ಈಜಿಪ್ಟ್: ವಿಷಪ್ರಾಶನದಿಂದ ಮುರ್ಸಿಯವರ ಪುತ್ರನ ಕೊಲೆ- ವಕೀಲರ ಆರೋಪ

0
927

ಸನ್ಮಾರ್ಗ ವಾರ್ತೆ

ಕೈರೊ,ಸೆ.9: ಈಜಿಪ್ಟಿನ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರ ಕಿರಿಯ ಪುತ್ರ ಅಬ್ದುಲ್ಲಾ ಮುರ್ಸಿಯವರ ಸಾವು ಕೊಲೆ ಪಾತಕವಾಗಿದೆ ಎಂದು ಮುರ್ಸಿಯ ಕುಟುಂಬದ ವಕೀಲರು ಆರೋಪಿಸಿದ್ದಾರೆ. 2019 ಸೆಪ್ಟಂಬರ್ 4ರಂದು ಮುರ್ಸಿಯ ಪುತ್ರ ಹೃದಯಾಘಾತದಿಂದ ಈಜಿಪ್ಟ್‌ನ ಕೈರೊದ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ವರದಿಯಾಗಿತ್ತು. 25 ವರ್ಷದ ಅಬ್ದುಲ್ಲಾರ ಸಾವಿಗೆ ಹೃದಯಾಘಾತ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದರು.

ಆದರೆ, ಅವರನ್ನು ಕೊಲೆ ಮಾಡಲಾಗಿದೆ. ಮಾರಕವಾದ ವಿಷ ವಸ್ತು ದೇಹದೊಳಕ್ಕೆ ಸೇರಿಕೊಂಡ ಕಾರಣ ಮನೆಯ ಹೊರಗೆ ಅವರು ಕೊಲೆಯಾದರು ಎಂದು ಮುರ್ಸಿಯವರ ಕಾನೂನು ಸಲಹಾ ಸಂಸ್ಥೆ ಗುರ್ನಿಕ್37 ಕಳೆದ ದಿವಸ ಹೇಳಿದೆ.

ಅಬ್ದುಲ್ಲರಿಗೆ ಹೃದಯಾಘಾತವಾದ ಬಳಿಕ 20 ಕಿಲೋ ಮೀಟರ್ ದೂರದ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿತ್ತು. ಹತ್ತಿರದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿರಲಿಲ್ಲ. ಮಾರಕ ವಿಷವನ್ನು ಚುಚ್ಚಿದ್ದರಿಂದ ಅವರು ಮೃತಪಟ್ಟಿದ್ದರು. ಅವರು ಮೃತ ಪಟ್ಟ ಬಳಿಕ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಲಂಡನ್ ಕೇಂದ್ರವಾಗಿರುವ ವಕೀಲರ ತಂಡ ಹೇಳಿದೆ. ಈಗ ಬಹಿರಂಗಗೊಂಡಿರುವ ಸತ್ಯಸ್ಥಿತಿಯು ಈಜಿಪ್ಟ್ ಸರಕಾರದಲ್ಲಿರುವ ಕೆಲವರಿಗೆ ತಿಳಿದಿತ್ತು ಎಂದು ಗುರ್ನಿಕ್ 37 ಹೇಳಿದೆ.

ಅಬ್ದುಲ್ಲ ಕಾರು ಚಲಾಯಿಸಿಕೊಂಡು ಹೋಗುವಾಗ ಹಠಾತ್ ಹೃದಯಾಘಾತ ಉಂಟಾಗಿತ್ತು ಮತ್ತು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿದ್ದವು. ಅವರ ಸಾವು ಅಸಹಜವಾದುದಲ್ಲ.

ಅವರಿಗೆ ಹಲವು ರೋಗಗಳಿದ್ದವು. ತಂದೆಯ ಸಾವಿನಿಂದ ಅವರು ಖಿನ್ನತೆಯೊಳಗಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾಯಿತರಾದ ಮೊದಲ ಅಧ್ಯಕ್ಷ ಮುಹಮ್ಮದ್ ಮುರ್ಸಿ 2019 ಜೂನ್ 17ರಂದು ವಿಚಾರಣೆಯ ವೇಳೆ ಕೋರ್ಟಿನಲ್ಲಿ ಮೃತಪಟ್ಟಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.