ಇಂದಿನಿಂದ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದಿಂದ ‘ಸುದೃಢ ಕುಟುಂಬ, ಸುಭದ್ರ ಸಮಾಜ’ ರಾಷ್ಟ್ರೀಯ ಅಭಿಯಾನ

0
531

ಸನ್ಮಾರ್ಗ ವಾರ್ತೆ

ಮಂಗಳೂರು: ಪ್ರಚಲಿತ ಸಾಮಾಜಿಕ ಪರಿಸ್ಥಿತಿಯ ಅಧ್ಯಯನದಿಂದ ಸಮಾಜದ ಮೂಲಭೂತ ಘಟಕವಾಗಿರುವ ಕುಟುಂಬವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬರುತ್ತಿದೆ. ನಿರಂತರವಾಗಿ ಬೆಳೆಯುತ್ತಿರುವ ಭೌತಿಕವಾದವು ಕುಟುಂಬದ ಬುನಾದಿಯನ್ನೇ ಅಲುಗಾಡಿಸುತ್ತಿದೆ. ಕುಟುಂಬದ ಸದಸ್ಯರ ಮಧ್ಯೆ ಪರಸ್ಪರ ಗೌರವ, ಕಾಳಜಿ ಕಡಿಮೆಯಾಗುತ್ತಿದೆ. ಗೃಹ ಹಿಂಸೆಯು ಭಾರೀ ಪ್ರಮಾಣದಲ್ಲಿ ಹೆಚ್ಚಿರುವುದು ಲಾಕ್ಡನ್ ಸಂದರ್ಭ ಬೆಳಕಿಗೆ ಬಂದಿದೆ ಆ ಹಿನ್ನೆಲೆಯಲ್ಲಿ ಫೆ19ರಿಂದ 28ರವರೆಗೆ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ‘ಸುದೃಢ ಕುಟುಂಬ-ಸುಭದ್ರ ಸಮಾಜ’ಕ್ಕಾಗಿ ರಾಷ್ಟ್ರೀಯ ಅಭಿಯಾನವನ್ನು ಆಯೋಜಿಸಿದೆ ಎಂದು ಅನುಪಮ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಭಾಗದ ಜತೆ ಕಾರ್ಯದರ್ಶಿ ರಹ್ಮತುನ್ನಿಸಾ ಅಭಿಯಾನದ ಮೇಲ್ವಿಚಾರಕಿಯಾಗಿದ್ದಾರೆ. ತಳಮಟ್ಟದ ಈ ಅಭಿಯಾನದಲ್ಲಿ ಆತ್ಮಾವಲೋಕನಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ಅಂದರೆ ಕಾರ್ನರ್ ಮೀಟಿಂಗ್, ಕುಟುಂಬ ಸಭೆಗಳು, ಸ್ಪರ್ಧೆಗಳು, ಫ್ಯಾಮಿಲಿ ಕ್ವಿಝ್, ಅಂತರ್‌ಧರ್ಮೀಯ ಸಂಬಂಧಗಳು, ಅಂತರ್‌ರಾಷ್ಟ್ರೀಯ ವೆಬಿನಾರ್, ಫ್ಯಾಮಿಲಿ ಕೌನ್ಸಿಲಿಂಗ್, ವಕೀಲರೊಂದಿಗೆ ಚಾವಡಿ ಚರ್ಚೆ, ತಜ್ಞರೊಂದಿಗೆ ಆನ್‌ಲೈನ್ ಚರ್ಚೆ, ಜುಮಾ ಖಾ, ಗುಂಪು ಚರ್ಚೆ ಇತ್ಯಾದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರಿಗೆ, ಮಸೀದಿಯ ಇಮಾಮರಿಗೆ, ವಿದ್ವಾಂಸರಿಗೆ ಪತ್ರ ಬರೆದು ಗಮನ ಸೆಳೆಯಲಾಗುವುದು. ಮಂಗಳೂರು ನಗರ ಸಹಿತ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲೂ ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಬೀಹಾ ಫಾತಿಮಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ದ.ಕ.ಜಿಲ್ಲಾ ಸಂಚಾಲಕಿ ಸಮೀನಾ ಉಪ್ಪಿನಂಗಡಿ, ರಾಜ್ಯ ಸಮಿತಿ ಸದಸ್ಯೆ ಮರಿಯಮ್ ಶಹೀರಾ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್‌ನ ರಾಜ್ಯಾಧ್ಯಕ್ಷೆ ಹುಮೈರಾ ಬಾನು ಉಪಸ್ಥಿತರಿದ್ದರು.