ಒಂದು ವರ್ಷದ ಮಗುವಾಗಿದ್ದಾಗ ವಿವಾಹ: 21 ವರ್ಷದ ಯುವತಿಗೆ ಕೊನೆಗೂ ಬಾಲ್ಯ ವಿವಾಹದಿಂದ ಮುಕ್ತಿ ನೀಡಿದ ನ್ಯಾಯಾಲಯ

0
191

ಸನ್ಮಾರ್ಗ ವಾರ್ತೆ

ಜೋಧ್‌ಪುರ: ಧಾರ್ಮಿಕ ವಿಧಿವಿಧಾನಗಳೊಂದಿಗೆ ತನ್ನ 1ನೇ ವಯಸ್ಸಿನಲ್ಲಿ ಬಲವಂತದ ಬಾಲ್ಯ ವಿವಾಹಕ್ಕೊಳಗಾಗಿದ್ದ 21ನೇ ವರ್ಷದ ಯುವತಿ ರೇಖಾಳಿಗೆ ರಾಜಸ್ಥಾನದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿ ನೀಡಿದೆ. ತನ್ನ ಒಂದನೇ ವಯಸ್ಸಿನಲ್ಲಿ ಮದುವೆಯಾಗಿದ್ದ ವ್ಯಕ್ತಿಯೊಂದಿಗೆ ವೈವಾಹಿಕ ಜೀವನ ಆರಂಭಿಸುವಂತೆ ಮನೆಯವರು ಒತ್ತಡ ಹೇರಿದಾಗ ಯುವತಿ ನ್ಯಾಯಾಲಯದ ಮೊರೆ ಹೋಗಿದ್ದಳು.

ಗುರುವಾರ ಕೌಟುಂಬಿಕ ನ್ಯಾಯಾಲಯದ ಅಧ್ಯಕ್ಷ ಪ್ರದೀಪ್ ಕುಮಾರ್ ಮೋದಿ ಅವರು ವಿವಾಹವನ್ನು ರದ್ದುಗೊಳಿಸಿ ಆದೇಶವಿತ್ತರು.

ಅಜ್ಜನ ಮರಣದ ನಂತರ, ಹುಡುಗಿಗೆ ಕೇವಲ ಒಂದು ವರ್ಷದವಳಿದ್ದಾಗ ಹಳ್ಳಿಯ ಹುಡುಗನೊಂದಿಗೆ ಮದುವೆ ಮಾಡಲಾಗಿತ್ತು. ಕೆಲವು ವರ್ಷಗಳ ಹಿಂದೆ ಮದುವೆ ಸಮಾರಂಭವನ್ನು ಪೂರ್ಣಗೊಳಿಸುವಂತೆ ಸಂಬಂಧಿಕರು ಯವತಿಯನ್ನು ಒತ್ತಾಯಿಸಿದರು. ಆದರೆ ನರ್ಸ್ ಆಗಲು ಬಯಸುವ ಬಾಲಕಿ ತನ್ನ ಕನಸಿಗೆ ಸಂಬಂಧಿಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಹುಡುಗಿ ಮದುವೆಗೆ ಒಪ್ಪದಿದ್ದಾಗ ಜಾತಿ ಪಂಚಾಯತಿ ಕೂಡ ಆಕೆಯ ಸಂಬಂಧಿಕರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಬಾಲ್ಯವಿವಾಹ ಪದ್ಧತಿ ಇನ್ನೂ ನಿರ್ಮೂಲನೆಯಾಗಿಲ್ಲ, ಇದನ್ನು ಹೋಗಲಾಡಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ಆದೇಶದ ನಂತರ ಯುವತಿ ಮುಂದೆ ಬಂದು ತೀರ್ಪಿಗೆ ಧನ್ಯವಾದ ಅರ್ಪಿಸಿದರು. “ನರ್ಸ್ ಆಗುವುದು ನನ್ನ ಕನಸಾಗಿದ್ದು, ಇನ್ನು ಮುಂದೆ ಅದರತ್ತ ಗಮನ ಹರಿಸುತ್ತೇನೆ. ಇಂದು ನನ್ನ ಜನ್ಮದಿನ. ನನಗೆ 21 ವರ್ಷ. ಈ ತೀರ್ಪನ್ನು ನನಗೆ ಮತ್ತು ನನ್ನ ಕುಟುಂಬಕ್ಕೆ ಹುಟ್ಟುಹಬ್ಬದ ಉಡುಗೊರೆಯಾಗಿ ಸ್ವೀಕರಿಸುತ್ತೇನೆ” ಎಂದು ಹರ್ಷ ವ್ಯಕ್ತ ಪಡಿಸಿದರು‌.