ಸನ್ಮಾರ್ಗ ವಾರ್ತೆ
ಬೆಂಗಳೂರು,ಸೆ.11: ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮರ್ಸಿ ಏಂಜೆಲ್ಸ್‌ನ ಡಾ.ತಾಹಾ ಮತೀನ್‌ರವರ ಸೇವೆಯನ್ನು ಗುರುತಿಸಿ ಘೋಷಿಸಲಾಗಿದ್ದ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿದ ಬಿಬಿಎಂಪಿ ಪುರಸ್ಕೃತರ ಪಟ್ಟಿಯಿಂದ ಅವರನ್ನು ಹೊರಗಿಡುವ ಮೂಲಕ ವಿವಾದಕ್ಕೆ ಗುರಿಯಾಗಿದೆ.
ಕೋವಿಡ್-19 ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಕುಟುಂಬದವರು ನಿರ್ವಹಿಸಲು ಮುಂದಾಗದೆ ಇದ್ದ ಸಂದರ್ಭದಲ್ಲಿ ಮರ್ಸಿ ಏಂಜೆಲ್ಸ್ ಸ್ವಯಂ ಸೇವಕರು ಅವರ ಅಂತ್ಯಸಂಸ್ಕಾರವನ್ನು ಗೌರವಪೂರ್ವಕವಾಗಿ ನೆರವೇರಿಸುತ್ತಿದ್ದಾರೆ.
ಮೇಯರ್ ಹಾಗೂ ಉಪಮುಖ್ಯಮಂತ್ರಿ ಅವರೇ ಪ್ರಶಸ್ತಿ ನೀಡಿ, ಬಳಿಕ ಪುರಸ್ಕೃತರ ಪಟ್ಟಿಯಿಂದ ಡಾ. ಮತೀನ್‌ರವರ ಹೆಸರನ್ನು ಕೈಬಿಟ್ಟು ಪ್ರಯೋಜನವೇನು. ಇಂತಹ ನಡವಳಿಕೆ ಮೇಯರ್ ಘನತೆಗೆ ತಕ್ಕುದಲ್ಲ. ಇದನ್ನು ಖಂಡಿಸುತ್ತೇನೆ’ ಎಂದು ವಜೀದ್ ಹೇಳಿದರು.
ಬಿಬಿಎಂಪಿ ಡಾ. ಮತೀನ್ ಸಹಿತ 33 ಸಾಧಕರಿಗೆ ಪ್ರಶಸ್ತಿ ಘೋಷಿಸಿತ್ತು. ಗುರುವಾರ ಬೆಳಿಗ್ಗೆ ಮಾಧ್ಯಮಕ್ಕೆ ಬಿಡುಗಡೆಯಾದ ಪಟ್ಟಿಯಲ್ಲಿ ಡಾ. ಮತೀನ್ ಹೆಸರಿತ್ತು. ಸಂಜೆ ವೇಳೆಗೆ ಅವರ ಹೆಸರು ಕಾಣೆಯಾಗಿದೆ. ಬಿಬಿಎಂಪಿ ವಿಪಕ್ಷನಾಯಕ ಅಬ್ದುಲ್ ವಜೀದ್ ಈ ವಿಚಾರವನ್ನು ಎತ್ತುವ ಮೂಲಕ ಮಹಾನಗರ ಪಾಲಿಕೆಯ ಎಡವಟ್ಟು ಬೆಳಕಿಗೆ ಬಂದಿದೆ. ಆರೆಸ್ಸೆಸ್ ಆಣತಿ ಮೇರೆಗೆ ಮೇಯರ್ ಗೌತಮ್ ಕುಮಾರ್‌ರವರು ಡಾ. ಮತೀನ್ ಹೆಸರನ್ನು ಕೈ ಬಿಟ್ಟಿದ್ದಾರೆ ಎಂದು ವಜೀದ್ ಆರೋಪಿಸಿದ್ದಾರೆ.
“ನಾನು ಸಹಿ ಹಾಕಿರುವ ಪ್ರಶಸ್ತಿ ವಿಜೇತರುಗಳ ಪಟ್ಟಿಯಲ್ಲಿ ಮರ್ಸಿ ಏಂಜೆಲ್ಸ್ ನ ಡಾ.ತಾಹಾ ಮತೀನ್‌ರ ಹೆಸರು ಇರಲಿಲ್ಲ. ಕೆಂಪೇಗೌಡ ಪ್ರಶಸ್ತಿಯನ್ನು ಸರಕಾರೇತರ ಸಂಸ್ಥೆಗಳಿಗೆ ನೀಡುವುದಿಲ್ಲ. ನಿನ್ನೆ ಕೌನ್ಸಿಲ್ ಸಭೆ ಮುಗಿಯುವಾಗ ರಾತ್ರಿ 7.30 ಆಗಿತ್ತು. ಕೊನೆಯ ಕ್ಷಣದಲ್ಲಿ ಉಂಟಾದ ಗೊಂದಲದಿಂದಾಗಿ ಈ ರೀತಿಯಾಗಿದೆ’ ಎಂದು ಮೇಯರ್ ಗೌತಮ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಡಾ. ತಾಹಾ ಮತೀನ್‌ರವರು ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವೈದ್ಯರ ಕೊರತೆಯ ನಡುವೆಯೂ ಸೋಂಕಿತರ ಚಿಕಿತ್ಸೆಯನ್ನು ಮುಂದುವರಿಸಿದ್ದರು ಹಾಗೂ ವೈದ್ಯರು ಮನೆಯಲ್ಲಿ ಕುಳಿತುಕೊಳ್ಳದೇ ಸೋಂಕಿತರ ಚಿಕಿತ್ಸೆಗೆ ಮುಂದೆ ಬರಬೇಕು ಎಂದು ಅವರು ಹೇಳಿದ್ದ ವೀಡಿಯೋವೊಂದು ವೈರಲ್ ಆಗಿತ್ತು.
ಆರೆಸ್ಸೆಸ್ ನೊಂದಿಗೆ ಸಂಪರ್ಕ ಇರುವ ವ್ಯಕ್ತಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ “ಆರ್‌ಎಸ್‌ಎಸ್‌ನವರಿಗೆ ಪ್ರಶಸ್ತಿ ನೀಡಬೇಕೆಂಬ ಯಾವುದೇ ನಿಯಮವಿಲ್ಲ. ಸಮಾಜ ಕಲ್ಯಾಣಕ್ಕೆ ಕೊಡುಗೆ ನೀಡಿದ ಸಾಧಕರನ್ನು ಗೌರವಿಸಬೇಕು. ಅದನ್ನು ನಾವು ಮಾಡಿದ್ದೇವೆ’ ಎಂದರು.
‘ಅಧಿಕೃತವಾಗಿ 32 ಮಂದಿಗೆ ಮಾತ್ರ ಪ್ರಶಸ್ತಿ ನೀಡಿರುವುದರಿಂದ ಮರ್ಸಿ ಏಂಜೆಲ್ಸ್ ಸಂಸ್ಥೆಗೆ ₹50 ಸಾವಿರ ಮೊತ್ತ ನೀಡಲು ಬರುವುದಿಲ್ಲ’ ಎಂದು ಮೇಯರ್ ತಿಳಿಸಿರುವುದಾಗಿ ವರದಿಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












