ಕರ್ನಾಟಕದ ಸಾಮಾಜಿಕ- ರಾಜಕೀಯ ಚಿತ್ರಣ: ಜನಸಂಖ್ಯೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿರುವ ಸಮುದಾಯಗಳಿಗೆ ಸಿಕ್ಕಿರುವ ರಾಜಕೀಯ ಅಧಿಕಾರ ಎಷ್ಟು, ಪ್ರಾತಿನಿಧ್ಯ ಏನು? ಅಧ್ಯಯನಾತ್ಮಕ, ಅಂಕಿ- ಅಂಶ ಆಧಾರಿತ ಬರಹ

0
1824

ಸನ್ಮಾರ್ಗ ವಾರ್ತೆ

ಅಕ್ರಮ್ ಹಸನ್

ಕರ್ನಾಟಕ ದೇಶದ ಆರನೇ ದೊಡ್ಡ ರಾಜ್ಯ. ದಕ್ಷಿಣದ ಐದು ರಾಜ್ಯಗಳ ಪ್ಯಕಿ ಕರ್ನಾಟಕ ಅತೀ ದೊಡ್ಡ ರಾಜ್ಯ. ಜನ ಸಂಖ್ಯೆ ಆರೂವರೆ ಕೋಟಿ. ಇಲ್ಲಿ ಸಾಕ್ಷರತೆ 75%. ಹಿಂದೆ ಮ್ಯಸೂರು ಸಂಸ್ತಾನವಾಗಿತ್ತು. ಕನ್ನಡ ಮಾತನಾಡುವ ಜನ ಹೆಚ್ಚಿರುವ ಪ್ರಾಂತ್ಯಗಳನ್ನು ಸೇರ್ಪಡೆಗೊಳಿಸಿ ಪ್ರತ್ಯೇಕ ರಾಜ್ಯ ರಚನೆಗಾಗಿ ಕರ್ನಾಟಕ ಏಕೀಕರಣ ಚಳವಳಿ ನಡೆಯಿತು. ಬಳಿಕ 1956 ರಲ್ಲಿ ವಿಶಾಲ ಕರ್ನಾಟಕ ರಚನೆಯಾಯಿತು. ರಾಜ್ಯದಲ್ಲಿ 30 ಜಿಲ್ಲೆಗಳಿವೆ. 236 ತಾಲೂಕುಗಳಿವೆ. ರಾಜ್ಯದಲ್ಲಿ 6073 ಗ್ರಾಮ ಪಂಚಾಯತ್ ಗಳಿವೆ. ಒಂದು ಲಕ್ಷ 5 ಸಾವಿರ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಿದ್ದಾರೆ. ರಾಜ್ಯದಲ್ಲಿ 5 ಸಾವಿರ ದಿಂದ 20 ಸಾವಿರ ಜನ ಸಂಖ್ಯೆಯಿರುವ 90 ಪಟ್ಟಣ ಪಂಚಾಯತ್ ಗಳಿವೆ (TOWN PANCHAYATH). 20 ರಿಂದ 50 ಸಾವಿರ ಜನ ಸಂಖ್ಯೆಗಳ 113 ಪುರಸಭೆಗಳಿವೆ (TOWN MUNCIPALITY). 50 ಸಾವಿರ ದಿಂದ 3 ಲಕ್ಷ ಜನ ಸಂಖ್ಯೆಯ 58 ನಗರ ಸಭೆಗಳಿವೆ (CITY MUNCIPALITY). 3 ಲಕ್ಷಕ್ಕಿಂತಲೂ ಹೆಚ್ಚು ಜನ ಸಂಖ್ಯೆ ಇರುವ 10 ಮಹಾನಗರ ಪಾಲಿಕೆಗಳಿವೆ (CORPORATION). ಅಲ್ಲದೆ ಸ್ಥಳೀಯ ಅವಶ್ಯವಿರುವ ಪ್ರದೇಶಗಳಲ್ಲಿ 5 ಅಧಿಸೂಚಿತ ಪ್ರದೇಶಗಳಿವೆ. ಈ ರೀತಿ ಒಟ್ಟು 281 ನಗರಗಳಿವೆ.

224 ಶಾಸಕರಿದ್ದಾರೆ. 28 ಸಂಸದರಿದ್ದಾರೆ. ಇವರನ್ನು ನೇರವಾಗಿ ಜನರು ಆಯ್ಕೆ ಮಾಡುತ್ತಾರೆ. 75 MLC ಗಳಿದ್ದಾರೆ. ಇವರಲ್ಲಿ 25 MLC ಗಳನ್ನು ಸ್ಥಳೀಯ ಸಂಸ್ಥೆಗಳ ಚುನಾಯಿತ ಜನ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ. 7 ಜನರನ್ನು ರಾಜ್ಯದ ಶಿಕ್ಷಕರು, 7 ಜನರನ್ನು ರಾಜ್ಯದ ಪದವೀಧರರು ಆಯ್ಕೆ ಮಾಡುತ್ತಾರೆ. ಉಳಿದ 11 MLC ಗಳನ್ನು ಆಡಳಿತ ಪಕ್ಷಗಳ ಸಲಹೆಯಂತೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಪ್ರತೀ 2 ವರ್ಷಕ್ಕೊಮ್ಮೆ 25 MLC ಗಳ ಅವಧಿ ಮುಗಿದು ಹೊಸಬರನ್ನು ಆಯ್ಕೆ ಮಾಡುತ್ತಾರೆ. MLCಗಳ ಒಟ್ಟು ಅವಧಿ 6 ವರ್ಷ. MLC ನಿಧಿಗಳನ್ನು ರಾಜ್ಯದ ಯಾವುದೇ ಪ್ರದೇಶಕ್ಕೆ ಬಳಕೆ ಮಾಡಬಹುದು. MLA ನಿಧಿ ಅವರವರ ಕ್ಷೇತ್ರಕ್ಕೆ ಮಾತ್ರ. ರಾಜ್ಯದಿಂದ 12 ಜನ ರಾಜ್ಯಸಭಾ ಸದಸ್ಯರನ್ನು ಶಾಸಕರು ಆಯ್ಕೆ ಮಾಡುತ್ತಾರೆ. ಅಧಿಕಾರಾವಧಿ 6 ವರ್ಷ. ಪ್ರತಿ 2 ವರ್ಷಕೊಮ್ಮೆ 4 ಜನ ನಿವೃತ್ತಿಯಾಗುತ್ತಾರೆ. ನಿಧಿ ಬಳಕೆ ಇಡೀ ರಾಜ್ಯದಲ್ಲಿ ಮಾಡಬಹುದು. MPಗಳಿಗೆ ವರ್ಷಕ್ಕೆ 5 ಕೊಟಿ ಸಂಸದರ ನಿಧಿ ಬರುತ್ತದೆ. ಈ ನಿಧಿಯನ್ನು ಕಣ್ಣಿಗೆ ಕಾಣುವ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗಿಸಬಹುದು.

ರಾಜಕೀಯ ಮೀಸಲಾತಿ :- ಒಟ್ಟು 28 ಎಂಪಿ ಸ್ಥಾನಗಳಲ್ಲಿ 5 SCಗಳಿಗೆ, 2 STಗಳಿಗೆ ಮೀಸಲು. 224 MLA ಗಳಲ್ಲಿ 36 SC, 15 ST.

ಅದೇರೀತಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಕಾರ್ಪೋರೇಶನ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳ ಒಟ್ಟು ವಾರ್ಡುಗಳಲ್ಲಿ 50% ಶೇಕಡ ಮಹಿಳಾ ಮೀಸಲು. ಮಹಿಳಾ ಮೀಸಲಿನಲ್ಲಿ SC, ST, OBCಗಳಿಗೆ ಉಪಮೀಸಲಾತಿ ಲಭ್ಯವಿದೆ.

ಸ್ಥಳೀಯ ಸಂಸ್ಥೆಗಳಲ್ಲಿ 101 SC ಜಾತಿಗಳಿಗೆ 15 ಶೇಕಡ ಮೀಸಲಾತಿಯಿದ್ದರೆ, ST ಜಾತಿಗಳಿಗೆ 3 ಶೇಕಡ, 207 ಹಿಂದುಳಿದ ವರ್ಗಗಳ ಜಾತಿಗಳಿಗೆ 32 ಶೇಕಡ ಮೀಸಲಾತಿಯಿದೆ. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಕ್ಕಲಿಗ, ಲಿಂಗಾಯಿತ, ಜೈನ, ಕೈಸ್ತ, ರೆಡ್ಡಿ, ಬಂಟ, ಮೊದಲಾದ ಹಲವಾರು ಜಾತಿಗಳಿಗೆ ಮಾತ್ರ ಪ್ರತ್ಯೇಕವಾಗಿ ಮುಸ್ಲಿಂ, ಕುರುಬ, ಈಡಿಗ, ಬಿಲ್ಲವ, ಬಲಿಜ ಈ ರೀತಿ 2 ವರ್ಗ ವಿಂಗಡನೆ ಮಾಡಲಾಗಿದೆ.

ಶೈಕ್ಷಣಿಕ ಮತ್ತು ಉದ್ಯೊಗ ಮೀಸಲಾತಿ :-

ಸರಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಮೀಸಲಾತಿ ಬಗ್ಗೆ ತಪ್ಪು ಅಭಿಪ್ರಾಯಗಳಿವೆ. ಈ ಕೆಳಗಿನ ಮಾಹಿತಿಯನ್ನೊಮ್ಮೆ ಗಮನಿಸಿ: ದುರಂತವೆಂದರೆ ಯಾರು ಮೀಸಲಾತಿಯನ್ನು ಪಡೆಯುತ್ತಿದ್ದಾರೋ ಅವರು ಮೀಸಲಾತಿಯನ್ನು ನಾವು ಪಡೆಯುತ್ತಲೇ ಇಲ್ಲವೆಂಬ ನಾಟಕವಾಡುತ್ತಿದ್ದಾರೆ.

■ ಲಿಂಗಾಯಿತರು ಹಾಗೂ ಅದರ 42 ಒಳಪಂಗಡಗಳೂ ಕೆಟಗರಿ 3ಬಿ ಕೋಟಾದ ಅಡಿಯಲ್ಲಿ ಮೀಸಲಾತಿಯನ್ನು ಪಡೆಯುತ್ತಿವೆ.

■ ಇನ್ನು ರೆಡ್ಡಿ, ಒಕ್ಕಲಿಗ, ಬಂಟ, ಬಲಿಜ, ಕೊರವ ಇವರೂ ಸಹ ಕೆಟಗರಿ 3ಎ ಅಡಿಯಲ್ಲಿ ಒಟ್ಟು 12 ಜಾತಿಗಳವರು ಮೀಸಲಾತಿ ಪಡೆಯುತ್ತಿದ್ದಾರೆ.

■ ವಿಶ್ವಕರ್ಮ, ಕುರುಬರು, ಮಡಿವಾಳರು, ಕಂಬಾರರು, ಕುಂಬಾರರು, ದೇವಾಂಗ ಹೀಗೆ 102 ಜಾತಿಗಳು ಎಸ್.ಸಿ ಗೆ ಎಷ್ಟು ಮೀಸಲಾತಿ ಇದೆಯೋ ಅವರೂ ಸಹ ಅಷ್ಟೇ [ ಶೇ.15 ] ಮೀಸಲಾತಿ ಪಡೆಯುತ್ತಿದ್ದಾರೆ. ಇವರೆಲ್ಲಾ ನಾವು ಮೇಲ್ವರ್ಗದವರು ಎಂದೇ ಹೇಳಿಕೊಳ್ಳುತ್ತಾರೆ.

■ ಜೇನುಕುರುಬ, ಕಾಡುಕುರುಬ ಇವರೂ ಸಹ ಮೀಸಲಾತಿ ಪಡೆಯುತ್ತಿದ್ದಾರೆ..
ಪ್ರಶ್ನೆ ಬಂದಿರೋದು ನಾವ್ಯಾರೂ ಮೀಸಲಾತಿಯನ್ನು ಪಡೆಯುತ್ತಿಲ್ಲ ಅನ್ನುವ ಮಟ್ಟಿಗೆ ಈ ಮೇಲಿನವರಲ್ಲಿ ಬಹುತೇಕರು ವರ್ತಿಸುತ್ತಿರುವುದು.

■ಹೀಗಿದ್ದರೂ ಮೀಸಲಾತಿ ವಿರೋಧಿಸುವ ಬಹುತೇಕರು ಇದೇ ಗುಂಪುಗಳಲ್ಲಿದ್ದಾರೆಂಬುದು ಖೇದಕರ.

■ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಮೀಸಲಾತಿ ಪಡೀತೀದಾರೆ ಅನ್ನೋ ಹುಂಬತನ ಈಗಲೂ ಇದೆ. ಮೀಸಲಾತಿಯನ್ನು ವಿರೋಧಿಸುವ ಧೋರಣೆ ಹೊಂದಿರುವ ಇವರು ತಮಗಿರುವ ಮೀಸಲಾತಿಯನ್ನು ಮೊದಲು ಬಿಟ್ಟುಬಿಡಲಿ. ಬಡವರಿಗಾದರೂ ಸಿಗುತ್ತದೆ,ಇದು ಆದರ್ಶ.

ಕರ್ನಾಟಕದ ಮೀಸಲಾತಿ ವಿವರ ಇಂತಿದೆ.

೧) ಪ್ರ ವರ್ಗ – 1 4 % ( 95 ಜಾತಿಗಳು )

೨) ಪ್ರ ವರ್ಗ – 2 (ಎ) 15%. ( 102 ಜಾತಿಗಳು)

೩) ಪ್ರವರ್ಗ – 2 (ಬಿ) 4%. ( ಮುಸ್ಲಿಮರು )

೪) ಪ್ರವರ್ಗ – 3 (ಎ) 4% (ಒಕ್ಕಲಿಗ& ಬಲಿಜ)

೫) ಪ್ರವರ್ಗ – 3 (ಬಿ) 5% ( ಲಿಂಗಾಯತರು & ಇತರೆ 5)

೬) ಪ.ಜಾತಿ – 15% ( 101 ಜಾತಿಗಳು)

೭) ಪ.ಪಂಗಡ- 3% (50 ಜಾತಿಗಳು)

ಪ್ರವರ್ಗ ಗಳ 206 ಜಾತಿಗಳಿಗೆ 32 % ಮೀಸಲಾತಿ ಇರುವುದು ಹೆಚ್ಚೋ? ಅದು ಮುಖ್ಯವಾಗಿ ಸಾಮಾಜಿಕವಾಗಿ ಮುಂದುವರೆದು, ತಲತಲಾಂತರದಿಂದ ಹಲವಾರು ಎಕರೆ ಭೂಮಿಯನ್ನು ಹೊಂದಿ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದು. ಪ.ಜಾತಿ ಮತ್ತು ಪ.ಪಂಗಡದ 151 ಜಾತಿಗಳಿಗಿರುವ 18% ಮೀಸಲಾತಿ ಹೆಚ್ಚೋ ? ಇವರು ಸಾಮಾಜಿಕವಾಗಿ ಹಿಂದುಳಿದು, ಉಳುಮೆಗೆ ಭೂಮಿ ಇಲ್ಲದೆ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದು. ಈ ಪರಿಸ್ಥಿತಿ, ಇವತ್ತು ಪರಿಶಿಷ್ಟ ಜಾತಿಯ ಕೆಲವೇ ಕೆಲವು ಸಮುದಾಯದವರು ಮೀಸಲಾತಿಯ ಸಹಾಯದಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯುತ್ತಲಿದ್ದರೂ, ತಳ ಸಮುದಾಯದವರನ್ನು ಸಾಮಾಜಿಕವಾಗಿ ಮುಂದುವರೆಯಲು ಬಿಡುತ್ತಿಲ್ಲ.

ಭಾರತದ ಯಾವುದೇ ಒಂದು ಸಮುದಾಯ ಮೀಸಲಾತಿಯಿಂದ ಹೊರ ಉಳಿದಿಲ್ಲ ಯಾವುದಾದರೂ ಒಂದು ರೀತಿಯ ಮೀಸಲಾತಿ ಪಡೆದೆ ಪಡೆದಿರುತ್ತಾರೆ.

ಉದಾ :- ಪ್ರಾದೇಶಿಕ ಮೀಸಲಾತಿ (ಹೈದರಾಬಾದ್ ಕರ್ನಾಟಕ)

ನರಸಿಂಹ್ ರಾವ್ ಸರ್ಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿಯ ಜೊತೆಗೆ ಆರ್ಥಿಕವಾಗಿ ಹಿಂದುಳಿದವರನ್ನೂ ಸೇರಿಸಿ ಮೀಸಲು ನೀಡುವ ನಿಯಮವನ್ನು ಸೇರಿಸಿ ಆದೇಶ ಹೊರಡಿಸಿತು .

ಮೇಲ್ವರ್ಗದವರಿಗೆ ಮೀಸಲಾತಿ :-

ರಾಜ್ಯದಲ್ಲಿ 95% ಶೇಕಡ ಜನರಿಗೆ ಈ ಹಿಂದೆ ವಿವಿಧಾ ಮೀಸಲಾತಿ ಇದ್ದವು. ರಾಜ್ಯದಲ್ಲಿ ಹಿಂದೆ ಬ್ರಾಹ್ಮಣ, ಆರ್ಯ, ವೈಷ್ಣವ, ಮೊದಲಿಯಾರ್ ಮತ್ತು ನಾಗರಥಾ ಮೊದಲಾದ ಜಾತಿ ಯವರು ಮಾತ್ರ ಮೀಸಲಾತಿಯಿಂದ ವಂಚಿಸಲ್ಪಟ್ಟಿದ್ದರು. ರಾಜ್ಯದಲ್ಲಿ ಈ ಸಮುದಾಯಗಳ ಜನ ಸಂಖ್ಯೆ ಕೇವಲ 5 ರಿಂದ 6 ಶೇಕಡ. ರಾಷ್ಟ್ರಮಟ್ಟದಲ್ಲಿ ಕೇವಲ 17 ಶೇಕಡ ವಿರುವ ಬಲಿಷ್ಟ ವರ್ಗದವರಿಗೆ ಮಾತ್ರ ಮೀಸಲಾತಿ ಸಿಗುತ್ತಿರಲಿಲ್ಲ.

2019ರಲ್ಲಿ ಮೊದಿ ಸರಕಾರ ಈ ಮೇಲ್ವರ್ಗದವರಿಗೆ 10% ಮೀಸಲಾತಿ ನೀಡುವ ಕಾನೂನು ಜಾರಿಗೆ ತಂದರು. ಇದರಿಂದ 5 ರಿಂದ 6 ಶೇಕಡ ವಿರುವ ಈ ಬಲಿಷ್ಟ ವರ್ಗದವರಿಗೆ 10 ಶೇಕಡ ಮೀಸಲಾತಿ ಲಾಭ ಪಡೆಯಲಾಗುತ್ತದೆ. ರಾಜ್ಯದಲ್ಲಿ 16 ಶೇಕಡ ವಿರುವ ಮುಸ್ಲಿಮರಿಗೆ ಕೇವಲ 4 ಶೇಕಡ ಮೀಸಲಾತಿ ಲಭ್ಯವಿದೆ. ವಿ.ಪಿ.ಸಿಂಗ್ ರವರು ಪ್ರಧಾನ ಮಂತ್ರಿಯಾಗಿದ್ದಾಗ 27 ಶೇಕಡ ಮೀಸಲಾತಿ ನೀಡುವ ಕಾನೂನು ತಂದರು. ಇದರಲ್ಲಿ ಮುಸ್ಲಿಂ ಸಮುಡಾಯದ ಕಚ್ಚಿ ಮೇಮನ್, ನವಾಯತ್, ಬೊಹ್ರಾ, ಸೈಯದ್, ಶೇಕ್, ಪಠಾನ್, ಮುಗಲ್, ಮೆಹ್ದವಿ, ಜಮಾಯತಿ-ಕೊಂಕಣಿ ಮುಸ್ಲಿಮರನ್ನು ಹೊರತು ಪಡಿಸಿ ಎಲ್ಲಾ ಮುಸ್ಲಿಮರಿಗೆ ಈ ಮೀಸಲಾತಿ ಲಭ್ಯವಿದೆ. ಅಲ್ಲದೆ ಇತರ ಹಿಂದುಳಿದ ವರ್ಗಗಳ 199 ಜಾತಿಗಳು ಮತ್ತು ಇತರ ನೂರಾರು ಉಪ ಜಾತಿಗಳಿಗೆ ಮೀಸಲಾತಿ ಲಭ್ಯವಿದೆ.

ಜಾತಿವಾರು ರಾಜಕೀಯ ಅಧಿಕಾರ :-

ರಾಜ್ಯದಲ್ಲಿ ರಾಜಕೀಯ ಅಧಿಕಾರದಲ್ಲಿ ಹೆಚ್ಚು ಅವಕಾಶ ಪಡೆದಿರುವುದು. ಒಕ್ಕಲಿಗ, ಲಿಂಗಾಯಿತ ಮತ್ತು ಬ್ರಾಹ್ಮಣ ಜನ ಸಮುದಾಯಗಳು. ಮುಖ್ಯಮಂತ್ರಿ, ಶಾಸಕರು, ಸಂಸದರು ಹೆಚ್ಚಾಗಿ ಈ ಮೂರು ಸಮುದಾಯಗಳಿಂದ ಬಂದಿದ್ದಾರೆ. ಇವರಿಗೆ ತಮ್ಮ ಜನ ಸಂಖ್ಯೆಯ ಅನುಪಾತಕ್ಕಿಂತ ಹೆಚ್ಚು ಅಧಿಕಾರ ಸಿಕ್ಕಿದೆ. ರಾಜಕೀಯ ಮೀಸಲಾತಿಯಿಂದಾಗಿ ದಲಿತರು MP ಮತ್ತು MLA ಸ್ಥಾನಗಳಲ್ಲಿ ಗೆದ್ದಿರ ಬಹುದು. ಆದರೆ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದಲ್ಲೂ ಜನ ಸಂಖ್ಯೆಗೆ ಅನುಗುಣವಾಗಿ ಪಾಲು ಪಡೆದಿಲ್ಲ.

ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಎರಡನೇ ದೊಡ್ಡ ಸಮುದಾಯವಾಗಿದ್ದರೂ ರಾಜಕೀಯ ಪ್ರಾತಿನಿಧ್ಯ ತೀರಾ ಕಡಿಮೆ ಸಿಕ್ಕಿರುವುದು. ಮುಖ್ಯಮಂತ್ರಿ ಪದವಿ ಸಿಗಲೇ ಇಲ್ಲ. ಕಳೆದ 15 ವರ್ಷಗಳಿಂದ ಒಬ್ಬನೇ ಒಬ್ಬ ಮುಸ್ಲಿಂ ಸಂಸತ್ ಸದಸ್ಯ ಚುನಾಯಿತನಾಗಿಲ್ಲ. ಶಾಸಕರು ಸಂಸದರು, ಮಂತ್ರಿಗಳು ಮತ್ತು ರಾಜ್ಯಸಭೆ ಸ್ಥಾನಗಳು ಜನ ಸಂಖ್ಯೆಯ ಅನುಪಾತಕ್ಕಿಂತ ತೀರಾ ಕಡಿಮೆ ಸಿಕ್ಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ಲಭ್ಯವಾಗಿದ್ದರೂ ಇತರ ಹಿಂದುಳಿದ ವರ್ಗಗಳು ಆ ಮೀಸಲು ಪಟ್ಟಿಯಲ್ಲಿ ಸೇರಿರುವುದರಿಂದ ಅಲ್ಲಿಯೂ ಪ್ರಾತಿನಿಧ್ಯ ಸಿಗುತ್ತಿಲ್ಲ. ಕನಿಷ್ಟ ಸ್ಥಳೀಯ ಸಂಸ್ಥೆಗಳಲ್ಲಾದರೂ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನಿಗದಿಪಡಿಸಿದರೆ ತಕ್ಕ ಮಟ್ಟಿಗೆ ಸ್ಥಳೀಯ ರಾಜಕೀಯ ಅಧಿಕಾರದಲ್ಲಿ ಸ್ವಲ್ಪ ಪಾಲು ಸಿಗಬಹುದು.

ಮುಖ್ಯಮಂತ್ರಿ ಸ್ಥಾನ ವಂಚಿತರು :-

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಜಾತಿವಾರು ಜನಗಣತಿ ನಡೆಸಿದ್ದರು. ಹಿಂದುಳಿದ ವರ್ಗಗಳ ಆಯೋಗ ಈ ಜನಗಣತಿ ಕಾರ್ಯ ದೇಶದಲ್ಲೆ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿತು. ಇದರ ಅಂಕಿ ಅಂಶಗಳು ಸೋರಿಕೆಯಾಗಿ ಕೆಲವು ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆ ಪ್ರಕಾರ ರಾಜ್ಯದಲ್ಲಿ ಅತ್ಯಂತ ದೊಡ್ಡ ಜನ ಸಮುದಾಯವಾಗಿ ದಲಿತರು, ಎರಡನೇ ದೊಡ್ಡ ಸಮುದಾಯ ಮುಸ್ಲಿಮರು, ಮೂರನೇ ಸ್ಥಾನ ಲಿಂಗಾಯಿತ, ನಾಲ್ಕನೇ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ ಎಂದು ಗುರುತಿಸಲಾಯಿತು.

ಆದರೆ ರಾಜ್ಯದ ಒಂದನೇ ದೊಡ್ಡ ಸಮುದಾಯವಾದ ದಲಿತರು ಮತ್ತು ಎರಡನೇ ಜನ ಸಮುದಾಯವಾದ ಮುಸ್ಲಿಮರಿಗೆ ರಾಜಕೀಯ ಅಧಿಕಾರ ಮತ್ತು ಸರಕಾರದ ನೀತಿ ರೂಪಣಾ ಸಂಸ್ಥೆಗಳಲ್ಲಿ ತೀರಾ ಕಡಿಮೆ ಅವಕಾಶ ಸಿಕ್ಕಿದೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಸ್ಥಾನಗಳಿಂದ 73 ವರ್ಷಗಳಿಂದ ದಲಿತರು ಮತ್ತು ಕ್ರೈಸ್ತರನ್ನು ದೂರ ಇಡಲಾಗಿದೆ. 25 ಅಕ್ಟೋಬರ್ 1947 ರಿಂದ 26 ಜುಲೈ 2019 ರವರೆಗೆ ರಾಜ್ಯದಲ್ಲಿ ಒಟ್ಟು 38 ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮೂಣ ವಚನ ನೀಡಲಾಗಿತ್ತು. ಇದರಲ್ಲಿ ಕೆಲವರು ಪೂರ್ಣಾವಧಿ ಇನ್ನು ಕೆಲವು ಮುಖ್ಯಮಂತ್ರಿಗಳು ಅಲ್ಪಾವಧಿ ಅಧಿಕಾರ ಚಲಾಯಿಸಿದರು. ಈ 38 ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಮತ್ತು ದಲಿತ ಜನ ಸಮುದಾಯದ ವ್ಯಕ್ತಿ ಇಲ್ಲ.

ಹೆಚ್ಚಾಗಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಪಕ್ಷ. ಒಕ್ಕಲಿಗ ಸಮುದಾಯದಿಂದ ಕೆ.ಹನುಮಂತಯ್ಯ, ಕೆ.ಮಂಜಪ್ಪ, ಎಸ್.ಎಂ.ಕೃಷ್ಣ ಅಧಿಕಾರ ಚಲಾಯಿಸಿದರು. ಬಿಜೆಪಿಯಿಂದ ಒಕ್ಕಲಿಗ ಸಮುದಾದ ಸದಾನಂದ ಗೌಡ, ಮತ್ತು ಜನತಾ ಪರಿವಾರದಿಂದ ದೇವೇಗೌಡ ಮತ್ತು ಕುಮಾರ ಸ್ವಾಮಿ. ಒಟ್ಟು 7 ಜನ ಒಟ್ಟು 9 ಬಾರಿ ಒಕ್ಕಲಿಗ ಮುಖ್ಯಮಂತ್ರಿಗಳಾಗಿದ್ದಾರೆ.

ಲಿಂಗಾಯಿತ, ವೀರಶೈವ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠ ಮತ್ತು ವೀರೇಂದ್ರ ಪಾಟಿಲ್ ಸೇರಿ ನಾಲ್ಕು ಮಂದಿ ಮುಖ್ಯಮಂತ್ರಿಗಳು 6 ಬಾರಿ ಅಧಿಕಾರ ಚಲಾಯಿಸಿದರು. ಬಿಜೆಪಿಯಿಂದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಸೇರಿ ಇಬ್ಬರು 5 ಬಾರಿ ಮುಖ್ಯಮಂತ್ರಿಯಾದರು. ಜನತಾ ಪರಿವಾರದಿಂದ ಎಸ್. ಆರ್. ಬೊಮ್ಮಾಯಿ, ಜೆ. ಹೆಚ್. ಪಟೇಲ್ ಲಿಂಗಾಯಿತ ಮುಖ್ಯಮಂತ್ರಿಗಳಾದರು.

ಹಿಂದುಳಿದ ವರ್ಗದಿಂದ ಮುಖ್ಯಮಂತ್ರಿಗಳಾಗಿ ದೇವಾರಾಜ್ ಅರಸು (ಅರಸು), ಧರಮ್ ಸಿಂಗ್ (ರಜಪೂತ), ವೀರಪ್ಪ ಮ್ಯೊಲಿ (ದೇವಾಡಿಗ), ಬಂಗಾರಪ್ಪ (ಈಡಿಗ) ಮತ್ತು ಸಿದ್ದರಾಮಯ್ಯ (ಕುರುಬ) 5 ಜನ 6 ಬಾರಿ ಆಯ್ಕೆಯಾಗಿದ್ದಾರೆ. ಬ್ರಾಹ್ಮಣ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುಂಡೂರಾವ್ ಮತ್ತು ಜನತಾ ಪರಿವಾರದಲ್ಲಿ ರಾಮಕೃಷ್ಣ ಹೆಗ್ಡೆ, ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಬ್ರಾಹ್ಮಣ ಜನ ಸಮುದಾಯ 3 ಶೇಕಡ ಮಾತ್ರ ವಿದ್ದರೂ ಇಬ್ಬರು 5 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಮಂದಿ ಮುಖ್ಯಮಂತ್ರಿಗಳಾಗಿ 19 ವರ್ಷ ರಾಜ್ಯವಾಳಿದ್ದಾರೆ. ಲಿಂಗಾಯಿತ ಮುಖ್ಯಮಂತ್ರಿಗಳು 25 ವರ್ಷ ಅಧಿಕಾರದಲ್ಲಿದ್ದರು. ಹಿಂದುಳಿದ ವರ್ಗಗಳ ಮುಖ್ಯಮಂತ್ರಿಗಳು 18 ವರ್ಷ ರಾಜ್ಯವಾಳಿದ್ದಾರೆ. ಬ್ರಾಹ್ಮಣ ಮುಖ್ಯಮಂತ್ರಿಗಳು 8 ವರ್ಷ ಅಧಿಕಾರದಲ್ಲಿದ್ದರು. ಆದುದರಿಂದ ಹಿಂದುಳಿದ ವರ್ಗಗಳಲ್ಲಿ ಕೆಲವು ಜಾತಿ ವರ್ಗದವರು, ದಲಿತರು, ಕ್ರೈಸ್ತರು ಮತ್ತು ಮುಸ್ಲಿಮ್ ಸಮುದಾಯಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ನೀಡುವ ಬಗ್ಗೆ ಎಲ್ಲಾ ಪಕ್ಷಗಳು ಚಿಂತಿಸಿ ಸರ್ವರಿಗೂ ಸಮಪಾಲು ಸಿದ್ದಾಂತ ಅನುಸರಿಸಬೇಕಾಗಿದೆ. ಅಲ್ಲದೇ ಮಹಿಳಾ ವರ್ಗಕ್ಕೂ ರಾಜಕೀಯ ಅಧಿಕಾರ ಮತ್ತು ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಗಮನ ವಹಿಸಬೇಕಾಗಿದೆ.

(ಲೇಖಕರು SDPI ನ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.)