರ್ಮದ ಪಾರಿಭಾಷಿಕ ಪದಗಳು ಮತ್ತು ಆ ಧರ್ಮದ ಅನುಯಾಯಿಗಳಲ್ಲಿ ಕಂಡುಬರುವ ಆಚರಣೆಗಳ ಬಗ್ಗೆ ಅಧಿಕೃತವಾಗಿ ವಿವರವನ್ನು ನೀಡಬೇಕಾದವರು ಆಯಾ ಧರ್ಮದ ವಿದ್ವಾಂಸರೇ ಹೊರತು ಇನ್ನೊಂದು ಧರ್ಮದ ರಾಜಕಾರಣಿಗಳೋ ಸಂಘಟನೆಗಳ ಮುಖಂಡರೋ ಅಥವಾ ಸಂಘಟನೆಗಳ ಅನುಯಾಯಿಗಳೋ ಅಲ್ಲ. ಇಸ್ಲಾಮ್ ಧರ್ಮದ ಬಗ್ಗೆ ಮತ್ತು ಪವಿತ್ರ ಕುರ್‌ಆನ್‌ನಲ್ಲಿ ಇರುವ ಪದಗಳು ಮತ್ತು ವಚನಗಳ ಬಗ್ಗೆ ಮುಸ್ಲಿಮ್ ವಿದ್ವಾಂಸರು ಏನು ಹೇಳುತ್ತಾರೋ ಅದುವೇ ಅಧಿಕೃತ. ಹಿಂದೂ ಧರ್ಮದ ಬಗ್ಗೆ ಹಿಂದೂ ವಿದ್ವಾಂಸರೇ ಹೇಳಬೇಕು. ಅದನ್ನೇ ಅಧಿಕೃತ ವ್ಯಾಖ್ಯಾನ ಎಂದು ಪರಿಗಣಿಸಬೇಕು. ಆದರೆ ಈ ದೇಶದಲ್ಲಿರುವ ಒಂದು ಗುಂಪು ಈ ನಿಯಮಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ.

ಇಸ್ಲಾಮ್‌ನ ಪಾರಿಭಾಷಿಕ ಪದಗಳಿಗೆ ಮತ್ತು ಆಚರಣೆಗಳಿಗೆ ಈ ಗುಂಪೇ ಅರ್ಥವನ್ನು ಮತ್ತು ವ್ಯಾಖ್ಯಾನವನ್ನೂ ನೀಡುತ್ತಿದೆ. ಈ ಗುಂಪು ನೀಡುತ್ತಿರುವ ಅರ್ಥ ಮತ್ತು ವ್ಯಾಖ್ಯಾನಗಳು ಇಸ್ಲಾಮ್‌ಗೆ ಎಷ್ಟು ಅನ್ಯವಾಗಿದೆಯೆಂದರೆ, ಇಸ್ಲಾಮ್‌ನ ಯಾವ ವಿದ್ವಾಂಸರೂ ಈ ಗುಂಪು ಪ್ರತಿಪಾದಿಸುವಂಥ ಅರ್ಥವನ್ನು ಕೊಟ್ಟೇ ಇಲ್ಲ. ಜಿಹಾದ್‌ಗಾಗಲಿ, ಕಾಫಿರ್‌ಗಾಗಲಿ ಈ ಗುಂಪು ನೀಡುವ ಅರ್ಥಕ್ಕೂ ಮುಸ್ಲಿಮ್ ವಿದ್ವಾಂಸರು ನೀಡಿರುವ ಅರ್ಥಕ್ಕೂ ತಾಳೆಯೇ ಆಗುತ್ತಿಲ್ಲ. ಪ್ರವಾದಿ ಮುಹಮ್ಮದರು(ಸ) ಪರಿಚಯಿಸಿದ ಪವಿತ್ರ ಕುರ್‌ಆನ್‌ನಲ್ಲಿ ಈ ಪದಗಳನ್ನು ಉಲ್ಲೇಖಿಸಿರುವುದು ಈ ಗುಂಪು ಹೇಳುತ್ತಿರುವಂಥ ಉದ್ದೇಶಕ್ಕಾಗಿ ಅಲ್ಲವೇ ಅಲ್ಲ.

ಈ ದೇಶದಲ್ಲಿ ಮುಸ್ಲಿಮರು ಸಾವಿರ ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಬದುಕುತ್ತಿದ್ದಾರೆ. ಮಾತ್ರವಲ್ಲ, ಇಲ್ಲಿಯವರೇ ಆಗಿ ಮಾರ್ಪಟ್ಟಿದ್ದಾರೆ. ಕೇರಳ ಮತ್ತು ಕರಾವಳಿ ಭಾಗದ ಮುಸ್ಲಿಮ್ ಪುರುಷರು ಲುಂಗಿ ಮತ್ತು ಶರ್ಟು ಧರಿಸಿದರೆ, ಉತ್ತರ ಭಾರತದ ಮುಸ್ಲಿಮ್ ಪುರುಷರು ಜುಬ್ಬಾ ಮತ್ತು ಕುರ್ತಾ ಧರಿಸುತ್ತಾರೆ. ವಿದ್ವಾಂಸರು ಸಾಮಾನ್ಯವಾಗಿ ಪೇಟ ಮತ್ತು ಟೋಪಿ ಧರಿಸುತ್ತಾರೆ. ಗಡ್ಡ ಬಿಡುವವರೂ ಬಿಡದವರೂ ಇದ್ದಾರೆ. ಉತ್ತರ-ದಕ್ಷಿಣದ ಮಹಿಳೆಯರ ವಸ್ತ್ರಗಳಲ್ಲೂ ಈ ವೈವಿಧ್ಯತೆ ಕಾಣಿಸುತ್ತಿದೆ. ಹಾಗಂತ,

ಈ ವೈವಿಧ್ಯತೆ ಕೇವಲ ಮುಸ್ಲಿಮರಿಗೆ ಸಂಬಂಧಿಸಿ ಮಾತ್ರ ಹೇಳಬೇಕಾಗಿಯೂ ಇಲ್ಲ. ಸಿಕ್ಖರಲ್ಲಿ ಪೇಟ, ಗಡ್ಡ ಸಂಸ್ಕೃತಿಯಿದೆ. ಕ್ರೈಸ್ತ ಸನ್ಯಾಸಿನಿಯರಲ್ಲಿ ಹಿಜಾಬ್ ಮತ್ತು ಮೈಮುಚ್ಚುವ ಉಡುಪು ಸಂಸ್ಕೃತಿಯಿದೆ. ಪುರುಷ ಧರ್ಮಗುರುಗಳು ಮುಸ್ಲಿಮ್ ವಿದ್ವಾಂಸರು ಧರಿಸುವಂಥ ಉದ್ದ ನಿಲುವಂಗಿ ಧರಿಸುತ್ತಾರೆ. ಜೈನ, ಬೌದ್ಧರಲ್ಲೂ ಉಡುಪು ಮತ್ತು ಆಹಾರ ವೈವಿಧ್ಯತೆಯಿದೆ. ಉತ್ತರ ಭಾರತದ ಹಿಂದೂ ಮಹಿಳೆಯರಲ್ಲಿ ಗೂಂಗಟ್ (ಮುಖ ಮರೆಸುವ ವಿಧಾನ) ಸಂಸ್ಕೃತಿಯಿದೆ. ಆದರೆ, ಈ ಎಲ್ಲವನ್ನೂ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಾಗಿ ನೋಡುತ್ತಾ, ಇವುಗಳಲ್ಲಿ ಒಂದನ್ನು ಮಾತ್ರ ಪ್ರತ್ಯೇಕಿಸಿ ಕಟಕಟೆಯಲ್ಲಿ ನಿಲ್ಲಿಸುವುದು ನ್ಯಾಯವಲ್ಲ. ಅಂದಹಾಗೆ,

ಈ ಸಂಚಿಕೆಯನ್ನು ಈ ಹಿನ್ನೆಲೆಯಲ್ಲಿಯೇ ತಯಾರಿಸಲಾಗಿದೆ. ಸತ್ಯ ಮತ್ತು ಸೌಹಾರ್ದ ಉಳಿಯಲಿ. ಅಸತ್ಯ ಮತ್ತು ದ್ವೇಷ ಅಳಿಯಲಿ ಎಂದಷ್ಟೇ ಹಾರೈಕೆ.