ಕೇರಳ: ಸರ್ಕಲ್ ಇನ್ಸ್ ಪೆಕ್ಟರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಮೇಲಧಿಕಾರಿಯ ಮೇಲೆ ಆರೋಪ ಹೊರಿಸಿದ ಪತ್ನಿ

0
682

ಕೊಚ್ಚಿ, ಜೂ.15: ಕೊಚ್ಚಿ ಸೆಂಟ್ರಲ್ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ಸರ್ಕಲ್ ಇನ್ಸ್ ಪೆಕ್ಟರ್ ವಿ.ಎಸ್ ನವಾಝ್ ಪತ್ತೆಯಾಗಿದ್ದಾರೆ. ತಮಿಳ್ನಾಡಿನ ಕರೂರ್ ರೈಲ್ವೆ ನಿಲ್ದಾಣದಿಂದ ಆರ್ ಪಿ ಎಫ್ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚಿದ್ದು ಅವರನ್ನು ಕೊಚ್ಚಿಯಿಂದ ತಮಿಳ್ನಾಡಿಗೆ ತೆರಳಿರುವ ಪೊಲೀಸರು ಕರೆತರಲಿದ್ದಾರೆ. ಇದೇವೇಳೆ, ಮೇಲಧಿಕಾರಿಯ ಕಿರುಕುಳದಿಂದ ನೊಂದು ತನ್ನ ಪತಿ ಮನೆ ಬಿಟ್ಟು ಹೋಗಿದ್ದಾರೆ. ಸುಳ್ಳು ಕೇಸು ದಾಖಲಿಸಲು ಹೇಳಿದ್ದಕ್ಕೆ ಅಸಮಾಧಾನಗೊಂಡಿದ್ದರು ಎಂದು ಅವರ ಪತ್ನಿ ಹೇಳಿಕೆ ನೀಡಿದ್ದಾರೆ. ತನ್ನ ಪತಿಯನ್ನು ಅತೀ ಹತ್ತಿರದಿಂದ ಬಲ್ಲ ಓರ್ವ ವ್ಯಕ್ತಿಯೆಂಬ ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಲ್ಲೆ- ಅವರೊಬ್ಬ ಹೇಡಿ ವ್ಯಕ್ತಿಯಲ್ಲ. ಮೇಲಧಿಕಾರಿಯ ಮಾನಸಿಕ ಕಿರುಕುಳಕ್ಕೆ ನೊಂದು ಅವರು ಹೊರಟು ಹೋಗಿದ್ದಾರೆ. ಕೆಲವರ ವಿರುದ್ಧ ಕೇಸು ದಾಖಲಿಸಿಕೊಳ್ಳಲು ಮೇಲಧಿಕಾರಿ ಒತ್ತಡ ಹೇರಿದ್ದು ಇದಕ್ಕೆ ಕಾರಣವೆಂದು ನವಾಝ್‍ರ ಪತ್ನಿ ಗಂಭೀರ ಆರೋಪ ಹೊರಿಸಿದ್ದಾರೆ.

ಅಸಿಸ್ಟೆಂಟ್ ಪೊಲೀಸ್ ಕಮಿಶನರ್ ಹಲವು ಬಾರಿ ಅವರಿಗೆ ವೈಯಕ್ತಿಕವಾಗಿ ನಿಂದಿಸಿದ್ದಾರೆ. ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಕೂಡ ಯತ್ನಿಸಿದ್ದಾರೆ. ವಯರ್‍ಲೆಸ್‍ನಲ್ಲಿ ಎಸಿಪಿಯೊಂದಿಗೆ ಮಾತಿನ ಚಕಮಕಿ ನಡೆದಿತ್ತು. ವಯರ್‍ಲೆಸ್ ಸೆಟ್‍ನ್ನು ತನಿಖಾದಳ ಪರಿಶೀಲಿಸಬೇಕು. ಮೇಲಧಿಕಾರಿಯ ಹೆಸರನ್ನು ಸರಿಯಾಗಿ ನನಗೆ ಹೇಳಿಲ್ಲ ಎಂದು ಸರ್ಕಲ್ ಇನ್ಸ್ ಪೆಕ್ಟರ್ ನವಾಝ್‍ರ ಪತ್ನಿ ಹೇಳಿದರು. ಇದೇ ವೇಳೆ ನವಾಝ್‍ರಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೇರಳ ಪೊಲೀಸ್ ಅಧಿಕಾರಿಗಳ ಅಸೋಸಿಯೇಶನ್ ಕಾರ್ಯದರ್ಶಿ ಸಿ ಆರ್ ರಾಜು ಒತ್ತಾಯಿಸಿದ್ದಾರೆ. ಅವರಿಗೆ ಮಾನಸಿಕ ಒತ್ತಡ ಇರಬಹುದು. ಆದರೆ ಅದಕ್ಕೆಲ್ಲ ಹಿಂಜರಿಯುವ ವ್ಯಕ್ತಿ ನವಾಝ್ ಅಲ್ಲ ಎಂದು ಅವರು ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ತಮಿಳ್ನಾಡಿನಲ್ಲಿರುವ ನವಾಝ್‍ರನ್ನು ಕರೆತರುವ ಪ್ರಕ್ರಿಯೆ ಪೂರ್ಣ ಗೊಂಡಿದ್ದು ಇಂದು ಕೇರಳಕ್ಕೆ ಕರೆತರಲು ಸಾಧ್ಯವಾಗಬಹುದು ಎಂದು ತನಿಖಾ ದಳ ನಿರೀಕ್ಷೆ ವ್ಯಕ್ತಪಡಿಸಿದೆ. ನಾಪತ್ತೆ ಪ್ರಕರಣ ದಾಖಲಾಗಿರುವುದರಿಂದ ಅವರನ್ನು ಕೋರ್ಟಿಗೆ ಹಾಜರುಪಡಿಸಬೇಕಾಗಿದೆ. ಗುರುವಾರ ಬೆಳಗ್ಗೆ ನಾಲ್ಕು ಗಂಟೆಗೆ ಪೊಲೀಸ್ ಕ್ವಾರ್ಟ್ರಸ್ ನಿಂದ ಅವರು ನಾಪತ್ತೆಯಾಗಿದ್ದರು.