ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಎರಡು ಬಡ ಕುಟುಂಬಗಳಿಗೆ ಮನೆ ಹಸ್ತಾಂತರ

0
937

ಸನ್ಮಾರ್ಗ ವಾರ್ತೆ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಎರಡು ಬಡ ಕುಟುಂಬಗಳಿಗೆ ದಾನಿಗಳ ಸಹಾಯದಿಂದ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.

ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿಯ ನಿರ್ದೇಶಕರಾದ ಅಶ್ರಫ್ ಮಂಗಳೂರು ಗುಜ್ಜರ್ ಬೆಟ್ಟಿನ ನಾಲ್ಕನೆ ರಸ್ತೆ ಬಳಿಯ ಮೊದಲ ಮನೆಯ ಕೀಲಿ ಕೈಯನ್ನು 8 ನೇ ವಾರ್ಡಿನ ಪಂಚಾಯತ್ ಸದಸ್ಯರಾದ ಪುರಂದರ, ವತ್ಸಲ, ಡಾ.ಫಹೀಮ್ ಅವರ ಸಮ್ಮುಖದಲ್ಲಿ ಫಲನುಭವಿಗೆ ಅವರಿಗೆ ಹಸ್ತಾಂತರಿಸಿದರು.

 

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ನಾಯಕರಾದ ಅಮೀರ್ ಕುದ್ರೋಳಿಯವರು ಎರಡನೇ ಮನೆಯ ಕೀಲಿಕೈ 7 ನೇ ವಾರ್ಡಿನ ಪಂಚಾಯತ್ ಸದಾದಯರಾದ ವಿಜಯ್, ಸುಜಾನ ಮತ್ತು ಮಮ್ತಾಝ್ ಅವರ ಸಮ್ಮುಖದಲ್ಲಿ ಫಲನುಭವಿಗೆ ಹಸ್ತಾಂತರಿಸಿದರು.

ಮನೆ ಹಸ್ತಾಂತರಿಸಿ ಮಾತನಾಡಿದ ಎಚ್.ಆರ್.ಎಸ್ ನಿರ್ದೇಶಕರಾದ ಅಶ್ರಫ್ ಮಂಗಳೂರು, ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವುದು ಇಸ್ಲಾಮಿನ ಆದರ್ಶವಾಗಿದೆ. ಇವತ್ತು ಮಾನವೀಯ ಮೌಲ್ಯಗಳು ಕಳೆಗುಂದುವ ಸಮಯದಲ್ಲಿ ಇಂತಹ ಶ್ಲಾಘನಾರ್ಹ ಕಾರ್ಯಗಳು ಮಾನವೀಯತೆ ಜೀವಂತಿಕೆಯ ಸಾಕ್ಷ್ಯ ವಹಿಸುತ್ತದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಎಚ್.ಆರ್.ಎಸ್ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಎಲ್ಲ ಕಾಲದಲ್ಲೂ ತನ್ನ ಕೈಯಲಾದ ಸಹಾಯ ಮಾಡುತ್ತ ಬಂದಿದೆ. ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅರ್ಥಿಕ ಹೊಡೆತ ಬಿದ್ದಾಗಲೂ ಇಲ್ಲದವರಿಗೆ ಉಣ ಬಡಿಸುವ ಕೆಲಸ ನಿರ್ವಹಿಸಿದೆ. ಸಂಘಟನೆಗಳು ಮತ್ತಷ್ಟು ಇಂತಹ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುವಂತಾಗಲಿ ಎಂದು ಹಾರೈಸಿದರು.

ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿ, ಜಮಾಅತೆ ಇಸ್ಲಾಮಿ ಹಿಂದ್ ಬಡವರ ಸಂಕಷ್ಟಗಳಿಗೆ ಹಲವಾರು ವರ್ಷಗಳಿಂದ ನಿರಂತರವಾಗಿ ಸ್ಪಂದಿಸುತ್ತ ಬಂದಿದೆ. ಕೋವಿಡ್ ಸಂದರ್ಭದಲ್ಲಿ ದಾನಿಗಳ ಸಹಕಾರದೊಂದಿಗೆ ವಲಸೆ ಕಾರ್ಮಿಕರಿಗೆ, ಬಡವರಿಗೆ ಆಹಾರ ಮತ್ತು ರೇಷನ್ ಕಿಟ್ ಒದಗಿಸುವ ಕೆಲಸ ನಿರ್ವಹಿಸಿದ್ದೇವೆ. ಸಂಘಟನೆಯು ಆರೋಗ್ಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಸಹಾಯ ಮಾಡಿದೆ. ಅದರೊಂದಿಗೆ ಸೂರಿಲ್ಲದವರಿಗೆ ಸೂರು ಒದಗಿಸುವುದು ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಸಮಾಜ ಸೇವಾ ವಿಭಾಗದ ಒಂದು ಉದ್ದೇಶವೂ ಆಗಿದೆ. ಇದುವರೆಗೆ ದಾನಿಗಳ ಸಹಾಯದೊಂದಿಗೆ ಹನ್ನೊಂದು ಮನೆಗಳನ್ನು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾತಿ ಮತ ಧರ್ಮದ ಬೇಧವಿಲ್ಲದೆ ನಿರ್ಮಿಸಿಕೊಡಲಾಗಿದೆ ಎಂದರು.

ತೋನ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟೇಶ್ ಕುಂದರ್ ಮಾತನಾಡಿ ಜಮಾಅತೆ ಇಸ್ಲಾಮಿ ಹಿಂದ್ ನ ಕಾರ್ಯವನ್ನು ಶ್ಲಾಘಿಸಿದರು. ಇನ್ನೂ ಹೆಚ್ಚಿನ ಸೇವೆಗೈಯುವಂತಾಗಲಿಯೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷರಾದ ಅಬ್ದುಲ್ ಕಾದೀರ್ ,ತೋನ್ಸೆ ಪಂಚಾಯತ್ ಕಾರ್ಯದರ್ಶಿ ದಿನಕರ ಬೆಂಗ್ರೆ, ಮೌ.ಅಸ್ಘರ್ ಕಾಸ್ಮಿ, ಮೌಲನ ಆದಮ್ ಸಾಹೇಬ್, ಪಂಚಾಯತ್ ಸದಸ್ಯೆಯಾದ ಕುಸುಮಾ, ಜಮೀಲಾ, ವೆಲ್ಫೇರ್ ಪಕ್ಷದ ಝೈನುಲ್ಲಾ ಹೂಡೆ, ಎಸ್.ಐ.ಓ ನ ವಾಸೀಮ್ ಉಪಸ್ಥಿತರಿದ್ದರು.