ಜಾರ್ಖಂಡ್‌ | ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಲು ಬಿಜೆಪಿ ಯತ್ನ; ಬೂತ್ ಮಟ್ಟದ ಅಧಿಕಾರಿಗಳಿಂದ ತಡೆ

0
226

ಸನ್ಮಾರ್ಗ ವಾರ್ತೆ

ಗೊಡ್ಡಾ: ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಪ್ರತಿನಿಧಿಗಳು ಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ನವೀಕರಣದ ಭಾಗವಾಗಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಸೇರಿಸಲಾದವರನ್ನು ಹೊರಗಿಡಲು ಬಿಜೆಪಿ ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ) ದೊಡ್ಡ ಸಂಖ್ಯೆಯಲ್ಲಿ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.

ಆದರೆ, ಹೆಚ್ಚಿನ ಅರ್ಜಿಗಳು ನಕಲಿ ಮತ್ತು ಕಾನೂನುಬಾಹಿರವಾಗಿವೆ ಎಂದು ಉಲ್ಲೇಖಿಸಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿದ ತನಿಖೆಯಿಂದ ಈ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ. ದೂರುಗಳನ್ನು ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದ್ದರೂ ಸಹ ಈ ಕ್ರಮ ಮುಂದುವರೆದಿದೆ.

ಗೊಡ್ಡಾ, ಮಹೇಷ್ಟಿಕ್ರಿ, ಪಚುವಾ ಕಿಟಾ, ಲೋಚ್ನಿ ಮತ್ತು ಬಗಕೋಲ್‌ನ ಬೂತ್‌ಗಳಲ್ಲಿ ಬಿಜೆಪಿ ಏಜೆಂಟರು ಫಾರ್ಮ್ 7 ಬಳಸಿ ಮತದಾರರನ್ನು ಹೊರಗಿಡಲು ಪ್ರಯತ್ನಿಸಿದ್ದಾರೆ. ಅಬ್ದುಲ್ ಮನ್ನಾನ್ ಖಾನ್, ಮೊಹಮ್ಮದ್ ನೌಷದ್, ಮೊಹಮ್ಮದ್ ಶಫೀಕ್ ಮತ್ತು ಬಿಬಿ ಬಸಿಲಾನ್ ಮುಂತಾದ ತಲೆಮಾರುಗಳಿಂದ ಅಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಹೆಸರುಗಳನ್ನು ತೆಗೆದುಹಾಕುವಂತೆ ಕೋರಲಾಗಿದೆ. ಮಹೇಷ್ಟಿಕ್ರಿಯ ಬೂತ್ ಸಂಖ್ಯೆ 9 ರಲ್ಲಿ, ಬಿಜೆಪಿ ಏಜೆಂಟ್ ಸಂಜೀವ್ ಕುಮಾರ್ ರೋಷನ್ ಒಬ್ಬರೇ 25 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪಕ್ಕದ ಬೂತ್‌ನಲ್ಲಿ, ಬಿಎಲ್‌ಎ ಒಬ್ಬರು ಅಂತಹ 75 ಫಾರ್ಮ್‌ಗಳೊಂದಿಗೆ ಬಂದಿದ್ದು, ಬೂತ್ ಮಟ್ಟದ ಅಧಿಕಾರಿ ಪ್ರಶ್ನಿಸಿದಾಗ ಅವುಗಳನ್ನು ಸ್ಥಳದಲ್ಲೇ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಮಹೇಷ್ಟಿಕ್ರಿಯ ಬಿಎಲ್‌ಒ ಆಗಿರುವ ಅನಿಶಾ ಬಾನು ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸುತ್ತಾ, ಬಿಜೆಪಿ ಬಿಎಲ್‌ಎ ಒಬ್ಬರು ನನಗೆ ಸುಮಾರು 25 ಅರ್ಜಿ ಫಾರ್ಮ್‌ಗಳನ್ನು ತಂದಿದ್ದರು, ಆದರೆ ಅವು ಅಸಲಿಯಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಫಾರ್ಮ್‌ಗಳು ಮುಸ್ಲಿಂ ಮತದಾರರಿಗೆ ಸೇರಿದ್ದಾಗಿದ್ದು, ಅವರು ನಂತರ ಇಂತಹ 50 ಫಾರ್ಮ್‌ಗಳನ್ನು ತರುವುದಾಗಿ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಏತನ್ಮಧ್ಯೆ, ಯಾವುದೇ ಅಧಿಕೃತ ಫಾರ್ಮ್‌ಗಳನ್ನು ಸಲ್ಲಿಸಲಾಗಿಲ್ಲ ಮತ್ತು ಅರ್ಜಿಗಳ ಮೂಲವು ಸ್ಪಷ್ಟವಾಗಿಲ್ಲದ ಕಾರಣ ಯಾವುದೇ ಕ್ರಮ ಕೈಗೊಳ್ಳದಂತೆ ಬಿಎಲ್‌ಒಗಳಿಗೆ ಸೂಚಿಸಲಾಗಿದೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಮರಾಂಡಿ ತಿಳಿಸಿದ್ದಾರೆ. ಗೊಡ್ಡಾ ಶಾಸಕ ಹಾಗೂ ಆರ್‌ಜೆಡಿ ನಾಯಕ ಸಂಜಯ್ ಪ್ರಸಾದ್ ಯಾದವ್ ತಾನು ಮರಾಂಡಿ ಅವರೊಂದಿಗೆ ಮಾತನಾಡಿದ್ದು, ಅವರು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.

ಆದರೆ ಮಾಜಿ ಬಿಜೆಪಿ ಶಾಸಕ ಅಮಿತ್ ಕುಮಾರ್ ಮಂಡಲ್ ಮಾತನಾಡಿ, ಹೆಚ್ಚಿನ ಕಡೆಗಳಲ್ಲಿ ಹೆಸರುಗಳಿರುವ ಮತದಾರರನ್ನು ಹೊರಗಿಡಲು ದೂರು ನೀಡುವ ಹಕ್ಕು ಬಿಎಲ್‌ಒಗಳಿಗೆ ಇದೆ ಮತ್ತು ಅದಕ್ಕಾಗಿ ಅವರು ಎಷ್ಟು ಬೇಕಾದರೂ ಫಾರ್ಮ್‌ಗಳನ್ನು ಸಲ್ಲಿಸಬಹುದು ಎಂದಿದ್ದಾರೆ. ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿದ ಬಿಎಲ್‌ಒಗಳ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಏತನ್ಮಧ್ಯೆ, ಆಡಳಿತಾರೂಢ ಜೆಎಂಎಂ ಮತ್ತು ಕಾಂಗ್ರೆಸ್ ಪಕ್ಷಗಳು, ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲು ಬಿಜೆಪಿ ರಾಜಕೀಯ ಪಿತೂರಿ ನಡೆಸುತ್ತಿದೆ ಎಂದು ತಿಳಿಸಿವೆ.