ಅಗ್ನಿಪಥ್: ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ: ವಿವಾದ ಸೃಷ್ಟಿಸಿದ ವಿಜಯವರ್ಗೀಯ ಹೇಳಿಕೆ

0
439

ಸನ್ಮಾರ್ಗ ವಾರ್ತೆ

ಇಂದೋರ್: ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ವಿವಾದಕ್ಕೀಡಾಗಿದ್ದಾರೆ.

ಸದ್ಯ ಅವರ ಹೇಳಿಕೆಯ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಅಗ್ನಿಪಥ್ ವಿರೋಧಿ ಪ್ರತಿಭಟನೆ ನಡುವೆಯೇ ಈ ಹೇಳಿಕೆ ನೀಡಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

‘ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ’ ಎಂದು ವಿಜಯವರ್ಗೀಯ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಿಜಯವರ್ಗೀಯ ಅವರು ನೀಡಿದ ಹೇಳಿಕೆಗೆ ವಿವಿಧ ವಲಯಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‌

ಈ ವೀಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅಲ್ಲದೇ, ಸ್ವತಃ ಬಿಜೆಪಿ ನಾಯಕ ವರುಣ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು  ವಿಜಯವರ್ಗೀಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ರಕ್ಷಣಾ ಪಡೆಗಳನ್ನು ಅಪಮಾನಿಸಿದ ವಿಜಯವರ್ಗೀಯ ಕ್ಷಮೆ ಕೇಳಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಆಗ್ರಹಿಸಿದೆ.

ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಸಮಜಾಯಿಷಿ ನೀಡಿರುವ ವಿಜಯವರ್ಗೀಯ, ‘ಟೂಲ್‌ಕಿಟ್ ಗ್ಯಾಂಗ್’ ತನ್ನ ಹೇಳಿಕೆಯನ್ನು ತಿರುಚಲು ಮತ್ತು ದೇಶದ ಕಾರ್ಮಿಕರನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

“ನಾನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೇನೆಂದರೆ, ಅಗ್ನಿಪಥ್ ಯೋಜನೆಯಿಂದ ಹೊರಬಂದ ಅಗ್ನಿವೀರ್ ಖಂಡಿತವಾಗಿಯೂ ತರಬೇತಿ ಪಡೆಯುತ್ತಾನೆ ಮತ್ತು ಕರ್ತವ್ಯಕ್ಕೆ ಬದ್ಧನಾಗಿರುತ್ತಾನೆ. ಸೇನೆಯಲ್ಲಿ ತನ್ನ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅವನು ಹೋಗುವ ಯಾವುದೇ ಕ್ಷೇತ್ರದಲ್ಲಿ ಅವನ ಶ್ರೇಷ್ಠತೆಯನ್ನು ಬಳಸಿಕೊಳ್ಳಲಾಗುತ್ತದೆ” ಎಂದು ಅವರು ಹೇಳಿದರು. “ಸೈನಿಕರ ವಿರುದ್ಧ ಈ ಟೂಲ್‌ಕಿಟ್ ಗ್ಯಾಂಗ್‌ನ ಪಿತೂರಿಗಳ ಬಗ್ಗೆ ರಾಷ್ಟ್ರಕ್ಕೆ ಚೆನ್ನಾಗಿ ತಿಳಿದಿದೆ” ಎಂದು ವಿಜಯವರ್ಗಿಯಾ ಸಮಜಾಯಿಷಿ ನೀಡಿ, ಜಾರಿಕೊಳ್ಳಲು ಯತ್ನಿಸಿದ್ದಾರೆ.