ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್‌ ವತಿಯಿಂದ ಬಡಕುಟುಂಬಕ್ಕೆ ಮನೆ ಹಸ್ತಾಂತರ

0
475

ಸನ್ಮಾರ್ಗ ವಾರ್ತೆ

ಮಂಗಳೂರು: ತಾಲೂಕಿನ ಬಡ್ಡೂರು ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಜೋಪಡಿಯೊಂದರಲ್ಲಿ ತಂಗಿದ್ದ, ಕಂತು ಕಟ್ಟಲಾಗದೆ ಬ್ಯಾಂಕ್‌ ಪಾಲಾಗುವ ನೋಟೀಸು ಬಂದಾಗ, ಆ ಗುಡಿಸಲನ್ನು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ನಗರ ಘಟಕವು ಬ್ಯಾಂಕ್‌ನಿಂದ ವಿಮೋಚಿಸಿ ಆ ಬಡ ಕುಟುಂಬಕ್ಕೆ ಮರಳಿಸಿತ್ತು. ವರ್ಷಗಳ ಬಳಿಕ ಆ ಜೋಪಡಿಯನ್ನು ಕೆಡವಿ, ಮೂಲಭೂತ ಸೌಕರ್ಯಗಳುಳ್ಳ ಚಂದದ ಮನೆ ನಿರ್ಮಿಸಿ, ಇತ್ತೀಚೆಗಷ್ಟೇ ಆ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಸಮಾಜ ಸೇವಾ ಘಟಕ ಮಂಗಳೂರು ಸಂಚಾಲಕರಾದ ಅಬ್ದುಲ್‌ ಗಫೂರ್‌ ಕುಳಾಯಿಯವರು ಮಾತನಾಡುತ್ತಾ, ಮನೆಯ ಗಾತ್ರಕ್ಕಿಂತಲೂ ಮನೆಯಲ್ಲಿ ಮನಃಶಾಂತಿ ಬಹುಮುಖ್ಯವೆಂದೂ ಅದನ್ನೇ ಸದಾ ನೆಲೆನಿಲ್ಲಿಸಬೇಕೆಂದು ಹಿತೋಪದೇಶ ನೀಡಿದರು.

ಉದ್ಯಮಿಗಳಾದ ಅಸ್ಗರ್ ಅಲೀ, ಬಶೀರ್‌ ಅಹ್ಮದ್, ಮುಹಮ್ಮದ್ ಇಸ್ಹಾಕ್‌ ಫರಂಗಿಪೇಟೆ, ಬಶೀರ್‌ ಬೈಕಂಪಾಡಿ, ಶರೀಫ್‌ ಸಾದ್‌ ಸೂರಲ್ಪಾಡಿ, ಮುಹಮ್ಮದ್ ಬಡ್ಡೂರ್‌, ಅಬ್ದುಲ್‌ ಕರೀಮ್‌ ಬೆಂಗರೆ, ಮುಖ್ತಾರ್‌ ಅಹ್ಮದ್‌ ಪಾಣೆಮಂಗಳೂರು ಮತ್ತಿತರರು ಉಪಸ್ಥಿತರಿದ್ದರು. ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್‌ ಮದನಿಯವರು ಸಮಾರೋಪ ನುಡಿಗಳನ್ನಾಡಿ ಸರ್ವ ರೀತಿಯಲ್ಲಿ ಸಹಕರಿಸಿದ ದಾನಿಗಳಿಗೆ ಪ್ರಾರ್ಥಿಸಿದರು.