ಎರಡು ವರ್ಷಗಳ ಬಳಿಕ ಪತ್ರಕರ್ತ ಸಿದ್ದಿಕ್ ಕಾಪ್ಪನ್‌‌ರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

0
220

ಸನ್ಮಾರ್ಗ ವಾರ್ತೆ

ನವದೆಹಲಿ: 2020ರ ಅಕ್ಟೋಬರ್‌ನಲ್ಲಿ ಹತ್ರಾಸ್‌ನಲ್ಲಿ ನಡೆದ ದಲಿತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಕುರಿತು ವರದಿ ಮಾಡಲು ಹತ್ರಾಸ್‌ಗೆ ತೆರಳುತ್ತಿದ್ದ ವೇಳೆ ಉತ್ತರ ಪ್ರದೇಶ ಸರ್ಕಾರದಿಂದ ಬಂಧಿಸಲ್ಪಟ್ಟಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಾಪ್ಪನ್‌‌ರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಕಾಪ್ಪನ್ ಅವರನ್ನು ಆರು ವಾರಗಳ ಕಾಲ ದೆಹಲಿಯಲ್ಲಿದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಆದೇಶಿಸಿದೆ. ಆರು ವಾರಗಳ ನಂತರ, ಅವರು ಕೇರಳದ ತನ್ನ ಮನೆಗೆ ಸ್ಥಳಾಂತರಗೊಳ್ಳಬಹುದು ಮತ್ತು ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮಾಡಬಹುದು.

ಬಿಡುಗಡೆಗೂ ಮುನ್ನ ತನ್ನ ಪಾಸ್‌ಪೋರ್ಟ್‌ ಒಪ್ಪಿಸುವಂತೆ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ. ಅವರ ವಿರುದ್ಧ ದಾಖಲಾಗಿರುವ ಪಿಎಂಎಲ್‌ಎ ಪ್ರಕರಣದಲ್ಲಿ ಜಾಮೀನಿಗಾಗಿ ನ್ಯಾಯಾಲಯಕ್ಕೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಅವರು ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದಾಗ ಕಾರಿನಲ್ಲಿ ಪತ್ತೆಯಾದ ದಾಖಲೆಗಳಲ್ಲಿ ಪ್ರಚೋದನಕಾರಿ‌ಯಾದ ಏನಾದರೂ ಇತ್ತೇ ಎಂಬುದನ್ನು ಸಾಬೀತುಪಡಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಪೀಠ ಹೇಳಿದೆ.

“ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತ ಅಭಿವ್ಯಕ್ತಿಯ ಹಕ್ಕಿದೆ. ಅವರು ಸಂತ್ರಸ್ತರಿಗೆ ನ್ಯಾಯ ಬೇಕು ಎಂದು ತೋರಿಸಲು ಮತ್ತು ಸಾಮಾನ್ಯ ಧ್ವನಿ ಎತ್ತಲು ಪ್ರಯತ್ನಿಸುತ್ತಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಅದು ಅಪರಾಧವೇ?” ಸಿಜೆಐ ಲಲಿತ್‌ರವರು ಪ್ರಶ್ನಿಸಿದರು.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಎರಡು ವರ್ಷಗಳಿಂದ ಸಿದ್ದಿಕ್ ಕಪ್ಪನ್ ಜೈಲಿನಲ್ಲಿದ್ದರು. 2020ರ ಸೆಪ್ಟೆಂಬರ್ 14ರಂದು ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ವರದಿ ಮಾಡುವುದಾಕ್ಕಾಗಿ ಕಾಪ್ಪನ್ ಹಾಗೂ ಇತರ ಮೂವರೊಂದಿಗೆ ಕಾರಿನಲ್ಲಿ ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದಾಗ ಬಂಧನಕ್ಕೊಳಗಾಗಿದ್ದರು. ಅಂದಿನಿಂದ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.