ಸನ್ಮಾರ್ಗ ವಾರ್ತೆ
ಹಮಾಸನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೆ ಗಾಝಾದ ಮೇಲೆ ದಾಳಿ ಮುಂದುವರಿಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್ ಹೇಳಿದ್ದಾರೆ. ಗಾಝಾದ ಇಸ್ರೇಲ್ ನ ನಿಯಂತ್ರಣದ ಪ್ರದೇಶದಲ್ಲಿ ಹಮಾಸ್ ನಿರ್ಮಿಸಿರುವ ಭೂಗತ ಸುರಂಗಗಳನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿಯೂ ಮತ್ತು ಅದಕ್ಕೆ ಎದುರಾಗುವ ಯಾವುದನ್ನು ಪರಿಗಣಿಸುವುದಿಲ್ಲವೆಂದೂ ಅವರು ಹೇಳಿದ್ದಾರೆ.
ಗಾಝಾದ ಇಸ್ರೇಲ್ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಹಮಾಸ್ ಕಾರ್ಯಕರ್ತರನ್ನು ಸುರಕ್ಷಿತವಾಗಿ ಮರಳಿಸಬೇಕು ಎಂದು ಅಮೆರಿಕ ಹೇಳಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ರಫಾ ಪ್ರದೇಶದಲ್ಲಿರುವ ಸುರಂಗದಲ್ಲಿ 200ರಷ್ಟು ಆಯುಧಧಾರಿ ಹಮಾಸ್ ಕಾರ್ಯಕರ್ತರು ಅಡಗಿಕೊಂಡಿರುವುದಾಗಿ ಗುಪ್ತಚರ ಮಾಹಿತಿ ಲಭಿಸಿದೆ ಎಂದು ಅವರು ಹೇಳಿದ್ದಾರೆ.
ಹಮಾಸ್ ನ ವಿರುದ್ಧ ದಾಳಿ ಮುಂದುವರಿಯಲಿದೆ. ಅದರ ಸುರಂಗಗಳನ್ನು ನಾಶ ಮಾಡಲಾಗುವುದು. ಎಲ್ಲ ಒತ್ತೆಯಾಳುಗಳನ್ನು ಮರಳಿ ಪಡಕೊಳ್ಳುವುದರ ಜೊತೆಗೆ ಹಮಾಸನ್ನು ನಿಶಸ್ತ್ರಗೊಳಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.












