ಬಿಜೆಪಿ ಮೇಲೆ ಕೋಟಿ ಕೋಟಿ ಆಮಿಷದ ಆರೋಪ ಮಾಡಿದ ಸಾ.ರಾ.ಮಹೇಶ್, ಶ್ರೀನಿವಾಸ್ ಗೌಡ; ಸದನ ದಂಗು: ಬಿಜೆಪಿ ಗಪ್ ಚುಪ್ – ಸದನ ಕಲಾಪದ ಡೀಟೈಲ್ಸ್

0
759

ಸನ್ಮಾರ್ಗ ಜು. 19, 2019

ಬೆಂಗಳೂರು: ವಿಧಾನಸಭೆಯಲ್ಲಿ ನಡೆಯುತ್ತಿರುವ ಚರ್ಚೆಯು ಆಘಾತಕಾರಿ ಮತ್ತು ಅನಾಹುತಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದ್ದು, ಮೈತ್ರಿ ಸರಕಾರವನ್ನು ಉರುಳಿಸುವುದಕ್ಕಾಗಿ ಬಿಜೆಪಿಯಿಂದ ಅಕೋಟಿ ಕೋಟಿ ರೂಪಾಯಿಗಳ ಆಫರ್ ಬಂದಿರುವುದನ್ನು ಸಚಿವ ಸಾ ರಾ ಮಹೇಶ್ ಮತ್ತು ಶಾಸಕ ಶ್ರೀನಿವಾಸ್ ಗೌಡ ಸದನದ ಮುಂದೆ ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಶ್ರೀನಿವಾಸ್ ಗೌಡರು ತನಗೆ ಬಿಜೆಪಿಯಿಂದ 5 ಕೋಟಿ ಆಫರ್ ಬಂದಿತ್ತು ಎಂದು ಹೇಳಿದ ಬೆನ್ನಲ್ಲೆ ಸಚಿವ ಸಾರಾ ಮಹೇಶ್ ಅವರು ವಿಶ್ವನಾಥ್‍ಗೆ ಬಿಜೆಪಿ 28 ಕೋಟಿ ರೂ. ಆಫರ್ ಕೊಟ್ಟಿತ್ತು ಮತ್ತು ಅವರು ಅದನ್ನು ಖುದ್ದಾಗಿ ನನ್ನಲ್ಲಿ ಹೇಳಿಕೊಂಡಿದ್ದರು ಎಂದಿದ್ದಾರೆ. ಆದರೆ, ಬಿಜೆಪಿ ಮಾತ್ರ ದೀರ್ಘ ಮೌನಕ್ಕೆ ಜಾರಿದ್ದು ,ಗಪ್ ಚುಪ್ ಆಗಿ ಕುಳಿತಿದೆ.

ಈ ಹಿಂದೆ ವಿಶ್ವನಾಥ್ ಅವರು ಸರಕಾರ ಮತ್ತು ನನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಪಸರಿಗಣಿಸಿ ನನ್ನ ತೋಟಕ್ಕೆ ಕರೆದು ಪ್ರಶ್ನಿಸಿದ್ದೆ. ಏನ್ ಸಾರ್ ಸಮಸ್ಯೆ ಎಂದು ಕೇಳಿದ್ದೆ. ಅದಕ್ಕೆ ಅವರು ಚುನಾವಣೆಯ ಕಾಲದಲ್ಲಿ ಸಾಲ ಮಾಡಿದ್ದೇನೆ. ತೀರಿಸಲು ಕಷ್ಟ ಇದೆ ಎಂದಿದ್ದರು. ಈ ಸಂದರ್ಭದಲ್ಲಿ, ಸರ್ ಬೇಸರ ಮಾಡಿಕೊಳ್ಳಬೇಡಿ, ನನ್ನ ಬಳಿ ಯಾವುದೇ ಹಣ ಇಲ್ಲ. ಆದರೆ ನಾನು ಸಂಪಾದನೆ ಮಾಡಿರುವ ಹಣ ಇದೆ. ಅದನ್ನು ತಿಂಗಳಿಗೆ ಇಂತಿಷ್ಟು ಎಂದು ಕೊಡುತ್ತೇನೆ, ನೀವು ಸಾಲ ತೀರಿಸಿಕೊಳ್ಳಿ ಎಂದು ನಾನು ಹೇಳಿದ್ದೆ. ಆಗ ಅವರು, ನನ್ನನ್ನು ಬಿಜೆಪಿಯವರು ಕರೆದಿದ್ದರು. ಜೊತೆಗೆ 28 ಕೋಟಿ ರೂ. ಕೊಡುತ್ತೇನೆ ಎಂದಿದ್ದಾರೆ. ಆದರೆ ದೇವೇಗೌಡರು ಈ ಕಾಲದಲ್ಲಿ ನನ್ನನ್ನು ನಂಬಿ ಮೂಲೆಯಲ್ಲಿ ಇದ್ದವನ ಕರೆದುಕೊಂಡು ಬಂದು ಶಾಸಕನ ಸ್ಥಾನ ಕೊಟ್ಟರು. ಅವರಿಗೆ ಮೋಸ ಮಾಡಲ್ಲ ಎಂದಿದ್ದೇನೆ. ನೀವು ಸಾಲ ತೀರಿಸಲು ಒಂದು ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಿದ್ದರು ಎಂದ ಸಾ ರಾ ಮಹೇಶ್,

ಬೇಕಿದ್ದರೆ ಅವರನ್ನು ಕರೆಸಿ ಇಲ್ಲೆ ಕೇಳಿ, ನಾನು ಹೇಳುತ್ತಿರುವುದು ಸತ್ಯ. ಇಲ್ಲವಾದಲ್ಲಿ ಇನ್ಮುಂದೆ ಯಾವತ್ತು ಬಿಳಿ ಬಟ್ಟೆ ಹಾಕಲ್ಲ. ಕೈ ಮುಗಿದು ಸಾರ್ವಜನಿಕರ ಮುಂದೆ ವೋಟು ಕೇಳಲ್ಲ ಎಂದು ಮಹೇಶ್ ಶಪಥ ಮಾಡಿ ಸದನವನ್ನು ಅಚ್ಚರಿಯಲ್ಲಿ ಕೆಡವಿದರು. ಇದೇವೇಳೆ,

ಶಾಸಕ ಶ್ರೀನಿವಾಸ ಗೌಡ ಅವರು ಸದನದಲ್ಲಿ ಮಾತಾಡಿ, ಬಿಜೆಪಿ ನನಗೆ 5 ಕೋಟಿ ಹಣದ ಆಫರ್ ಕೊಟ್ಟಿತ್ತು ಎಂದಿದ್ದಾರೆ. ಶಾಸಕ ವಿಶ್ವನಾಥ್, ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಮೂವರೂ ಸೇರಿ ನಮ್ಮ ಮನೆಗೆ ಬಂದು ನೇರವಾಗಿ 5 ಕೋಟಿ ತಂದು ಕೊಟ್ಟರು. ಆಗ ನಾನು ನಿರಾಕರಿಸಿದ್ದೆ. ನಾನು ತೆಗೆದುಕೊಳ್ಳಲ್ಲ ಎಂದರೂ ಹಣ ಇಟ್ಟು ಹೋದರು ಎಂದರು.

ಈ ಬಗ್ಗೆ ನಾನು ಈ ಹಿಂದೆಯೂ ಹೇಳಿದ್ದೇನೆ. ಅಲ್ಲದೆ 30 ಕೋಟಿ ಕೊಡುತ್ತೇವೆ ಬರುತ್ತೀರಾ ಎಂದು ಬಿಜೆಪಿಯವರು ನನ್ನ ಕೇಳುತ್ತಿದ್ದಾರೆ ಎಂದರು.