ಮೋದಿಗೆ ಭಾಷಣ ಬರೆದು ಕೊಡುತ್ತಿದ್ದ ಸೋನಿ ಯುಪಿಎಸ್‌ಸಿ ಚೇರ್ಮನ್: ದಿ ವೈರ್ ವರದಿ ಬೆನ್ನಲ್ಲೇ ವ್ಯಾಪಕ ಚರ್ಚೆ

0
437

ಸನ್ಮಾರ್ಗ ವಾರ್ತೆ

ಯುಪಿಎಸ್‌ಸಿ ಚೇರ್ಮೆನ್ ಆಗಿ ಮನೋಜ್ ಸೋನಿ ಪ್ರಮಾಣವಚನ ಸ್ವೀಕರಿಸಿರುವುದರ ಬೆನ್ನಿಗೆ ಅವರ ಕುರಿತಾದ ದಂಗುಬಡಿಸುವ ವಿವರಗಳು ಹೊರ ಬರುತ್ತಿವೆ. ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಭಾಷಣಗಳನ್ನು ಬರೆದುಕೊಡುತ್ತಿದ್ದವರು ಇವರೇ ಆಗಿದ್ದರು ಎಂದು ದಿ ವೈರ್ ವರದಿ ಮಾಡಿದೆ.. ಈ ಹಿನ್ನೆಲೆಯಲ್ಲಿ ಮೋದಿಗೆ ಆಪ್ತರಾದ ಇವರನ್ನು ಚೋಟಾ ಮೋದಿ ಎಂದು ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಐಎಎಸ್ ಅಧಿಕಾರಿ ಅಥವಾ ಅಕಾಡೆಮಿಕ್ ವಲಯದಲ್ಲಿ ಸಾಕಷ್ಟು ಹೆಸರು ಗಳಿಸಿದ ವ್ಯಕ್ತಿಗಳನ್ನು ಯುಪಿಎಸ್‌ಸಿ ಅಧ್ಯಕ್ಷರಾಗಿ ನೇಮಿಸಲಾಗುತ್ತದೆ. ಆದರೆ ಈ ಸೋನಿಗೆ ಇಂಥ ಯಾವ ವಿಶೇಷತೆಯೂ ಇಲ್ಲ. ಮಾತ್ರ ಅಲ್ಲ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಜೊತಗಿನ ಆಪ್ತ ಸಂಬಂಧಕ್ಕಾಗಿ ಇವರು ಗುರುತಿಸಿಕೊಂಡಿದ್ದಾರೆ

ಅಂದಹಾಗೆ ಯುಪಿಎಸ್ಸಿಗೆ ಸಾಕಷ್ಟು ಮಹತ್ವ ಇದೆ. ಭಾರತ ಸರಕಾರದ ಅಧೀನದಲ್ಲಿರುವ ಎಲ್ಲಾ ಗ್ರೂಪ್ ಎ ಅಧಿಕಾರಿಗಳ ರಿಕ್ರೂಟ್ಮೆಂಟ್ ಮಾಡುವ ಭಾರತದ ಪ್ರಮುಖ ರಿಕ್ರೂಟ್ಮೆಂಟ್ ಸಂಸ್ಥೆಯಾಗಿ ಯುಪಿಎಸ್ಸಿ ಗುರುತಿಸಿಕೊಂಡಿದೆ. ಐಎಎಸ್, ಐಎಫ್ಎಸ್, ಐಪಿಎಸ್ ಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತಿ ವರ್ಷ ಯುಪಿಎಸ್ಸಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ದೆಹಲಿಯ ಧೋಲ್‌ಪುರ್ ಹೌಸ್ ನಲ್ಲಿ ಈ ಕಮಿಷನ್ ನ ಕೇಂದ್ರ ಸ್ಥಾನವಿದೆ.

ಇದೀಗ ಇಷ್ಟು ಮಹತ್ವಪೂರ್ಣ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಪ್ತರಾಗಿ ಗುರುತಿಸಿಕೊಂಡಿರುವ ಮತ್ತು ಛೋಟಾ ಮೋದಿ ಎಂಬ ಅಡ್ಡ ಹೆಸರನ್ನು ಗಳಿಸಿಕೊಂಡಿರುವ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಇದರ ಸ್ವತಂತ್ರತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.