ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 20: ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಲು ಪ್ರಬಂಧ ತಯಾರಿಸುವ ವೇಳೆ ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯದ ಲೈಬ್ರರಿಗೆ ನುಗ್ಗಿದ ದಿಲ್ಲಿ ಪೊಲೀಸರು ಮುಹಮ್ಮದ್ ಮಿನ್‍ಹಾಜುದ್ದೀನ್‍ರ ಬಲಗಣ್ಣಿಗೆ ಲಾಠಿಯಿಂದ ಗುದ್ದಿದ್ದರು. ಆ ಕಾರಣದಿಂದಾಗಿ ಆ ಕಣ್ಣಿನ ದೃಷ್ಟಿ ಹೋಯಿತು. ಉಳಿದ ಒಂದು ಕಣ್ಣಿನಿಂದ ಅವರು ಪ್ರಬಂಧವನ್ನು ತಯಾರಿಸಿ ಸಮ್ಮೇಳನದಲ್ಲಿ ಮಂಡಿಸಿದರು. ಇದು ಈಗ ಪುರಸ್ಕಾರ ಪಡೆದುಕೊಂಡಿದೆ. ಜಾಮಿಅ ಟೀಚರ್ಸ್ ಅಸೋಸಿಯೇಶನ್ (ಜೆಟಿಎ) ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಕಾಡೆಮಿಕ್ ಸಮ್ಮೇಳನದಲ್ಲಿ ಮಿನ್‍ಹಾಜ್ ರ ಪ್ರಬಂಧ ಪುರಸ್ಕೃತಗೊಂಡಿದೆ.
ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಡಿಸೆಂಬರ್ ಹದಿನೈದರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಕ್ಯಾ೦ಪಸ್‍ಗೆ ನುಗ್ಗಿ ದಾಂಧಲೆ ಮಾಡಿದ್ದರು. ಇದರಲ್ಲಿ ಮಿನ್‍ಹಾಜ್‍ರು ಒಂದು ಕಣ್ಣನ್ನು ಕಳಕೊಳ್ಳುವಂತಾಯಿತು. ಅಕಾಡಮಿಕ್ ಕಾರ್ಪೊರೇಶನ್‍ನ ಪ್ರಬಂಧ ತಯಾರಿಸುತ್ತಿದ್ದ ಮಿನ್‍ಹಾಜ್ ಮತ್ತು ಇತರ ವಿದ್ಯಾರ್ಥಿಗಳು ಪೊಲೀಸರ ಲಾಠಿಪ್ರಯೋಗಕ್ಕೆ ತುತ್ತಾಗಿದ್ದರು. ಲೈಬ್ರರಿಗೆ ಗ್ರೆನೆಡ್ ಎಸೆದ ಬಳಿಕ ಪೊಲೀಸರು ಒಳಗೆ ಬಂದು ದಾಂಧಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡ ಮಿನ್‍ಹಾಜ್ ದಿಲ್ಲಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಚಿಕಿತ್ಸಾ ವೆಚ್ಚವಾಗಿ ದಿಲ್ಲಿ ವಕ್ಫ್ ಬೋರ್ಡ್ ಐದು ಲಕ್ಷ ರೂಪಾಯಿ ಸಹಾಯಧನ ನೀಡಿತ್ತು.
ಲಾಠಿಯಿಂದ ಗುದ್ದಿದ ಕಣ್ಣಿನ ದೃಷ್ಟಿ ಮರಳದು ಎಂದು ವೈದ್ಯರು ತಿಳಿಸಿದ್ದಾರೆ. ಮಿನ್ ಹಾಜ್ ನಷ್ಟ ಪರಿಹಾರ ಕೋರಿ ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಕೋರ್ಟು ಕೇಂದ್ರ ಸರಕಾರ ಮತ್ತು ದಿಲ್ಲಿ ಪೊಲೀಸರಿಗೆ ನೋಟಿಸು ಕಳುಹಿಸಿದೆ. ಜಾಮಿಅ ಎಲ್‍ಎಲ್‍ಎಂ ವಿದ್ಯಾರ್ಥಿಯಾಗಿರುವ ಮಿನ್‍ಹಾಜ್ ಬಿಹಾರದವರು. ಪೊಲೀಸ್ ದಾಳಿಯ ಬಳಿಕ ಕಲಿಯುವುದನ್ನು ಬಿಟ್ಟು ಮನೆಗೆ ಮರಳುವಂತೆ ಕುಟುಂಬ ಹೇಳಿತ್ತು. ಆದರೆ ಕಲಿಕೆ ಪೂರ್ತಿ ಮಾಡುವ ಅವರ ಆಶೆಗೆ ಕುಟುಂಬ ಕೊನೆಗೂ ಸಮ್ಮತಿಸಿದೆ.
ದಿಲ್ಲಿ ಪೊಲೀಸ್ ಲಾಠಿಚಾರ್ಜ್‍ನಲ್ಲಿ ಲೈಬ್ರರಿ ನಾಶವಾಗಿತ್ತು. 2.66 ಕೋಟಿ ರೂಪಾಯಿ ಬಿಲ್ ಅನ್ನು ಜಾಮಿಅ ವಿಶ್ವವಿದ್ಯಾನಿಲಯ ಬುಧವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿದೆ. 4.75 ಲಕ್ಷ ಬೆಲೆಬಾಲುವ 25 ಸಿಸಿಟಿವಿ ಕ್ಯಾಮರಾಗಳು, ಲೈಬ್ರರಿಯ ಎಸಿ ಯುನಿಟ್‍ಗಳು, ಪೀಠೋಪಕರಣಗಳು, ಇಲಕ್ಟ್ರಾನಿಕ್ ವಸ್ತುಗಳನ್ನು ಪೊಲೀಸರು ಪುಡಿಗಟ್ಟಿದ್ದರು ಎಂದು ವರದಿ ತಿಳಿಸಿದೆ. ಲೈಬ್ರರಿಯಲ್ಲಿ ಪೊಲೀಸರು ನಡೆಸಿದ ದಾಂಧಲೆಯ ವೀಡಿಯೊವನ್ನು ಇತ್ತೀಚೆಗೆ ಜಾಮಿಅ ವಿದ್ಯಾರ್ಥಿಗಳು ಬಿಡುಗಡೆಗೊಳಿಸಿದ್ದರು.












