ಜಾಫರ್ ಶರೀಫರ ಅಗಲಿಕೆ ಮತ್ತು ರಾಜಕಾರಣಿಗಳ ಸವಕಲು ಹೇಳಿಕೆಗಳು

0
1057

ಇಸ್ಮತ್ ಪಜೀರ್

ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ಧಿ ಸಿ.ಕೆ.ಜಾಫರ್ ಶರೀಫ್ ವಯೋಸಹಜವಾಗಿ ಕಾಡುತ್ತಿದ್ದ ಖಾಯಿಲೆಗಳಿಂದ ಬಾಳ ಪಯಣ ಮುಗಿಸಿದರು. ಸರ್ವಶಕ್ತ ಅಲ್ಲಾಹನು ಅವರೆಲ್ಲಾ ಪಾಪಗಳನ್ನು ಮನ್ನಿಸಲಿ.

ಮನುಷ್ಯ ಎಂದ ಮೇಲೆ ಅದಕ್ಕಿಂತ ಹೆಚ್ಚಾಗಿ ರಾಜಕಾರಣಿ ಎಂದ ಮೇಲೆ ಅಧಿಕಾರದ ಆಶೆ ಇರುವುದು ಸರ್ವೇ ಸಾಮಾನ್ಯ. ಅದು ಜಾಫರ್ ಶರೀಫ್ ಸಾಹೇಬರಿಗೂ ಇತ್ತು. ಜಾಫರ್ ಶರೀಫರ ರಾಜಕೀಯ ಅನುಭವ ಮತ್ತು ಅರ್ಹತೆಯ ಲೆಕ್ಕಕ್ಕೆ ಅವರು ಈ ರಾಜ್ಯದ ಮುಖ್ಯಮಂತ್ರಿ‌ ಹುದ್ದೆಗೇರಲೇಬೇಕಿತ್ತು. ಅವರು ಮುಸ್ಲಿಮರೆಂಬ ಒಂದೇ ಕಾರಣಕ್ಕೆ ಅವರಿಗೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎನ್ನುವುದು ಸಂಕುಚಿತತೆಯಾದೀತು. ಆದರೆ ಅದೂ ಒಂದು ಕಾರಣ ಎಂದರೆ ತಪ್ಪಾಗದು. ಅದಾಗ್ಯೂ ಕಾಂಗ್ರೆಸ್ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಹೊರತಾಗಿ ಧಾರಾಳ ಅವಕಾಶಗಳನ್ನು ನೀಡಿದೆ.

ಇಂದಿರಾ ಗಾಂಧಿ ಇನ್ನೂ ಒಂದಷ್ಟು ಕಾಲ ಬದುಕಿದ್ದಿದ್ದರೆ ಅವರಿಗೆ ಮುಖ್ಯಮಂತ್ರಿ ಹುದ್ದೆ ಒಲಿಯುತ್ತಿತ್ತು ಎಂಬ ದಕ್ಷಿಣ ಕನ್ನಡದ ಪ್ರಮುಖ ಮುಸ್ಲಿಂ ಕಾಂಗ್ರೆಸ್ ನಾಯಕರಲ್ಲೊಬ್ಬರೂ ಬರಹಗಾರರೂ ಆದ ಫಾರೂಕ್  ಉಳ್ಳಾಲ್ ರ ಅಭಿಮತ ಸತ್ಯ.

ಲಂಕೇಶರು ಜಾಫರ್ ಶರೀಫರಲ್ಲಿ ಇನ್ನೊಬ್ಬ ನಝೀರ್ ಸಾಬರನ್ನು ಕನಸಿದ್ದರು. ನಝೀರ್ ಸಾಬರಿಗೆ ಸರಿಸಾಟಿಯಾಗುವ ವ್ಯಕ್ತಿತ್ವ ಜಾಫರ್ ಶರೀಫರದಲ್ಲದಿದ್ದರೂ ಆ ಬಳಿಕದ ಸ್ಥಾನವನ್ನು ಈ ರಾಜ್ಯದಲ್ಲಿ ಕೊಡಬಹುದಾದ ಮುಸ್ಲಿಂ ನಾಯಕರಲ್ಲಿ ಜಾಫರ್ ಶರೀಫ್ ಸಾಹೇಬರೂ ಒಬ್ಬರು.

ಮರ್ಹೂಂ ಬಿ.ಎ.ಮೊಯ್ದಿನಾಕರು ಇನ್ನೊಬ್ಬರು.

ಮೊಯ್ದಿನಾಕರ ಬಗ್ಗೆ ಲಂಕೇಶರಿಗೆ ಪ್ರೀತಿ ಇತ್ತು.

ಸುರತ್ಕಲ್ ಗಲಭೆಯ ಸಂದರ್ಭದಲ್ಲಿ ಎಂಟು ಅಮಾಯಕ ಜೀವಗಳು ಬಲಿಯಾದುದರಿಂದ ಲಂಕೇಶರು ಅತ್ಯಂತ ಕ್ರುದ್ಧರಾಗಿ ಮೊಯ್ದಿನಾಕರನ್ನು ಕಟುವಾಗಿ ಟೀಕಿಸಿದ್ದರು. ಲಂಕೇಶರ ಟೀಕೆಯ ಕುರಿತಾಗಿ ನಾನು ಮೊಯ್ದಿನಾಕರಲ್ಲಿ ಕೇಳಿದಾಗ ಅವರು “ಲಂಕೇಶ್ ಟೀಕಿಸಿದ್ದರಲ್ಲಿ ತಪ್ಪಿಲ್ಲ, ಅಲ್ಪಸಂಖ್ಯಾತ ನಾಯಕರಿಗೆ ತನ್ನ ಬರಹದ ಮೂಲಕ ಬೆಂಬಲ ನೀಡಿದ್ದ ಅವರಿಗೆ ನಮ್ಮನ್ನು ಟೀಕಿಸುವ ಹಕ್ಕೂ ಇತ್ತು. ಸುರತ್ಕಲ್ ಗಲಭೆ ನನ್ನ ರಾಜಕೀಯ ಬದುಕಿನ ಮಾತ್ರವಲ್ಲ, ನನ್ನ ಒಟ್ಟಾರೆ ಬದುಕಿನ ಅತ್ಯಂತ ನೋವಿನ ಘಟನೆಗಳಲ್ಲೊಂದು” ಎನ್ನುವಾಗ ಅವರ ಕಣ್ಣುಗಳು ಹನಿಗೂಡಿತ್ತು.

ಸುರತ್ಕಲ್ ಗಲಭೆಯ ಹಿಂದೆ ರಾಜ್ಯದ ಅತ್ಯಂತ ಪ್ರತಿಷ್ಠಿತ ರಾಜಕೀಯ ಹುದ್ದೆಯೇರಿದ್ದ ಮುಸ್ಲಿಮರಾದ ಮೊಯ್ದಿನಾಕರನ್ನು ಹಣಿಯುವ ಷಡ್ಯಂತ್ರವಿತ್ತು ಎಂದು ಫಾರೂಕ್ ಉಳ್ಳಾಲ್ ಬರೆದಿದ್ದರು. ಅದು ಅಪ್ಪಟ ಸತ್ಯವೂ ಹೌದು.

ಜಾಫರ್ ಶರೀಫರು ಯು.ಪಿ.ಎ.ಸರಕಾರದಲ್ಲಿ ಮತ್ತೆ ರೈಲ್ವೆ ಖಾತೆಯನ್ನು ಅಪೇಕ್ಷಿಸಿದ್ದರು.‌ ಆಗ ಅವರನ್ನು ಟೀಕಿಸಿದವರಲ್ಲಿ ನಾ‌ನೂ ಒಬ್ಬ. ಅದು ಆ ಬಾರಿ ಮಿತ್ರ ಪಕ್ಷದ ಲಾಲೂ ಪ್ರಸಾದ್ ಯಾದವ್ ಅವರಿಗೆ ಒಲಿದಿತ್ತು. ನಷ್ಟದಲ್ಲಿದ್ದ ರೈಲ್ವೆಯನ್ನು ಲಾಭದಾಯಕವಾಗಿ ಮಾಡುವ ಮೂಲಕ ಲಾಲೂ ತನ್ನ ಅರ್ಹತೆಯನ್ನು ಸಾಬೀತುಪಡಿಸಿದ್ದರು. ಮಾತ್ರವಲ್ಲ ಲಾಲೂ ಅವರ ಜನಪ್ರಿಯತೆ ಆ ಕಾಲದಲ್ಲಿ ದೇಶದ ಗಡಿಯಾಚೆಗೂ ವಿಸ್ತರಿಸಿ ಪಾಕಿಸ್ತಾನದ ಉನ್ನತ ಶಿಕ್ಷಣ ಸಂಸ್ಥೆಯೊಂದು ಲಾಲೂ ಅವರ ಉಪನ್ಯಾಸ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು.

ಜಾಫರ್ ಶರೀಫ್ ರೈಲ್ವೆ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದರು. ಜಾಫರ್ ಶರೀಫ್ ಆ ಹುದ್ದೆಯಿಂದ ಇಳಿಯುವಾಗ ಅದೇನೂ ನಷ್ಟದಲ್ಲಿರಲಿಲ್ಲ. ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರದ ಅವಧಿಯಲ್ಲಿ ರೈಲ್ವೆ ದಿವಾಳಿಯಂಚಿಗೆ ತಲುಪಿತ್ತು ಎಂಬುವುದು ಇಲ್ಲಿ ಉಲ್ಲೇಖನೀಯ.

ಜಾಫರ್ ಶರೀಫರನ್ನು ರಾಜಕೀಯವಾಗಿ ಯಾರೇ ಟೀಕಿಸಿದ್ದರೂ ಅದನ್ನು ದೊಡ್ಡ ಸಂಗತಿ ಮಾಡಬೇಕಿರಲಿಲ್ಲ. ಆದರೆ ಕೆಲವು ಕಾಂಗ್ರೆಸ್ ನಾಯಕರು ಅವರನ್ನು ನಿಕೃಷ್ಟವಾಗಿ ಕಂಡರು. ಅವರು ಅದರಿಂದ  ಅದೆಷ್ಟು ನೊಂದಿದ್ದರೆಂದರೆ ಒಂದು ಹಂತದಲ್ಲಿ ಅವರು ದೇವೇಗೌಡರನ್ನು ಭೇಟಿಯಾಗಿದ್ದರು.

ಅದನ್ನೇ  ಮುಂದಿಟ್ಟುಕೊಂಡು ಅವರನ್ನು ಕೆಲವು ಕಾಂಗ್ರೆಸ್ ನಾಯಕರು ಕೀಳಾಗಿ ಟೀಕಿಸಿದ್ದರು. ಪಕ್ಷ ಬೇರೆಯಾದ ಮಾತ್ರಕ್ಕೆ ರಾಜಕಾರಣಿಯೊಬ್ಬ ಇನ್ನೊಂದು ಪಕ್ಷದವರ ಜೊತೆ ಮಾತನಾಡಲೇಬಾರದೆಂದರೆ ಏನರ್ಥ ? ಆದರೆ ಎಸ್.ಎಂ.ಕೃಷ್ಣ , ಬಂಗಾರಪ್ಪರಂತೆ ಅವರೇನೂ ಕಾಂಗ್ರೆಸ್ ಬಿಟ್ಟು ಹೊರಹೋಗಿರಲಿಲ್ಲ.

ಜಾಫರ್ ಶರೀಫರಿಗೆ ಕಾಂಗ್ರೆಸ್ ಅತ್ಯುನ್ನತ ಸ್ಥಾನಮಾನಗಳನ್ನು ನೀಡಿದೆ ಸರಿ, ಜಾಫರ್ ಶರೀಫರೂ ಕಾಂಗ್ರೆಸಿಗಾಗಿ ಬಹಳಷ್ಟು ದುಡಿದಿದ್ದಾರೆ ಎನ್ನುವುದನ್ನೂ ಅವರನ್ನು ನಿಕೃಷ್ಟವಾಗಿ ಕಂಡವರು ನೆನಪಿಡಬೇಕಿತ್ತು.

ಅವರ ಹಿರಿತನಕ್ಕೂ ಬೆಲೆ ನೀಡದೇ ಅವರನ್ನು ಹೀಯಾಳಿಸಿದವರೂ ಈಗ “ತುಂಬಲಾರದ ನಷ್ಟ” ಎನ್ನುತ್ತಿದ್ದಾರೆ. ತುಂಬಲಾರದ ನಷ್ಟ ಎಂಬ ಪದವನ್ನು ಸವಕಲಾಗಿಸಿದವರು ರಾಜಕಾರಣಿಗಳು ಎನ್ನುವುದನ್ನು ಪ್ರತಿಯೊಂದು ನಾಯಕರ ಸಾವಿನ ಸಂದರ್ಭದಲ್ಲಿ ಅವರು ಸಾಬೀತು ಪಡಿಸುತ್ತಲೇ ಇರುತ್ತಾರೆ.