ಸನ್ಮಾರ್ಗ ವಾರ್ತೆ
ಪತ್ತನಂತಿಟ್ಟ: ಸಿಪಿಎಂ ಸ್ಥಳೀಯ ಸಮಿತಿಯ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ 25 ಕುಟುಂಬಗಳು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿವೆ. ಪತ್ತನಂತಿಟ್ಟದ ಪರಿಯಾರಂ ಸಿಪಿಎಂ ಸ್ಥಳೀಯ ಸಮಿತಿಯ ವಿರುದ್ಧ ಲಂಚ ಪಡೆದ ಆರೋಪ ಕೇಳಿಬಂದಿದೆ. ಇಲಂತೂರಿನ ವರಟ್ಟುಚಿರಾ ಎಂಬಲ್ಲಿ ಮನೆ ನಿರ್ಮಿಸಲು ಮಣ್ಣು ತೆಗೆಯಲು ಕಾರ್ಯಕರ್ತರು 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಲಾಗಿದೆ.
ಇಲಂತೂರು ಪರಿಯಾರಂ ಮತ್ತು ವರಟ್ಟುಚಿರಾ ಪ್ರದೇಶಗಳ 25 ಕುಟುಂಬಗಳು ಬಿಜೆಪಿಗೆ ಸೇರ್ಪಡೆಗೊಂಡವು. ಪಕ್ಷ ತೊರೆದ ಕುಟುಂಬಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ವಿ.ಎ. ಸೂರಜ್ ಬರಮಾಡಿಕೊಂಡರು ಮತ್ತು ಹೊಸ ಶಾಖೆಯನ್ನು ಸ್ಥಾಪಿಸಲಾಯಿತು. ಸಿಪಿಎಂ ಕಾರ್ಯಕರ್ತ ಬಾಬು ಅವರ ಕುಟುಂಬ ಸೇರಿದಂತೆ ಕೆಲವರು ಪಕ್ಷ ತೊರೆದಿದ್ದಾರೆ. ಇವರು ವರ್ಷಗಳಿಂದ ಸಿಪಿಎಂ ಜೊತೆ ಗುರುತಿಸಿಕೊಂಡಿದ್ದ ಕುಟುಂಬಗಳಾಗಿದ್ದವು. ಎದ್ದಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟನೆ ನೀಡುವುದಾಗಿ ಸಿಪಿಎಂ ಸ್ಥಳೀಯ ನಾಯಕತ್ವ ತಿಳಿಸಿದೆ.












