ಜೇನಿನಿಂದ ಉತ್ತಮ ಆರೋಗ್ಯ

0
1773

-ಹಾಜಿರಾ ಖಾನ್ ಹಾಗೂ ಸಮೀನಾ ಅಹದ್ ಖಾನ್


ಜೀವಿಗಳನ್ನು ಸಸ್ಯವರ್ಗ ಹಾಗೂ ಪ್ರಾಣಿ ವರ್ಗ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಆದರೆ ಕೆಲವು ಸೂಕ್ಷ್ಮಾಣು ಜೀವಿಗಳು ಇವೆರಡು ವರ್ಗಗಳಿಗೂ ನಿಖರವಾಗಿ ಸಂಬಂಧಿಸುವುದಿಲ್ಲ. 20 ಹಣ್ಣುಗಳು ಹಾಗೂ ಹಣ್ಣುಗಳನ್ನು ಹೊಂದಿರುವ ಸಸ್ಯಗಳ ಕುರಿತು ಪವಿತ್ರ ಕುರ್‍ಆನಿನಲ್ಲಿ ಸೂಚನೆಯಿದೆ. ಕುರ್‍ಆನಿನಲ್ಲಿ ಸೂಚಿಸಲಾದ 20 ಹಣ್ಣುಗಳನ್ನು ಹೊಂದಿರುವ ಸಸ್ಯಗಳಲ್ಲಿ; ಖರ್ಜೂರದ ಮರ, ಅಂಜೂರ, ಶುಂಠಿ, ದ್ರಾಕ್ಷಿ, ಬೆಳ್ಳುಳ್ಳಿ, ಕರ್ಪೂರ, ಬೇಳೆಕಾಲುಗಳು, ಮನ್ನಾ, ಇಪ್ಪೆ (olive), ಈರುಳ್ಳಿ, ದಾಳಿಂಬೆ, ಬೇಸಿಗೆ ಸ್ಕ್ವಾಫ್, ಸಿಹಿ ತುಳಸಿ, ಅಥೆಲ್ ತಮಾರಿಸ್ಕ್, ಟೂತ್ ಬ್ರಶ್ ಮರ, ಅರಾಕ್, ಸಾಸಿವೆ, ಅಕೇಶಿಯಾ, ಸೌತೆಕಾಯಿ, ಸೊರೆಕಾಯಿ, ಲೀಕ್, ದೇವವಾರು ಮರಗಳು ಸೇರಿವೆ.
ಕುರ್‍ಆನಿನ ಸಸ್ಯಶಾಸ್ತ್ರವು ಸಂಶೋಧನೆಯ ಸಕ್ರಿಯ ಕ್ಷೇತ್ರವಾಗಿದೆ. ಅದೇ ರೀತಿ 40 ಪ್ರಾಣಿಗಳು ಹಾಗೂ 12 ಪ್ರಾಣಿ ಉತ್ಪನ್ನಗಳ ಕುರಿತು ಪವಿತ್ರ ಕುರ್‍ಆನಿನಲ್ಲಿ ವರದಿಯಾಗಿದೆ. ಈ ಒಂದು ಲೇಖನದಲ್ಲಿ ನಾವು ಜೇನುನೊಣ ಹಾಗೂ ಜೇನು ತುಪ್ಪದ ಕುರಿತು ತಿಳಿದು ಕೊಳ್ಳೋಣ.
“ನಿಮ್ಮ ಪ್ರಭು ಜೇನುನೊಣಕ್ಕೆ ಪವರ್ತಗಳಲ್ಲೂ ಮರಗಳಲ್ಲೂ ತಟ್ಟಿಗಳ ಮೇಲಿರಿಸಿದ ಬಳ್ಳಿಗಳಲ್ಲೂ, ತನ್ನ ತೊಟ್ಟಿಗಳನ್ನು ಕಟ್ಟಿ ಎಲ್ಲಾ ವಿಧದ ಫಲಗಳ ರಸವನ್ನು ಹೀರಿ, ನಿನ್ನ ಪ್ರಭು ಸುಗಮಗೊಳಿಸಿದ ಮಾರ್ಗಗಳಲ್ಲಿ ಚಲಿಸುತ್ತಿರು ಎಂದು `ವಹ್ಯ್’ ಮಾಡಿದನು (ಆದೇಶವಿತ್ತನು). ಆ ನೊಣದ ಹೊಟ್ಟೆಯಿಂದ ವಿವಿಧ ಬಣ್ಣಗಳ ಪಾನಕ ಹೊರಡುತ್ತದೆ. ಅದರಲ್ಲಿ ಜನರಿಗೆ ಗುಣಾಂಶವಿದೆ. ನಿಶ್ಚಯವಾಗಿಯೂ ಚಿಂತನ ಶೀಲರಿಗೆ ಇದರಲ್ಲೂ ಒಂದು ನಿದರ್ಶನವಾಗಿದೆ.” (ಅನ್ನಹ್ಲ್: 68-69)
ಇನ್ನೊಂದೆಡೆ, ಕುರ್‍ಆನಿನಲ್ಲಿ ಈ ರೀತಿ ಹೇಳಲಾಗಿದೆ, “ಧರ್ಮನಿಷ್ಠರಿಗೆ ವಾಗ್ದಾನ ಮಾಡ ಲಾಗಿರುವ ಆ ಸ್ವರ್ಗದ ವಿಶೇಷತೆಯೇನೆಂದರೆ ಅದರಲ್ಲಿ ತಿಳಿ ನೀರಿನ ಕಾಲುವೆಗಳು ಹರಿಯು ತ್ತಿರುವುವು. ಸ್ವಲ್ಪವೂ ರುಚಿ ಬದಲಾಗಿರದಂತಹ ಹಾಲಿನ ಕಾಲುವೆಗಳು ಹರಿಯುತ್ತಿರುವುವು. ಕುಡಿಯುವವರಿಗೆ ಅತ್ಯಂತ ರುಚಿಕರವಾಗಿರುವ ಮದಿರೆಯ ಕಾಲುವೆಗಳು ಹರಿಯುತ್ತಿರುವುವು. ಅತ್ಯಂತ ತಿಳಿಯಾದ ಜೇನಿನ ಕಾಳುವೆಗಳು ಹರಿಯುತ್ತಿರುವುವು. ಅದರಲ್ಲಿ ಅವರಿಗಾಗಿ ಎಲ್ಲ ಬಗೆಯ ಫಲಗಳಿರುವುವು ಮತ್ತು ಅವರ ಪ್ರಭುವಿನ ಕಡೆಯಿಂದ ಕ್ಷಮೆ ಇರುವುದು. ಸದಾ ಕಾಲ ನರಕದಲ್ಲೇ ವಾಸಿಸಲಿರುವ ಮತ್ತು ಕರುಳುಗಳನ್ನು ಕತ್ತರಿಸಿ ಬಿಡುವಂತಹ ಕುದಿಯುವ ನೀರನ್ನು ಕುಡಿಸಲ್ಪಡಲಿರುವ ಜನರಿಗೆ ಸಮಾನನಾಗ ಬಲ್ಲನೇ?” (ಸೂರ ಮುಹಮ್ಮದ್: 15)
ಜೈವಿಕವಾಗಿ ಜೇನು ನೊಣಗಳು ಕೀಟಗಳ ಗುಂಪಿಗೆ ಸೇರಿವೆ. ಕೀಟಗಳಲ್ಲಿ ಸುಮಾರು 6-10 ಮಿಲಿಯನ್ ವಿಧಗಳಿವೆ. ಆದರೆ ಕೆಲವು ಕೀಟಗಳ ಕುರಿತು ಮಾತ್ರ ವಿವರವಾಗಿ ಅಧ್ಯಯನ ನಡೆಸಲಾಗಿದೆ. ಇನ್ನೂ ಮಿಲಿ ಯನ್ ಕೀಟಗಳಿಗೆ ಹೆಸರಿಸಬೇಕಾಗಿದೆ. 20,000 ಜಾತಿಯ ಜೇನು ನೊಣಗಳಿವೆ. ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದೆಲ್ಲಾ ಖಂಡಗಳಲ್ಲಿ ಜೇನು ನೊಣಗಳನ್ನು ಕಾಣಬಹುದಾಗಿದೆ. 44 ಉಪ ಜಾತಿಯ ಜೇನು ನೊಣಗಳಲ್ಲಿ 11 ಜಾತಿಗಳಿಗೆ ಮಾತ್ರ ಮಾನ್ಯತೆ ದೊರಕಿವೆ.
ಜೇನು ನೊಣಗಳು ಆಹಾರಕ್ಕಾಗಿ ಹೂವಿನ ಮಕರಂದವನ್ನು ಹೀರಿ ಸಿಹಿಯಾದ ಜೇನು ತುಪ್ಪವನ್ನು ತಯಾರಿಸುತ್ತವೆ. ಇತಿಹಾಸವು ಎಷ್ಟು ಪುರಾತನವಾಗಿದೆಯೋ, ಅಷ್ಟೇ ಪುರಾತನವಾದುದು ಈ ಜೇನು. ಯುದ್ಧದಲ್ಲಾದ ಗಾಯಗಳ ಗುಣೌಷಧವಾಗಿ ರೋಮನ್ನರು ಜೇನನ್ನು ಬಳಸುತ್ತಿದ್ದರು. ಜೇನಿನ ಬಳಕೆ ಹಾಗೂ ಉತ್ಪಾದಕ ಸಾಮಗ್ರಿಗಳಿಗೆ ದೀರ್ಘ ಹಾಗೂ ವೈವಿಧ್ಯತೆ ಯುಳ್ಳ ಇತಿಹಾಸವಿದೆ. ಜೇನುನೊಣಗಳಿಂದ ತಯಾರಾದ ಜೇನನ್ನು ಪ್ರಾಚೀನ ಕಾಲದಲ್ಲಿ ಚಟುವಟಿಕೆಗಳಿಗೆ ಬಳಸುತ್ತಿದ್ದರು. ಇದು 15,000 ವರುಷಗಳ ಹಳೆಯ ಮಾತು ಎಂದು ವರದಿಗಳು ತಿಳಿಸುತ್ತವೆ.
ಮಾನವನು ಸಾಮಾನ್ಯವಾಗಿ ಜೇನುಗೂಡು ಗಳಲ್ಲಿ ಜೇನು ಸಾಕಾಣಿಕೆಯನ್ನು ವ್ಯವಸ್ಥಿತವಾಗಿ ನಡೆಸುತ್ತಾನೆ. ಉತ್ತರ ಆಫ್ರಿಕಾದಲ್ಲಿ 9,000 ವರುಷಗಳ ಹಿಂದೆ ಮಡಕೆ ಪಾತ್ರೆಗಳಲ್ಲಿ ಜೇನು ಸಾಕಾಣೆಯು ನಡೆಯುತ್ತಿತ್ತು. ಸುಮಾರು 4,500 ವರುಷಗಳಿಂದಲೂ ಈಜಿಪ್ಟಿನ ಕಲೆಯಲ್ಲಿ ಜೇನು ನೊಣಗಳ ಸಾಕಾಣೆಯ ರೀತಿಯನ್ನು ತೋರ್ಪಡಿಸಲಾಗುತ್ತಿದೆ. ಇಂದು ಜೇನು ಕೃಷಿಯು ವಿಜ್ಞಾನವನ್ನು ಸೃಷ್ಟಿಸಿತು. ಆರ್ಥಿಕ ಆದಾಯಕ್ಕಾಗಿ ಜೇನು ಕೃಷಿಯು ಶೀಘ್ರವಾಗಿ ಜಗತ್ತಿನಲ್ಲಿ ಹರಡಿಕೊಂಡಿದೆ. ಜೇನು ತುಪ್ಪ ಸೇವನೆಯಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳ ಕುರಿತು ಪ್ರಾಚೀನ ಗ್ರೀಕ್, ರೋಮನ್, ವೈದಿಕ ಹಾಗೂ ಇಸ್ಲಾಮಿಕ್ ಪುಸ್ತಕ ಗಳಲ್ಲಿ ದಾಖಲಾಗಿದೆ. ಪುರಾತನ ಕಾಲದಿಂದಲೂ ತಂತ್ರಜ್ಞಾನಿಗಳು ಹಾಗೂ ವಿಜ್ಞಾನಿಗಳು ಜೇನಿನಲ್ಲಿ ಗುಣೌಷಧವಿದೆ ಎಂದು ಉಲ್ಲೇಖಿಸಿದ್ದಾರೆ. ಜೇನಿನ ರಾಸಾಯನಿಕ ಅಂಶದಿಂದಾಗಿ ಪ್ರಾಚೀನ ಕಾಲದಿಂದಲೂ ಎಲ್ಲಾ ನಾಗರಿಕತೆಗಳು ಇದನ್ನು ಬಳಸುತ್ತಿದ್ದರು. ಜೇನನ್ನು `ದ್ರವ ರೂಪದ ಬಂಗಾರ’ ಎಂದೂ ಕರೆಯಲಾಗುತ್ತದೆ.
ಬ್ಯಾಕ್ಟೀರಿಯಾ ವಿರೋಧಿ ಹಾಗೂ ಫಂಗಸ್ ವಿರೋಧಿ ಗುಣಗಳನ್ನು ಹೊಂದಿರುವ ಸಿಹಿಯಾದ ದ್ರವರೂಪಕ ಚಿನ್ನವನ್ನು ಈಜಿಪ್ಟಿನ ಸ್ಮಾರಕಗಳ ಆರಂಭಿಕ ಕಾಲದಿಂದಲೂ ಉಪಯೋಗಿಸುತ್ತಿದ್ದರು. ಜೇನು ನಮ್ಮ ಸಂಪೂರ್ಣ ದೇಹ ಹಾಗೂ ಆರೋಗ್ಯಕ್ಕೆ ನಂಜು ನಿರೋಧಕ, ಉತ್ಕರ್ಷಣ ಹಾಗೂ ಪ್ರತಿ ರಕ್ಷಣೆಯನ್ನು ನೀಡುತ್ತದೆ. ಇದು ಸೊಂಕಿನ ವಿರುದ್ಧ ಹೋರಾಡುವುದರ ಜೊತೆಗೆ ಅಂಗಾಂಶಗಳ ಚಿಕಿತ್ಸೆಯನ್ನೂ ಮಾಡುತ್ತದೆ. ಅದೇ ರೀತಿ ಇದು ಉರಿಯೂತ ಹಾಗೂ ಪಚನಕ್ರಿಯೆಯ ತೊಂದರೆಗಳ ಶಮನಕ್ಕೆ ಉಪಯುಕ್ತವಾಗಿದೆ.
ಪುರಾತನ ಕಾಲದಿಂದಲೂ ಹಲವಾರು ಕೀಟಗಳು ತಮ್ಮ ವೈಯ ಕ್ತಿಕ ವರ್ತನೆ ಹಾಗೂ ಸಂಘಟಿತ ವರ್ತನೆಯಿಂದ ಮಾನವನ ಚಿತ್ತವನ್ನು ತಮ್ಮತ್ತ ಆಕರ್ಷಿಸಿಕೊಂಡಿವೆ. ಎಲ್ಲಾ ಜಾತಿಯ ಕೀಟಗಳಲ್ಲಿ ಇರುವೆ ಹಾಗೂ ಜೇನುನೊಣಗಳ ಸಮೂಹವು ಬಲವಾದ ಸಾಮಾಜಿಕ ವರ್ತನೆಗೆ ಉದಾಹರಣೆಯಾಗಿದೆ. “ಕೀಟಗಳ ಸಂಘಟನೆಗೆ ಸಂಬಂಧಿಸಿದ ಸಂಶೋಧನೆಗಳು ಹಾಗೂ ಅವುಗಳ ಸಾಮಾಜಿಕ ಹಾಗೂ ವೈಯಕ್ತಿಕ ವರ್ತನೆಯ ಪರಿಶೀಲನಾ ಮಾದರಿ” ಕುರಿತ ಜೀವಶಾಸ್ತ್ರದಲ್ಲಿ ಮಾಡಿದ ಸಂಶೋಧನೆಗೆ ಕಾರ್ಲ್ ವೋನ್‍ಫ್ರಿಸ್ಟ್, ಕೋನರ್ಡ್ ಲೊರೆನ್ಝ್ ಹಾಗೂ ನಿಕೋಲಸ್ ಟಿನ್ವರ್ಗನ್‍ರವರಿಗೆ ಜಂಟಿಯಾಗಿ 1973ರಲ್ಲಿ ನೋಬೆಲ್ ಪುರಸ್ಕಾರ ದೊರಕಿತ್ತು. ಕಾರ್ಲ್‍ವೋನ್ ರವರ ಪುಸ್ತಕವು ಜೇನುನೊಣಗಳ ಸಂವೇದನಾ ಗ್ರಹಿಕೆಯ ಮೇಲೆ ಬೆಳಕು ಚೆಲ್ಲಿತ್ತು ಹಾಗೂ `ವ್ಯಾಗಲ್ ಡ್ಯಾನ್ಸ್’ ಎಂಬ ಪದವು ಮೊದಲ ಬಾರಿಗೆ ಭಾಷಾಂತರಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. `ವ್ಯಾಗಲ್ ಡ್ಯಾನ್ಸ್’ನಲ್ಲಿ ಜೇನುನೊಣಗಳು ಎಂಟರ ಆಕಾರದಲ್ಲಿ ನೃತ್ಯ ಮಾಡುತ್ತವೆ. ಸಫಲತೆಯೊಂದಿಗೆ ಮಕರಂದವನ್ನು ಶೇಖರಿಸಿ ತಂದು ನೊಣಗಳು ತಮ್ಮ ಸಮೂಹದ ಇತರರೊಂದಿಗೆ ಸಮ ಪ್ರಮಾಣದಲ್ಲಿ ಹಂಚಿಕೊಳ್ಳುವುದಕ್ಕೆ ಈ ನೃತ್ಯವು ಸಹಕಾರಿಯಾಗಿದೆ. ಜೇನಿನಿಂದಾಗುವ ಉತ್ತೇಜಕ ಔಷಧಗಳ ಇನ್ನೂ ಹಲವಾರು ಪ್ರಯೋಜನ ಗಳಿಗಾಗಿ ಜಗತ್ತಿನಾದ್ಯಂತ ಹಲವಾರು ಸಂಶೋ ಧನೆಗಳು ಕಾರ್ಯ ರೂಪದಲ್ಲಿವೆ. ಜೇನುಗೂಡಿನಲ್ಲಿ ಉತ್ಪಾದನೆಯಾಗುವ ಜೇನಿನಂಟು, ಜೇನು ಪರಾಗ ಹಾಗೂ ರಾಯಲ್ ಜೆಲ್ಲಿಯಂತಹ ವಸ್ತುಗಳ ಬಗ್ಗೆಯೂ ಸಂಶೊಧನೆ ಜಾರಿಯಲ್ಲಿದೆ. “ಜೇನಿನಲ್ಲಿ ಗುಣೌಷಧವಿದೆ” ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ.

(ಹಾಜಿರಾ ಖಾನ್,ವಿದ್ಯಾರ್ಥಿನಿ, ಇಂಡಿಯನ್ ಸ್ಕೂಲ್ ಸಲಾಹ್‍. ಸಮೀನಾ ಅಹ್ಮದ್ ಖಾನ್, ಉಪನ್ಯಾಸಕಿ, ಸಲಾಹ್ ಧೋಫರ್ ವಿಶ್ವವಿದ್ಯಾನಿಲಯದ ಗಣಿತ ಹಾಗೂ ವಿಜ್ಞಾನ ವಿಭಾಗ)