ಕೊಚ್ಚಿ, ಮಾ. 19: ಮನೆಯಲ್ಲಿ ಒಬ್ಬರೇ ಇದ್ದ ವೃದ್ಧೆಯ ಕೊರಳಿನಿಂದ ಸರ ಕಿತ್ತು ಓಡಿದ ತಾಯಿ ಮಗಳನ್ನು ಪೊಲೀಸರು ಬಂಧಿಸಿದ್ದಾರೆ. ತಾನಿಕಲ್ ಎಂಬಲ್ಲಿ ಭಿಕ್ಷೆ ಕೇಳುತ್ತಾ ಬಂದ ತಾಯಿ ಮಗಳು ಮನೆಯಲ್ಲಿ ಒಬ್ಬರೇ ಇದ್ದ ವೃದ್ಧೆಯೊಡನೆ ಭಿಕ್ಷೆ ಕೇಳಿದ್ದಾರೆ. ವೃದ್ಧೆ ಮನೆಯಲ್ಲಿ ಯಾರೂ ಇಲ್ಲ, ತನ್ನಲ್ಲಿ ಹಣವೂ ಇಲ್ಲ, ಇಲ್ಲಿಂದ ಹೋಗಿ ಎಂದು ಹೇಳಿದರು.
ಭಿಕ್ಷುಕಿಯರು ಆಗ ಒಂದು ಲುಂಗಿಯಾದರೂ ಕೊಡಿ ಎಂದು ವೃದ್ಧೆಯೊಡನೆ ಕೇಳಿದ್ದಾರೆ. ಇವರ ಕುರಿತು ಕನಿಕರಪಟ್ಟ ವೃದ್ಧ ಮಹಿಳೆ ಒಂದು ಲುಂಗಿಯನ್ನು ತೆಗೆದು ಕಿಟಕಿಯಲ್ಲಿ ಕೊಡುತ್ತಿದ್ದಾಗ ವೃದ್ಧೆಯ ಕೊರಳಲ್ಲಿದ್ದ ಒಂದೂವರೆ ಪವನ್ ಚಿನ್ನದ ಸರವನ್ನು ಕಿತ್ತುಕೊಂಡು ಓಡಿ ಹೋಗಿದ್ದಾರೆ. ಸಮೀಪದ ಸಿಸಿಟಿವಿ ಯಲ್ಲಿ ಘಟನೆಯ ದೃಶ್ಯಗಳು ದಾಖಲಾಗಿತ್ತು. ನಂತರ ಸರಗಳ್ಳಿಯರಾದ ಜಿಜಿ (55) ಮತ್ತು ಆಕೆಯ ಪುತ್ರಿ ವಿಸ್ಮಯ (22)ರನ್ನು ಪೊಲೀಸರು ಬಂಧಿಸಿ ಅವರ ಕೈಯಲ್ಲಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.












