ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 6: ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಜವಾಹರಲಾಲ್ ನೆಹರೂ ಯುನಿವರ್ಸಿಟಿ (ಜೆಎನ್‍ಯು) ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಮಾನವ ಸಂಪನ್ಮೂಲ ಸಚಿವಾಲಯ ಮಧ್ಯಪ್ರವೇಶಿಸಿದೆ. ಜೆಎನ್‍ಯು ರಿಜಿಸ್ಟ್ರಾರ್, ಪ್ರೋಕ್ಟರ್, ರೆಕ್ಟರ್ ರನ್ನು ಸಚಿವಾಲಯವು ಕಾರ್ಯದರ್ಶಿ ಕಚೇರಿಗೆ ಕರೆಸಿಕೊಂಡಿದೆ. ಇಂದು ಸಚಿವಾಲಯ ಕಾರ್ಯದರ್ಶಿಯವರ ಮುಂದೆ ನೇರವಾಗಿ ಹಾಜರಾಗಬೇಕೆಂದು ಸೂಚಿಸಲಾಗಿದೆ.
ರವಿವಾರ ಸಂಜೆ, ಜೆಎನ್‍ಯುವಿಗೆ ಮುಖವಾಡ ಧರಿಸಿದ ತಂಡ ನಡೆಸಿದ ದಾಳಿಯಲ್ಲಿ 20 ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗಾಯಗೊಂಡರು. ವಿದ್ಯಾರ್ಥಿ ಯೂನಿಯನ್ ನ ಅಧ್ಯಕ್ಷೆ ಎಸ್‍ಎಫ್‍ಐ ನಾಯಕಿ ಐಶಿ ಘೋಷ್, ಅಧ್ಯಾಪಕಿ ಸುಚಿತ್ರ ಸೇನ್‍ರ ತಲೆಗೆ ದುಷ್ಕರ್ಮಿಗಳು ಹೊಡೆದ್ದರಿಂದ ತಲೆ ಒಡೆದಿದೆ. ಇವರನ್ನು ಏಮ್ಸ್ ಗೆ ದಾಖಲಿಸಲಾಯಿದೆ.
ಘಟನೆಗೆ ಸಂಬಂಧಿಸಿ ನಾಲ್ಕುಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಂಪಸ್‍ನಿಂದ ಹೊರಗಿನವರು ಕಸ್ಟಡಿಯಲ್ಲಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ರವಿವಾರ ರಾತ್ರೆ ನಡೆದ ದಾಳಿಯ ಕುರಿತು ಒಂದಕ್ಕಿಂತ ಹೆಚ್ಚು ದೂರುಗಳು ಲಭಿಸಿದ್ದು ಕೂಡಲೇ ಎಫ್‍ಐಆರ್ ದಾಖಲಿಸಲಾಗುವುದು ಎಂದು ದಿಲ್ಲಿ ಪೊಲೀಸರು ಹೇಳಿದರು. ದಾಳಿಯ ಹಿನ್ನೆಲೆಯಲ್ಲಿ ಉಪಕುಲಪತಿಯ ವಿರುದ್ಧ ಅಧ್ಯಾಪಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸುರಕ್ಷೆ, ಶಾ೦ತಿ ದೃಢಪಡಿಸದಿದ್ದರೆ ಉಪಕುಲಪತಿ ರಾಜೀನಾಮೆ ನೀಡಬೇಕೆಂದು ಅವರು ಹೇಳಿದ್ದಾರೆ. ಜೆಎನ್‍ಯು ಅಧಿಕಾರಿಗಳು, ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಶಕ್ತ ಕ್ರಮ ಜರಗಿಸಬೇಕೆಂದು ಅಧ್ಯಾಪಕರು ಆಗ್ರಹಿಸಿದ್ದಾರೆ. ಇದೇವೇಳೆ ದಾಳಿಯನ್ನು ವಿರೋಧಿಸಿ ಗೇಟ್‍ವೇ ಆಫ್ ಇಂಡಿಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಖವಾಡ ಧರಿಸಿದ ಐವತ್ತಕ್ಕೂ ಹೆಚ್ಚು ಮಂದಿಯಿದ್ದ ತಂಡ ರವಿವಾರ ಸಂಜೆ ಆರು ಗಂಟೆಗೆ ದಾಂಧಲೆ ನಡೆಸಿದ್ದರು. ವಿದ್ಯಾರ್ಥಿಗಳನ್ನು ರಕ್ಷಿಸಲು ಯತ್ನಿಸಿದ ಅಧ್ಯಾಪಕರಿಗೂ ಹೊಡೆದಿದ್ದಾರೆ. ಅಧ್ಯಾಪಕರ ವಾಹನಗಳನ್ನು ಪುಡಿಗಟ್ಟಲಾಗಿದೆ. ಸಬರ್‍ಮತಿ, ಮಹಿಮಾಂಡವಿ, ಪೆರಿಯಾರ್ ಸಹಿತ ಹಾಸ್ಟೆಲ್‍ಗಳಲ್ಲಿ ದಾಂಧಲೆ ನಡೆದಿದೆ. ಕಲ್ಲೆಸೆತ ಮತ್ತು ಮಾರಕ ಆಯುಧಗಳಿಂದ ಗೂಂಡಾಗಳು ಹಾಸ್ಟೆಲ್‍ಗೆ ನುಗ್ಗಿ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾರೆ.












