ಕಡಬ ಕಾಡಾನೆ ದಾಳಿ ಪ್ರಕರಣ| ಆನೆಗಳ ಬಗ್ಗೆ ವಿಡಿಯೋ, ವರದಿ ಮಾಡಿದ್ದ ಯುವಕನ ವಿರುದ್ಧವೇ ದೂರು ನೀಡಿದ್ದ ಪಂಚಾಯತ್!

0
279
ಫೋಟೋ ಕೃಪೆ: ಕಡಬ ಟೈಮ್ಸ್

ಸನ್ಮಾರ್ಗ ವಾರ್ತೆ

ಕಡಬ: ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಗೆ ರೆಂಜಿಲಾಡಿ ಗ್ರಾಮದ ಇಬ್ಬರು ಬಲಿಯಾದ ಘಟನೆ ವರದಿಯಾಗುತ್ತಿದ್ದಂತೆ ಈ ಹಿಂದೆ ಆನೆಗಳ ಹಾವಳಿಯ ಬಗ್ಗೆ ವರದಿ ಮಾಡಿದ್ದ ವ್ಯಕ್ತಿಯೋರ್ವರ ಮೇಲೆ ಪಂಚಾಯತ್‌ನ ಅಧಿಕಾರಿಗಳೇ ದೂರು ದಾಖಲಿಸಿದ ಹಾಗೂ ವರದಿ ಮಾಡಿದ್ದ ವಿಡಿಯೋವನ್ನು ಡಿಲೀಟ್‌ ಮಾಡಿಸಿ ಘಟನೆ ಇದೀಗ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಮರ್ಧಾಳದ ಸಂತೋಷ್ ಎಂಬವರು ಆನೆ ಸಮಸ್ಯೆಯ ಬಗ್ಗೆ ವರದಿ ತಯಾರಿಸಿ, ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ ಇವರ ಮೇಲೆ ಐತ್ತೂರು ಪಿಡಿಓ‌ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಡಬ ಪೋಲಿಸರು ವೀಡಿಯೋ ಡಿಲೀಟ್ ಮಾಡಿಸಿದ್ದರು.

ಆನೆಗಳ ಉಪಸ್ಥಿತಿಯ ಬಗ್ಗೆ ಈ ಹಿಂದೆಯೇ ವರದಿ ಮಾಡಿದ್ದರೂ ಕಡಬ ಪೊಲೀಸರು ವಿಡಿಯೋ ಡಿಲೀಟ್ ಮಾಡಿಸಿದ್ದನ್ನು ಖಂಡಿಸಿ ಸಾರ್ವಜನಿಕರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ತುಸು ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನಾ ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿಗಳು ಬಾರದೆ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ನಿರಂತರ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಈ ಹಿಂದೆ ವರದಿ ಮಾಡಿದಾಗಲೇ ಆನೆಗಳನ್ನು ನಿಯಂತ್ರಿಸುವ ಬಗ್ಗೆ ಪರಿಹಾರ ಕ್ರಮ ಕೈಗೊಂಡಿದ್ದರೆ ಇವತ್ತು ಎರಡು ಅಮಾಯಕ ಜೀವಗಳು ಬಲಿಯಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.