ಕೈದಿಗಳಿಲ್ಲದ ತೆಲಂಗಾಣ ಜೈಲುಗಳ ಮುಚ್ಚುಗಡೆ; ಭಿಕ್ಷುಕರು, ಅನಾಥರು, ನಿರ್ಗತಿಕರಿಗೆ ಆಶ್ರಯ ತಾಣಗಳಾಗಿ ಬಳಕೆ

0
417

ಹೈದರಬಾದ್,ಮೇ 20: ಕೈದಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಜೈಲುಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗುತ್ತಿದೆ. ಐದು ವರ್ಷಗಳಲ್ಲಿ ರಾಜ್ಯದ 49 ಜೈಲುಗಳಲ್ಲಿ 17 ಜೈಲುಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳಿದರು. ಕೈದಿಗಳ ಸಂಖ್ಯೆ 7000ದಿಂದ ಇಳಿಮುಖಗೊಂಡು 5000ಕ್ಕೆ ತಲುಪಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಅಪರಾಧ ಕೃತ್ಯಗಳನ್ನು ಕಡಿಮೆಗೊಳಿಸಲು ಜೈಲು ವಿಭಾಗ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿತ್ತು. ‘ಆಫ್ಟರ್ ಕೇರ್ ಸರ್ವೀಸ್’ ಈ ಯೋಜನೆಗಳಲ್ಲಿ ಒಂದು. ಶಿಕ್ಷೆಗೊಳಗಾದವರು ಸಾಮಾನ್ಯ ಜೀವನಕ್ಕೆ ಮರಳುವಂತಾಗಲು ಆಫ್ಟರ್ ಕೇರ್ ಸಹಕಾರ ನೀಡುತ್ತಿದೆ.

ಮುಚ್ಚಲಾಗುತ್ತಿರುವ ಜೈಲುಗಳನ್ನು ಸಮಾಜ ಕ್ಷೇಮ ಕೇಂದ್ರಗಳು, ಭಿಕ್ಷುಕರು, ಅನಾಥರು, ನಿರ್ಗತಿಕರಿಗೆ ಆಶ್ರಯ ಸ್ಥಾನವನ್ನಾಗಿ ಪರಿವರ್ತಿಸಲಾಗುವುದು ಎಂದು ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿ ವಿನೋಯ್ ಕುಮಾರ್ ಸಿಂಗ್ ಹೇಳಿದರು. ಜೈಲಿನಿಂದ ಹೊರ ಬಂದವರನ್ನು ಉಪಯೋಗಿಸಿ ರಾಜ್ಯದಲ್ಲಿ 100 ಪೆಟ್ರೋಲ್ ಬಂಕ್ ತೆರೆಯುವ ಯೋಜನೆ ಹೊಂದಿದ್ದೇವೆ ಎಂದು ಅವರು ಹೇಳಿದರು. ಈಗ ಹೈದರಾಬಾದಿನಲ್ಲಿ ಇಂತಹ 18 ಪೆಟ್ರೊಲ್ ಬಂಕ್‍ಗಳಿವೆ. ರಾಜ್ಯದಲ್ಲಿ ಅಪರಾಧವನ್ನೇ ರೂಢಿ ಮಾಡಿಕೊಂಡಿರುವ 1000 ಮಂದಿಯನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ ಎಂದು ವಿನೋಯ್ ಕುಮಾರ್ ಸಿಂಗ್ ಹೇಳಿದರು.