ಜಮಾಅತೆ ಇಸ್ಲಾಮೀ ಹಿಂದ್ ಸಹಿತ ಮುಸ್ಲಿಂ ಸಂಘಟನೆಗಳ ನಿಯೋಗದಿಂದ ದೇವೇಗೌಡ ಭೇಟಿ: ಪೌರತ್ವ ಮಸೂದೆಯ ಬಗ್ಗೆ ಮನವಿ

0
1222

ಸನ್ಮಾರ್ಗ ವಾರ್ತೆ

ಬೆಂಗಳೂರು, ಡಿ. 7- ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ, ಮುಸ್ಲಿಂ ಮುತ್ತಹಿದ ಮಹಾಝ್, ಸದ್ಭಾವನ ಮಂಚ್, ಕೋಮು ಸೌಹಾರ್ದ ವೇದಿಕೆ, ಎಫ್ ಡಿ ಸಿ ಏ, ಎಸ್ ಐ ಓ, ಎ ಪಿ ಸಿ ಆರ್ ಮತ್ತು ಫಾರ್ವರ್ಡ್ ಟ್ರಸ್ಟ್ ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ಮುಸ್ಲಿಂ ಪ್ರತಿನಿಧಿಗಳ ನಿಯೋಗವೊಂದು ಇವತ್ತು (ಡಿ. 7) ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿತು.

ಸಂಸತ್ತಿನಲ್ಲಿ ಸದ್ಯ ಚರ್ಚೆಯಲ್ಲಿರುವ ಪೌರತ್ವ ತಿದ್ದುಪಡಿ ಮಸೂದೆಯ ಕುರಿತಂತೆ ಮುಸ್ಲಿಂ ಸಮುದಾಯದ ಆತಂಕಗಳನ್ನು ಈ ಸಂದರ್ಭದಲ್ಲಿ ದೇವೇಗೌಡರ ಜೊತೆ ನಿಯೋಗವು ತೋಡಿಕೊಂಡಿತು.

ಪೌರತ್ವ ತಿದ್ದುಪಡಿ ಮಸೂದೆಯು ನಮ್ಮ ದೇಶದ ಸಾಂವಿಧಾನಿಕ ಸ್ಫೂರ್ತಿ ಮತ್ತು ಜಾತ್ಯತೀತ ಪರಂಪರೆಗೆ ವಿರುದ್ಧವಾಗಿದೆ. ಜನರಿಗೆ ದೇಶದ ಪೌರತ್ವವನ್ನು ನೀಡುವುದರಲ್ಲಿ ಧಾರ್ಮಿಕ ನೆಲೆಯ ತಾರತಮ್ಯ ನಮ್ಮ ಸಂವಿಧಾನದ ಪರಿಚ್ಛೇದ 14 ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಉಲ್ಲಂಘನೆಯಾಗಿದೆ.

ಕೋಮು ಧ್ರುವೀಕರಣ ಮಾಡುವ ಮತ್ತು ಮುಸ್ಲಿಮರನ್ನು ಬಲಿಪಶುವಾಗಿ ಸುವ ರಾಜಕೀಯವೇ ಇದರ ಹಿಂದಿರುವ ನೈಜ ಉದ್ದೇಶವೊ ಎಂಬ ಸಂಶಯ ನಮಗಿದೆ. ವಿವಿಧ ಸ್ತರಗಳ ವಿಧಾನಗಳು ಮತ್ತು ಇತರ ಹಲವು ದೇಶಗಳ ನಿರಾಶ್ರಿತರ ಕುರಿತು ಮೌನವೂ ಈ ಮಸೂದೆಯ ನ್ಯೂನತೆಯಾಗಿದೆ. ಇದು ದೇಶದ ಗಂಭೀರ ಆರ್ಥಿಕ ದುಸ್ಥಿತಿ ಮತ್ತು ಸಾಮಾನ್ಯ ಪ್ರಜೆಗಳು ಅನುಭವಿಸುತ್ತಿರುವ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವೆಂಬಂತೆ ತೋಚುತ್ತಿದೆ. ಆದ್ದರಿಂದ ತಾವು ಈ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ವಿರೋಧಿಸುವ ಮೂಲಕ ಕೋಮು ಸೌಹಾರ್ದದ ವಾತಾವರಣವನ್ನು ಉಳಿಸಲು ಮತ್ತು ನ್ಯಾಯ ಹಾಗೂ ಕಾನೂನಿನ ಆಡಳಿತವನ್ನು ಪ್ರೋತ್ಸಾಹಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಹಕರಿಸಬೇಕೆಂದು ನಿಯೋಗವು ಮನವಿಯಲ್ಲಿ ಕೋರಿಕೊಂಡಿದೆ. ಈ ನಿಯೋಗದಲ್ಲಿ,

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಡಾಕ್ಟರ ಬೆಳಗಾಮಿ ಮುಹಮ್ಮದ್ ಸಾದ್, ಎಫ್ ಡಿ ಸಿ ಏ ಯ ಬಷಾರತ್, ನಿವೃತ್ತ ಐಪಿಎಸ್ ಅಧಿಕಾರಿ ಫಿರೋಝ್ ಪಾಷಾ, ಬಿ ಐ ಇ ಕಾರ್ಯದರ್ಶಿ ರಿಯಾಜ್ ರೋಣ, ಜಮೀಯ್ಯತುಲ್ ಅಹ್ಲೇ ಹದೀಸ್ ನ ಮೌಲಾನಾ ಏಜಾಜ್ ಅಹ್ಮದ್ ನದ್ವಿ, ಮುತ್ತಹಿದಾ ಮಹಾಝ್ ನ ಏಜಾಝ್, ಮೊಮೆಂಟ್ ಫಾರ್ ಜಸ್ಟೀಸ್ ಮತ್ತು ಎಸ್ ಐ ಓ ಪ್ರತಿನಿಧಿಗಳು ಭಾಗವಹಿಸಿದ್ದರು.