ಜನಾನುರಾಗಿ, ಸೌಹಾರ್ದ ಪ್ರೇಮಿಯನ್ನು ಕಳಕೊಂಡ ಜಿಲ್ಲೆ: ವಿಠಲ ಸುವರ್ಣ ಗುರಿಕಾರರ ನಿಧನಕ್ಕೆ ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ನಿಂದ ಸಂತಾಪ

0
554

ಧಾರ್ಮಿಕ ಸೌಹಾರ್ದಕ್ಕಾಗಿ ಮುಂಚೂಣಿಯಲ್ಲಿದ್ದು ತನ್ನ ಕೊನೆ ಕಾಲದವರೆಗೆ ದುಡಿದ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಸೌಹಾರ್ದ ವೇದಿಕೆಯ ಸದಸ್ಯರಾಗಿದ್ದುಕೊಂಡು ತನ್ನ ವ್ಯಾಪ್ತಿ ಪ್ರದೇಶವಾದ ಉಳ್ಳಾಲದಲ್ಲಿ ಸರ್ವ ಧರ್ಮೀಯರು ಜೊತೆಗೂಡಿ ಬದುಕುವುದಕ್ಕಾಗಿ ಅವಿರತ ಶ್ರಮಿಸಿದ ಮೊಗವೀರ ಮುಂದಾಳು ಮತ್ತು ಉಳ್ಳಾಲ ಮೊಗವೀರಪಟ್ನ ನಿವಾಸಿಯಾಗಿದ್ದ ವಿಠಲ ಸುವರ್ಣ ಗುರಿಕಾರ (೮೪) ಅವರು ರವಿವಾರ ನಿಧನರಾದರು. ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಉಳ್ಳಾಲ ಮೊಗವೀರ ಸಂಘ- ಹದಿನಾಲ್ಕು ಪಟ್ನ ಮೊಗವೀರ ಸಂಯುಕ್ತ ಸಭಾ ಮಂಗಳೂರು ಇದರ ಅಧ್ಯಕ್ಷರಾಗಿ, ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಎಜುಕೇಷನ್ ಟ್ರಸ್ಟ್ ನ ಮಾನೇಜಿಂಗ್ ಟ್ರಸ್ಟಿಯಾಗಿ, ಮೊಗವೀರ ಹಳೆ ವಿದ್ಯಾರ್ಥಿ ಸಂಘ ಮತ್ತು ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾಗಿ ಮತ್ತು ದ. ಕ. ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಉಚ್ಚಿಲ ಮೊಗವೀರ ಮಹಾಜನ ಸಭಾದ ಆಡಳಿತ ಸಮಿತಿಯ ಸದಸ್ಯರಾಗಿ ಮೃತರು ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸೌಹಾರ್ದ ಸಮಾಜ ಕಟ್ಟುವ ಬಗ್ಗೆ ತುಂಬು ಕನಸನ್ನು ಹೊಂದಿದ್ದ ವಿಠಲ ಸುವರ್ಣ ಗುರಿಕಾರರು, ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ನೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಜಮಾಅತ್ ನ ಕಾರ್ಯಕ್ರಮಗಳಲ್ಲಿ ವಿಶೇಷ ಅಭಿಮಾನದಿಂದ ಪಾಲುಗೊಳ್ಳುತ್ತಿದ್ದರು, ಉಚಿತ ವೈದ್ಯಕೀಯ ಶಿಬಿರವನ್ನು ಉಳ್ಳಾಲ ಜಮಾಅತ್ ಹಮ್ಮಿಕೊಂಡಾಗ ಅದನ್ನು ತನ್ನದೇ ಕಾರ್ಯಕ್ರಮವಂತೆ ಮುಂಚೂಣಿಯಲ್ಲಿ ನಿಂತು ನಡೆಸಿಕೊಟ್ಟಿದ್ದರು ಎಂದು ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ಸ್ಮರಿಸಿಕೊಂಡಿದೆ. ಅವರ ನಿಧನದಿಂದ ಜಿಲ್ಲೆಯು ಓರ್ವ ಸೌಹಾರ್ದ ಪ್ರೇಮಿ ಮತ್ತು ಹೃದಯವಂತ ಸಾಮಾಜಿಕ ಮುಂದಾಳುವನ್ನು ಕಳಕೊಂಡಿದೆ ಎಂದು ಅದು ದುಃಖ ವ್ಯಕ್ತಪಡಿಸಿದೆ. ಮಾತ್ರವಲ್ಲ ಅವರ ಅನುಪಸ್ಥಿತಿಯನ್ನು ಸಹಿಸುವ ತಾಳ್ಮೆಯನ್ನು ದೇವನು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಿದೆ.

ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲದ ಅಧ್ಯಕ್ಷ ಅಬ್ದುಲ್ ಕರೀಂ, ಉಪಾಧ್ಯಕ್ಷ ಅಬ್ದುರ್ರಹೀಮ್, ಸದಸ್ಯರುಗಳಾದ ಮುಹಮ್ಮದ್ ಅನ್ವರ್, ಎ ಎಚ್ ಮಹಮೂದ್ ಮತ್ತಿತರರು ವಿಠಲ ಸುವರ್ಣ ಗುರಿಕಾರರ ಮನೆಗೆ ಭೇಟಿಕೊಟ್ಟು ಸಾಂತ್ವನ ವ್ಯಕ್ತಪಡಿಸಿದ್ದಾರೆ.