ಬಾಬರಿ ಧ್ವಂಸ: ವಿಚಾರಣೆಯು ಈಗಿನ ವೇಗದಲ್ಲಿ ಸಾಗಿದರೆ ಆರೋಪಿಗಳು ಜೀವಮಾನದಲ್ಲಿ ಶಿಕ್ಷೆಗೊಳಗಾಗುವ ಸಾಧ್ಯತೆ ಇಲ್ಲ- ಜಮಾಅತೆ ಇಸ್ಲಾಮಿ ಹಿಂದ್ ಖೇದ

0
613

ಸನ್ಮಾರ್ಗ ವಾರ್ತೆ-

ನವದೆಹಲಿ: ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ಶೀಘ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು: “ಬಾಬರಿ ಮಸೀದಿಯ ಒಳಗೆ 1949 ರಲ್ಲಿ ವಿಗ್ರಹಗಳನ್ನು ರಹಸ್ಯವಾಗಿ ಇರಿಸಿದ್ದು ಮತ್ತು 1992 ರಲ್ಲಿ ಮಸೀದಿಯನ್ನು ಉರುಳಿಸಿದ್ದು ಇವೆರಡೂಕಾನೂನುಬಾಹಿರ ಕೃತ್ಯಗಳು ಎಂದು ಸುಪ್ರೀಂ ಕೋರ್ಟ್ ನವೆಂಬರ್ 9 ರ ಅಯೋಧ್ಯಾ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ, ಮಸೀದಿಯನ್ನು ನೆಲಸಮಗೊಳಿಸಿದ ಆರೋಪಿಗಳನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಸೂಕ್ತ ಶಿಕ್ಷೆಯನ್ನು ನೀಡಬೇಕು. ಆದರೆ, ಈ ಬಹಿರಂಗ ಕೃತ್ಯದ ಬಗೆಗಿನ ವಿಚಾರಣೆಯು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ನೋಡಿದರೆ ಈ ಕಾನೂನುಬಾಹಿರ ವಿಧ್ವಂಸಕ ಕೃತ್ಯ ಮತ್ತು ವಿನಾಶದ ಹಿಂದೆ ಇದ್ದವರನ್ನು ಶಿಕ್ಷೆಗೊಳಪಡಿಸುವ ಬಗ್ಗೆ ಸರ್ಕಾರ ಗಂಭೀರವಾಗಿಲ್ಲ ಎಂದು ನಂಬಬೇಕಾಗುತ್ತದೆ. ಪ್ರಕರಣದ ವಿಚಾರಣೆಯು ಈಗಿನ ವೇಗದಲ್ಲಿ ಸಾಗಿದರೆ ಹೆಚ್ಚಿನ ಆರೋಪಿಗಳು ಪ್ರಕರಣ ಮುಗಿಯುವುದಕ್ಕಿಂತ ಮುಂಚೆಯೇ ಈ ಜಗತ್ತಿನಿಂದ ಸಹಜವಾಗಿ ನಿರ್ಗಮಿಸುವ ಸಾಧ್ಯತೆ ಕಾಣಿಸುತ್ತದೆ. ಇದು ನ್ಯಾಯದ ಅಣಕವಾಗಿದೆ ಎಂದವರು ಬೇಸರ ವ್ಯಕ್ತಪಡಿಸಿದರು.

ಇದೇವೇಳೆ, ಜಮಾಅತ್ ನ ರಾಷ್ಟ್ರೀಯ ಕಾರ್ಯದರ್ಶಿ ಮಲಿಕ್ ಮೊಹ್ತಾಸಿಮ್ ಖಾನ್ ಕೂಡಮಾತಾಡುತ್ತಾ:

ಜಮಾಅತ್ ಸಹಿತ ಮುಸ್ಲಿಂ ಸಮುದಾಯ ಮತ್ತು ವಿಶ್ವದ ಎಲ್ಲ ನ್ಯಾಯ-ಪ್ರಿಯ ಜನರು ಬಾಬರಿ ಮಸೀದಿಯ ಮೇಲಿನ ಸುಪ್ರೀಂ ಕೋರ್ಟ್ ತೀರ್ಪಿನಿಂದ ತೀವ್ರ ದುಃಖಿತರಾಗಿದ್ದಾರೆ. ನಮ್ಮ ದೇಶದ ಅನೇಕ ಕಾನೂನು ತಜ್ಞರು ಈ ತೀರ್ಪಿನ ಬಗ್ಗೆ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಲ್ಲದೆ, ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದವರಿಗೆ ಭೂಮಿಯನ್ನು ನೀಡುವ ಮೂಲಕ ನ್ಯಾಯದ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ ಎಂದು ಜಮಾಅತ್ ಭಾವಿಸುತ್ತದೆ. ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಅಖಿಲ ಭಾರತ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ತೀರ್ಮಾನಿಸಿರುವುದನ್ನು ಜಮಾಅತ್ ಬೆಂಬಲಿಸುತ್ತದೆ. ಸುಪ್ರೀಂ ಕೋರ್ಟ್ ನೀಡಿದ 5 ಎಕರೆ ಭೂಮಿಯನ್ನು ತಿರಸ್ಕರಿಸುವ ಮುಸ್ಲಿಂ ವೈಯಕ್ತಿಕ ಮಂಡಳಿಯ ನಿರ್ಧಾರವನ್ನು ಜಮಾಅತ್ ಬೆಂಲಿಸುತ್ತದೆ, ಏಕೆಂದರೆ ಮುಸ್ಲಿಮರು ತುಂಡು ಭೂಮಿಗೆ ದಾವೆ ಹೂಡಲಿಲ್ಲ. ಅವರು ನ್ಯಾಯಕ್ಕಾಗಿ ಹೋರಾಡಿದ್ದಾರೆ ಮತ್ತು ಭಾರತದ ಸಂವಿಧಾನವು ನೀಡಿದ ನ್ಯಾಯಸಮ್ಮತ ಹಕ್ಕುಗಳನ್ನಷ್ಟೇ ಕೋರಿದ್ದಾರೆ ಎಂದರು.