ಕಲಬುರಗಿ ಪ್ರವಾಹ: ಜಮಾಅತೆ ಇಸ್ಲಾಮೀ ಹಿಂದ್–ಹೆಚ್.ಆರ್.ಎಸ್. ಮಾನವೀಯ ಸೇವೆ

0
174

ಸನ್ಮಾರ್ಗ ವಾರ್ತೆ

ಭೀಮಾ ನದಿ (Bhima River) ಪ್ರವಾಹದಿಂದಾಗಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದರವಾಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಅಕ್ಕ ಪಕ್ಕದ ಗ್ರಾಮಗಳಿಗೆ ನೀರು ನುಗ್ಗಿ ಬೆಳೆ ಹಾಗೂ ಸಾವಿರಾರು ಮನೆಗಳು ನಾಶವಾಗಿದೆ. ಹೀಗಾಗಿ ಗ್ರಾಮಸ್ಥರು ಮನೆ, ಮಠ ಬಿಟ್ಟು ಬೇರೆಡೆ ತೆರಳುತ್ತಿದ್ದಾರೆ.

ಸದ್ಯ SDRF ತಂಡ‌ದಿಂದ ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಾಗಿದ್ದು ಹಲವೆಡೆ ರಸ್ತೆ ಸಂಚಾರ ಬಂದ್‌ ಆಗಿದೆ. ಅನೇಕ ಸೇತುವೆಗಳು ನದಿ ನೀರಿನಿಂದ ಮುಳುಗಿವೆ. ಕಲಬುರಗಿ, ಬೀದರ್, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿನ ಗ್ರಾಮಗಳಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಜನಸಾಮಾನ್ಯರು ಸಂಕಷ್ಟಪಡುವಂತಾಗಿದೆ. ಅನೇಕರು ಮನೆ ಕಳೆದುಕೊಂಡಿದ್ದಾರೆ. ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಇದುವರೆಗೂ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅನೇಕ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 50 ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದು ಸಂಚಾರ ಸ್ಥಗಿತಗೊಂಡಿದೆ.

ಪರಿಸ್ಥಿತಿಯನ್ನು ಅವಲೋಕನ ಮಾಡಿದ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಹೆಚ್.ಆರ್.ಎಸ್. ಪ್ರಾಥಮಿಕ ಸಮೀಕ್ಷೆ ನಡೆಸಿ ಮೊದಲ ಹಂತದಲ್ಲೇ ಹೈವೇಯಲ್ಲಿ ನಿಂತಿದ್ದ ವಾಹನಗಳ ನಿರ್ವಾಹಕರಿಗೆ ಆಹಾರ ಪೊಟ್ಟಣಗಳನ್ನು ಒದಗಿಸಿತು. ಅದೇ ರೀತಿ ಜೇವರ್ಗಿ ತಾಲೂಕಿನಲ್ಲಿ ಸುಮಾರು 50 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ಹಂಚಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕರಾದ ಮಿನಾಜುದ್ದೀನ್, ಜೇವರ್ಗಿ ತಾಲೂಕು ಕಾರ್ಯಕರ್ತ ಅಝೀಝ್ ಪಟೇಲ್, ಹೆಚ್.ಆರ್.ಎಸ್. ತಂಡದ ಸ್ವಯಂಸೇವಕರು ಹಾಗೂ ಇತರರು ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗ್ರಾಮಗಳ ಸಮೀಕ್ಷೆ ನಡೆಸಿ ಆಹಾರ ಧಾನ್ಯಗಳ ಕಿಟ್‌ಗಳನ್ನು ಹಾಗೂ ಕಂಬಳಿಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. “ಈ ದುರಂತದ ಸಂದರ್ಭದಲ್ಲಿ ತಾವೆಲ್ಲರೂ ಪರಸ್ಪರ ಸಹಕಾರದೊಂದಿಗೆ ತಾಳ್ಮೆಯಿಂದ ಇರಬೇಕು. ನಾವು ಸದಾ ಸಂತ್ರಸ್ತರ ನೆರವಿಗೆ ಸಿದ್ದರಿದ್ದೇವೆ” ಎಂದು ಮಿನಾಜುದ್ದೀನ್ ಅವರು ತಿಳಿಸಿದರು.