ಇಸ್ರೇಲ್‌ನೊಂದಿಗಿನ ಸಂಬಂಧವು ಫೆಲಸ್ತೀನಿಯರಿಗೆ ನೀಡಿದ ಬೆಂಬಲವನ್ನು ದುರ್ಬಲಗೊಳಿಸದು: ಉರ್ದುಗಾನ್

0
36

ಸನ್ಮಾರ್ಗ ವಾರ್ತೆ

ಇಸ್ತಾಂಬುಲ್: ಇಸ್ರೇಲ್ ನೊಂದಿಗೆ ತನ್ನ ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಟರ್ಕಿ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಅಪಸ್ವರ ಕೇಳಿ ಬಂದಿರುವ ಬೆನ್ನಿಗೆ,  ಈ ಬಗ್ಗೆ ಟರ್ಕಿ ಅಧ್ಯಕ್ಷ ಉರ್ದುಗಾನ್ ಸ್ಪಷ್ಟನೆ ನೀಡಿದ್ದಾರೆ.

ಇಸ್ರೇಲ್ ನೊಂದಿಗಿನ ಸಂಬಂಧವು ಫೆಲೆಸ್ತೀನಿಯರ ನೈಜ ಹಕ್ಕುಗಳಿಗೆ ಟರ್ಕಿ ನೀಡಿರುವ ಬೆಂಬಲವನ್ನು ದುರ್ಬಲಗೊಳಿಸದು ಎಂದು ಅವರು ಹೇಳಿದ್ದಾರೆ.

ಫೆಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಟರ್ಕಿಗೆ ಭೇಟಿ ನೀಡಿದ್ದು ಉರ್ದುಗಾನ್ ಜೊತೆ ಮಾತುಕತೆ ನಡೆಸಿದ ಬಳಿಕ ಟರ್ಕಿಯಿಂದ ಈ ಹೇಳಿಕೆ ಹೊರಬಿದ್ದಿದೆ. ಅಬ್ಬಾಸ್ ಅವರು ಮೂರು ದಿನಗಳ ಭೇಟಿಗಾಗಿ ಟರ್ಕಿಯಲ್ಲಿದ್ದಾರೆ.

ಟರ್ಕಿ ಮತ್ತು ಇಸ್ರೇಲ್ ನಡುವೆ ಸಂಬಂಧ ಸಹಜಗೊಳಿಸುವ ಬಗ್ಗೆ ಕಳೆದ ವಾರ ಹೇಳಿಕೆ ಬಿಡುಗಡೆ ಮಾಡಲಾಗಿತ್ತು. ಎರಡೂ ರಾಷ್ಟ್ರಗಳು ರಾಯಭಾರಿಗಳನ್ನು ಮರಳಿ ಸ್ಥಾಪಿಸುವ ಬಗ್ಗೆ ಕೂಡ ಹೇಳಿದ್ದುವು. ನಾಲ್ಕು ವರ್ಷಗಳ ಹಿಂದೆ ಎರಡೂ ರಾಷ್ಟ್ರಗಳು ತಮ್ಮ ರಾಯಭಾರಿಗಳನ್ನು ರಾಷ್ಟ್ರಗಳಿಂದ ಹೊರಹಾಕಿತ್ತು.

ಅಮೆರಿಕದ ರಾಯಭಾರ ಕಚೇರಿಯು ಜೆರುಸಲೇಂನಲ್ಲಿ ಆರಂಭವಾದುದನ್ನು ಗಾಜಾದ ಮಂದಿ ಪ್ರತಿಭಟಿಸಿದಾಗ ಇಸ್ರೇಲ್ ಗುಂಡಿನ ದಾಳಿ ನಡೆಸಿ ಅರವತ್ತು ಫೆಲೆಸ್ತೀನಿಯರನ್ನು ಹತ್ಯೆ ನಡೆಸಿತ್ತು. ಇದನ್ನು ಪ್ರತಿಭಟಿಸಿ ತನ್ನ ದೇಶದಲ್ಲಿರುವ ಇಸ್ರೇಲ್ ರಾಯಭಾರಿಯನ್ನು ಟರ್ಕಿ ಹೊರಹಾಕಿತ್ತು. ಆ ಬಳಿಕ ಇಸ್ರೇಲ್ ಕೂಡ ತನ್ನ ರಾಷ್ಟ್ರದಲ್ಲಿರುವ ಟರ್ಕಿ ರಾಯಭಾರಿಯನ್ನು ಹೊರಹಾಕಿತ್ತು‌. ಇದೀಗ ಟರ್ಕಿಯ ಹೇಳಿಕೆಯನ್ನು ಫೆಲಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಸ್ವಾಗತಿಸಿದ್ದಾರೆ.