ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ: ಸುಪ್ರೀಂ ಕೋರ್ಟ್

0
1163

ಸನ್ಮಾರ್ಗ ವಾರ್ತೆ

ಸಿವಿಲ್ ಪ್ರಕರಣಗಳಲ್ಲಿ ಉತ್ತರ ಪ್ರದೇಶದ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳನ್ನು ಪರಿಶೀಲಿಸಿದ ನಂತರ ಸುಪ್ರೀಂ ಕೋರ್ಟ್ ಸೋಮವಾರ ಕಠಿಣ ಟಿಪ್ಪಣಿಗಳನ್ನು ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ಸಿವಿಲ್ ವಿವಾದದಲ್ಲಿ ಕ್ರಿಮಿನಲ್ ಕಾನೂನನ್ನು ಏಕೆ ಜಾರಿಗೆ ತರಲಾಯಿತು ಎಂಬುದರ ಕುರಿತು ಸ್ಪಷ್ಟ ಅಫಿಡವಿಟ್ ಸಲ್ಲಿಸಲು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಗೌತಮ್ ಬುದ್ಧ ನಗರದ ಜಿಲ್ಲಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿಗೆ ಸೂಚನೆ ನೀಡಿದೆ.

ಪೀಠದ ಅಭಿಪ್ರಾಯದಲ್ಲಿ, ಸಿವಿಲ್ ಪ್ರಕರಣವನ್ನು ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸುವುದು ಸೂಕ್ತವಲ್ಲ. ವಕೀಲರು, ಸಿವಿಲ್ ವಿವಾದಗಳು ಇತ್ಯರ್ಥವಾಗಲು ಹೆಚ್ಚಿನ ಕಾಲಾವಕಾಶ ಬೇಕಾಗಿರುವ ಕಾರಣ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳುತ್ತಿದ್ದಂತೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

“ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಈ ರೀತಿ ತಪ್ಪಾಗಿದೆ. ದಿನನಿತ್ಯದ ಸಿವಿಲ್ ಮೊಕದ್ದಮೆಗಳನ್ನು ಕ್ರಿಮಿನಲ್ ಪ್ರಕರಣಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಅಸಂಬದ್ಧ. ಕೇವಲ ಹಣ ನೀಡದಿರುವುದನ್ನು ಅಪರಾಧವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ” ಎಂಬುದು ಸಿಜೆಐ ಅವರ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

“ವಿಚಾರಣಾ ಅಧಿಕಾರಿಯನ್ನು ಕಟಕಟೆಗೆ ಬರಲು ನಾವು ನಿರ್ದೇಶಿಸುತ್ತೇವೆ. ತನಿಖಾಧಿಕಾರಿ ಕಟಕಟೆಯಲ್ಲಿ ನಿಂತು ಕ್ರಿಮಿನಲ್ ಪ್ರಕರಣವನ್ನು ರೂಪಿಸಲಿ — ನೀವು ಆರೋಪಪಟ್ಟಿಗಳನ್ನು ಸಲ್ಲಿಸುವ ರೀತಿ ಇದಲ್ಲ” ಎಂದು ಸಿಜೆಐ ಅಭಿಪ್ರಾಯಪಟ್ಟರು. “ವಿಚಾರಣಾ ಅಧಿಕಾರಿ ಪಾಠ ಕಲಿಯಲಿ” ಎಂಬ ಖಡಕ್ ಸೂಚನೆಯನ್ನು ಅವರು ನೀಡಿದರು.

“ಸಿವಿಲ್ ಪ್ರಕರಣಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಎಂಬ ಕಾರಣಕ್ಕಾಗಿ, ನೀವು ಎಫ್‌ಐಆರ್ ದಾಖಲಿಸಿ ಕ್ರಿಮಿನಲ್ ಕಾನೂನನ್ನು ಜಾರಿಗೆ ತರುತ್ತೀರಾ?” ಎಂಬ ಪ್ರಶ್ನೆಯನ್ನು ಪೀಠ ಮತ್ತೊಮ್ಮೆ ಸ್ಪಷ್ಟವಾಗಿ ಎತ್ತಿಹಿಡಿದಿತು.

ನೋಯ್ಡಾದ ಸೆಕ್ಟರ್ 39 ರಲ್ಲಿರುವ ಪೊಲೀಸ್ ಠಾಣೆಯ ತನಿಖಾ ಅಧಿಕಾರಿಗೆ, ವಿಚಾರಣಾ ನ್ಯಾಯಾಲಯದ ಕಟಕಟೆಯಲ್ಲಿ ಹಾಜರಾಗಿ, ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಬಗ್ಗೆ ಸಮರ್ಥನೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಅಲಹಾಬಾದ್ ಹೈಕೋರ್ಟ್ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ವಕೀಲ ಚಂದ್ ಖುರೇಷಿ ಮೂಲಕ ಆರೋಪಿಗಳಾದ ದೇಬು ಸಿಂಗ್ ಮತ್ತು ದೀಪಕ್ ಸಿಂಗ್ ಸಲ್ಲಿಸಿದ್ದ ಅರ್ಜಿ ಈ ವಿಚಾರಣೆಯ ಕೇಂದ್ರವಾಗಿದೆ.

ಈ ನಡುವೆ ಸುಪ್ರೀಂ ಕೋರ್ಟ್, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿದೆ. ಆದರೆ ಅವರ ವಿರುದ್ಧದ ಚೆಕ್ ಬೌನ್ಸ್ ಪ್ರಕರಣ ಮುಂದುವರಿಯಲಿದೆ. ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ದ್ರೋಹ), 506 (ಬೆದರಿಕೆ), ಮತ್ತು 120 ಬಿ (ಪಿತೂರಿ) ಅಡಿಯಲ್ಲಿ ಈ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.