ಅಮೆರಿಕದ ಸೈನ್ಯವನ್ನು ಹೊರಹಾಕಬೇಕು ಇಲ್ಲವೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ; ಅರಬ್ ದೇಶಗಳಿಗೆ ಐಆರ್‌ಜಿಸಿ ಎಚ್ಚರಿಕೆ

0
240

ಸನ್ಮಾರ್ಗ ವಾರ್ತೆ

ಟೆಹ್ರಾನ್: ಅಮೆರಿಕ-ಇರಾನ್ ಸಂಘರ್ಷವು ಮತ್ತೊಮ್ಮೆ ತೀವ್ರಗೊಳ್ಳುತ್ತಿದ್ದಂತೆ, ಇರಾನ್‌ನ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಪ್ರಾದೇಶಿಕ ಅಮೆರಿಕದ ಮಿತ್ರರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. ಅಮೆರಿಕದ ಸೈನ್ಯವನ್ನು ಹೊರಹಾಕಬೇಕು ಅಥವಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಐಆರ್‌ಜಿಸಿ ಉಪ ಜನರಲ್ ಯಡೊಲ್ಲಾ ಜವಾನಿ ಅರಬ್ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನಲ್ಲಿ ಎರಡು ದಿನಗಳಿಂದ ನಾಗರಿಕ ಗುರಿಗಳ ಮೇಲೆ ಅಮೆರಿಕ ದಾಳಿಗಳನ್ನು ನಡೆಸುತ್ತಿರುವುದರಿಂದ ಈ ಎಚ್ಚರಿಕೆ ಬಂದಿದೆ. ದಾಳಿಯಲ್ಲಿ ಕನಿಷ್ಠ 15 ನಾಗರಿಕರು ಸಾವನ್ನಪ್ಪಿದ್ದಾರೆ.

ಮಂಗಳವಾರ, ಇರಾನ್‌ನ ಸಿರಿಕ್‌ನಲ್ಲಿ ಮದುವೆ ಸಮಾರಂಭದ ವೇಳೆ ಮನೆಯೊಂದರ ಮೇಲೆ ದಾಳಿ ನಡೆಸಲಾಗಿದ್ದು, ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ರೆಡ್ ಕ್ರೆಸೆಂಟ್ ವರದಿ ಮಾಡಿದೆ. ಇದರ ಬೆನ್ನಲ್ಲೇ ಇರಾನ್ ಜೋರ್ಡಾನ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿತು. ಇರಾನ್ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೌಲಭ್ಯಗಳ ಮೇಲೂ ಕ್ಷಿಪಣಿಗಳನ್ನು ಹಾರಿಸಿತು.

ನೈಋತ್ಯ ಇರಾನ್‌ನ ಅಹ್ವಾಜ್ ಮತ್ತು ಅಗ್‌ಜಾರಿ ಸಮೀಪದ ಪ್ರದೇಶಗಳ ಮೇಲೆ ಅಮೆರಿಕದ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಅಮೆರಿಕದ ಕ್ಷಿಪಣಿಗಳು ಅಹ್ವಾಜ್ ಮತ್ತು ಜಿರೋಫ್ಟ್ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿದ್ದವು. ಹೆಚ್ಚಿನ ವಿವರಗಳು ಲಭ್ಯವಿಲ್ಲ. ಅಜಲುಯೇಹ್, ಬಂದರ್ ಅಬ್ಬಾಸ್, ಖೆಶ್ಮ್ ದ್ವೀಪ, ಕೊನರಾಕ್, ಚಾಬಾರ್, ಜಸ್ಕ್, ಸಿರಿಕ್ ಮತ್ತು ಲಾವನ್ ಸೇರಿದಂತೆ ದಕ್ಷಿಣ ಪ್ರದೇಶಗಳಲ್ಲಿ ಹಲವಾರು ಸ್ಫೋಟಗಳು ಕೇಳಿಬಂದಿವೆ ಎಂದು ಇರಾನ್ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

ಏತನ್ಮಧ್ಯೆ, ಇರಾನ್‌ನ ಸಶಸ್ತ್ರ ಪಡೆಗಳು “ಮರೆಯಲಾಗದ ಪಾಠಗಳನ್ನು” ಕಲಿಸಲು ಸಿದ್ಧವಿದೆ ಎಂದು ಸರ್ವೋಚ್ಚ ನಾಯಕ ಮೊಜ್ತಬಾ ಖಾಮ್ನೆಯಿ ವಾಷಿಂಗ್ಟನ್‌ಗೆ ಎಚ್ಚರಿಕೆ ನೀಡಿದ್ದಾರೆ. ವೈಷಮ್ಯಗಳು ಪುನರಾರಂಭಗೊಂಡ ನಂತರದ ತಮ್ಮ ಮೊದಲ ಸಂದೇಶದಲ್ಲಿ ಖಾಮ್ನೆಯಿ ಅಮೆರಿಕಕ್ಕೆ ಈ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಡ್ರೋನ್‌ಗಳನ್ನು ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಾಗಿ ತಡೆಹಿಡಿದಿವೆ ಎಂದು ಕುವೈತ್ ಮತ್ತು ಬಹ್ರೇನ್ ತಿಳಿಸಿವೆ. ಆದಾಗ್ಯೂ, ವಾಣಿಜ್ಯ ನೌಕೆಗಳು ಮತ್ತು ಅಮೆರಿಕದ ಸಿಬ್ಬಂದಿಯ ಮೇಲೆ ಇರಾನ್ ನಡೆಸಿದ ದಾಳಿಯ ಯತ್ನಕ್ಕೆ ಪ್ರತಿಕ್ರಿಯೆಯಾಗಿ ಸೆಪ್ಟೆಂಬರ್ 1 ರಂದು ತನ್ನ ಪಡೆಗಳು ಇರಾನ್‌ನ ಗುರಿಗಳ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟಕಾಮ್) ತಿಳಿಸಿದೆ.

ಜುಲೈ ದಾಳಿಯ ಒಂದು ತಿಂಗಳ ನಂತರ ಅಮೆರಿಕ ತನ್ನ ದಾಳಿಗಳನ್ನು ಪುನರಾರಂಭಿಸಿದೆ. ಸೋಮವಾರ ಹಾರ್ಮುಝ್‌ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಯ ನಂತರ ಈ ಪ್ರತಿದಾಳಿಗಳು ನಡೆದಿವೆ ಎಂದು ವರದಿಯಾಗಿದೆ.