ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 6: ಜೆಎನ್‍ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಎಬಿವಿಪಿ ನೇತೃತ್ವದಲ್ಲಿ ದುಷ್ಕರ್ಮಿಗಳು ಕ್ರೂರವಾಗಿ ಹಲ್ಲೆ ಎಸಗಿದ ಘಟನೆಯನ್ನು ವಿರೋಧಿಸಿ ದಿಲ್ಲಿ ಪೊಲೀಸ್ ಕೇಂದ್ರ ಕಚೇರಿಯ ಮುಂದೆ ರಾತ್ರೆಯಿಡೀ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ರಾತ್ರೆ ನಿದ್ರಿಸದೆ ಪ್ರತಿಭಟನೆಯಲ್ಲಿ ನಿರತರಾದರು. ಇವರ ಬೆಂಬಲಕ್ಕೆ ಹಲವು ನಾಯಕರು ಧಾವಿಸಿ ಬಂದರು. ಗಾಯಗೊಂಡಿರುವ ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಶಿ ಘೋಷ್ ಸಹಿತ ವಿದ್ಯಾರ್ಥಿಗಳನ್ನು ದಾಖಲಿಸಿರುವ ಏಮ್ಸ್ ಗೆ ಭೇಟಿ ನೀಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಂತೈಸಿದರು. ದುಷ್ಕರ್ಮಿಗಳನ್ನು ತಡೆಯದ ಪೊಲೀಸರ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಜೆಎನ್‍ಯುನಲ್ಲಿ ಉದ್ವಿಗ್ನ ಸ್ಥಿತಿ ಇದ್ದು ದುಷ್ಕರ್ಮಿಗಳನ್ನು ಬೆಂಬಲಿಸಿ ಒಂದು ಗುಂಪು ಕ್ಯಾಂಪಸ್ ಹೊರಗೆ ಪ್ರದರ್ಶನ ನಡೆಸಿತು.
ಪ್ರಿಯಾಂಕಾ ಗಾಂಧಿ ಆಗಮನದೊಂದಿಗೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಏಮ್ಸ್ ಗೆ ಭೇಟಿ ನೀಡಿದರು. ಆಸ್ಪತ್ರೆಯ ಹೊರಗೆ ಕಾ೦ಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣಾ ಸ್ಥಿತಿ ತಲೆದೋರಿತು. ಸಿಪಿಎಂ ಪೊಲಿಟ್‍ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಏಮ್ಸ್ ಗೆ ಬಂದು ಗಾಯಾಳುಗಳನ್ನು ಭೇಟಿಯಾದರು.
ಎಬಿವಿಪಿಯವರು ಮಾತ್ರವಲ್ಲ ಹೊರಗಿನ ದುಷ್ಕರ್ಮಿಗಳು ಕೂಡ ಮುಖವಾಡ ಧರಿಸಿ ಬಂದು ಹಲ್ಲೆ ಮಾಡಿದರೆಂದು ವಿದ್ಯಾರ್ಥಿ ಯೂನಿಯನ್ ಆರೋಪಿಸಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಬ್ಬರು ಅಧ್ಯಾಪಕರೂ ಗಾಯಗೊಂಡಿದ್ದಾರೆ. ತಲೆಗೆ ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜೆಎನ್‍ಯು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.












