ದ್ವೇಷ ಮತ್ತು ವಿಭಜನೆಯ ರಾಜಕೀಯವನ್ನು ಕರ್ನಾಟಕದ ಜನತೆ ತಿರಸ್ಕರಿಸಿದ್ದು ಶ್ಲಾಘನೀಯ: ಜಮಾಅತೆ ಇಸ್ಲಾಮಿ ಹಿಂದ್

0
243

ಸನ್ಮಾರ್ಗ ವಾರ್ತೆ

ನವದೆಹಲಿ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ದ್ವೇಷ ಮತ್ತು ವಿಭಜನೆಯ ರಾಜಕೀಯವನ್ನು ಕರ್ನಾಟಕದ ಜನ ತಿರಸ್ಕರಿಸಿದ್ದು ಶ್ಲಾಘನೀಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜೆಐಹೆಚ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ.ಸಲೀಂ ಇಂಜಿನಿಯರ್‌ರವರು, ಕರ್ನಾಟಕ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

“ದ್ವೇಷ ಮತ್ತು ಧ್ರುವೀಕರಣದ ಪ್ರತಿಪಾದಕರನ್ನು ಸೋಲಿಸಿದ್ದಕ್ಕಾಗಿ ಕರ್ನಾಟಕದ ಜನತೆಯನ್ನು ನಾವು ಶ್ಲಾಘಿಸುತ್ತೇವೆ. ಜನರನ್ನು ಕೋಮುವಾದದ ಮೂಲಕ ವಿಭಜಿಸುವ ಮತ್ತು ದ್ವೇಷದ ಮೂಲಕ ಧ್ರುವೀಕರಿಸುವ ಪ್ರಯತ್ನಗಳ ಹೊರತಾಗಿಯೂ, ಕರ್ನಾಟಕದ ಜನರು ತಮ್ಮ ಸಂಯಮವನ್ನು ಕಾಪಾಡಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕೋಮುವಾದವನ್ನು ಹರಡುವ ಮೂಲಕ ಪ್ರಯತ್ನಿಸಲಾಯಿತಾದರೂ, ಕನ್ನಡಿಗರು ಅದಕ್ಕೆ ಬಗ್ಗಲಿಲ್ಲ” ಎಂದು ತಿಳಿಸಿದ್ದಾರೆ.

ಪ್ರಚೋದನೆ ನೀಡಿದ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ದೇಶವು ಹೇಗೆ ಒಗ್ಗಟ್ಟಾಗಿ ಉಳಿಸಿಕೊಳ್ಳಬಹುದು ಎಂಬುದರ ಕುರಿತು ಕರ್ನಾಟಕದ ಜನತೆ ಮಾದರಿಯಾಗಿ ತೋರಿಸಿದ್ದಾರೆ. ನಿರುದ್ಯೋಗದಂತಹ ನೈಜ ಸಮಸ್ಯೆಗಳು, ಅಧಿಕಾರದಲ್ಲಿರುವವರ ವೈಫಲ್ಯಗಳು ಮತ್ತು ಕಾರ್ಯ ವೈಖರಿಯನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಭಾವನಾತ್ಮಕ ಸಮಸ್ಯೆಗಳನ್ನು ಉಲ್ಲೇಖಿಸಲಾಗಿತ್ತು. ಬೆಲೆ ಏರಿಕೆಯಿಂದ ಮುಕ್ತಿ, ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣವು ಹೆಚ್ಚು ಮುಖ್ಯವಾದವು ಎಂದು ಜನತೆ ಚುನಾವಣೆಯಲ್ಲಿ ತೋರಿಸಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸಿದವರು ಮತ್ತು ದ್ವೇಷ ಸಾಧಿಸಿದವರು ಚುನಾವಣೆಯಲ್ಲಿ ಸೋಲು ಕಂಡಿರುವುದು ಸ್ವಾಗತಾರ್ಹ’ ಎಂದು ಸಲೀಂ ಇಂಜಿನಿಯರ್ ತಿಳಿಸಿದ್ದಾರೆ.

ಜನರ ಈ ನಿರ್ಧಾರವು ದ್ವೇಷವನ್ನು ಹರಡುವ ಮೂಲಕ ಲಾಭವನ್ನು ಪಡೆದುಕೊಳ್ಳುವ ರಾಜಕೀಯ ಪಕ್ಷಗಳು ತಮ್ಮ ಕ್ರಮವನ್ನು ಸರಿಪಡಿಸಿಕೊಳ್ಳಬೇಕು. ಹೀಗಾಗಿ, ತುಳಿತಕ್ಕೊಳಗಾದವರಿಗೆ ನ್ಯಾಯವನ್ನು ಪ್ರತಿಪಾದಿಸುವುದು, ಕೋಮು ಸೌಹಾರ್ದತೆಯನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿ ವಿಷಯಗಳ ಮೇಲೆ ಕೇಂದ್ರೀಕರಿಸುವುದು ಚುನಾವಣೆ ಗೆಲ್ಲುವ ಏಕೈಕ ಮಾರ್ಗವೆಂದು ಕರ್ನಾಟಕದ ಫಲಿತಾಂಶಗಳು ಸಾಬೀತುಪಡಿಸಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ತಿಳಿಸಿದೆ.