ಜೋಪಡಿಯಲ್ಲಿದ್ದ ಹೃದ್ರೋಗಿ ದಂಪತಿ ಮತ್ತು ಮಕ್ಕಳನ್ನು ಹೊಸ ಮನೆಗೆ ಸ್ಥಳಾಂತರಿಸಿದ ಜಮಾಅತೆ ಇಸ್ಲಾಮಿ ಹಿಂದ್: ಸಹಕರಿಸಿದವರಿಗೆ ಪ್ರಾರ್ಥಿಸಿದ ಯಹ್ಯಾ ತಂಙಳ್

0
760

ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ಇದರ ಸಮಾಜ ಸೇವಾ ಘಟಕದ ವತಿಯಿಂದ ಮಂಗಳೂರು ತಾಲೂಕಿನ ವಲಚ್ಚಿಲ್ ಎಂಬ ಪ್ರದೇಶದಲ್ಲಿ ಅತ್ಯಂತ ಬಡ ಕುಟುಂಬವೊಂದಕ್ಕೆ ಹೊಸ ಮನೆ ನಿರ್ಮಿಸಿ ಕೊಡಲಾಯಿತು.‌ ಹೃದ್ರೋಗದಿಂದ ಬಳಲುವ ಪತಿ ಮತ್ತು ಪತ್ನಿ ಹಾಗೂ ಮೂರು ಹೆಣ್ಣು ಹಾಗೂ ಒಂದು ಗಂಡು ಮಕ್ಕಳ ಕುಟುಂಬವು ಈ ಮೂಲಕ ಜೋಪಡಿ ಬದುಕಿನಿಂದ ಮನೆ ಬದುಕಿಗೆ ಸ್ಥಳಾಂತರಗೊಂಡವು. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದ ಈ ಕುಟುಂಬವನ್ನು ನೋಡಿದ ಮಂಗಳೂರು ಜಮಾಅತೆ ಇಸ್ಲಾಮಿ ಹಿಂದ್, ಈ ಕುಟುಂಬವನ್ನು ಈ ಸ್ಥಿತಿಯಿಂದ ಪಾರುಗೊಳಿಸುವುದಕ್ಕಾಗಿ ದಾನಿಗಳನ್ನು ಸಂಪರ್ಕಿಸಿತು. ಆ ಮೂಲಕ ಲಭ್ಯವಾದ ನೆರವನ್ನು ಬಳಸಿಕೊಂಡು ಈ ಮನೆಯನ್ನು ನಿರ್ಮಿಸಲಾಯಿತು.

ಈ ಮನೆ ಹಸ್ತಾ೦ತರ ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಉದ್ಯಮಿಗಳಾದ ಜ| ಇಸ್‌ಹಾಕ್‌ ಫರಂಗಿಪೇಟೆಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಾಜಿ ಅಸ್ಗರಲೀ ಹಾಗೂ ಸಮಾಜ ಸೇವಕರೂ ಮತ್ತು ತಾಲೂಕು ಪಂಚಾಯತಿ ಸದಸ್ಯರುಗಳೂ ಆದ ಅಬ್ದುಲ್‌ ರಝ್ಝಾಕ್‌ ಅಮ್ಮೆಮಾರ್‌ ಹಾಗೂ ಅಬ್ದುಸ್ಸಮದ್‌ ಭಾಗವಹಿಸಿದ್ದರು. ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್‌ ಮದನಿಯವರು, ಸಮಾರೋಪ ಮತ್ತು ಸಂದರ್ಭೋಚಿತ ಹಿತವಚನಗಳನ್ನು ನೀಡಿ, ಈ ಪುಣ್ಯ ಕಾರ್ಯದಲ್ಲಿ ನೆರವಾದ ಎಲ್ಲರಿಗೂ ಪ್ರಾರ್ಥಿಸಿದರು.