ಮನಸ್ಸು ಮಾಡಿದರೆ ಹೆಜ್ಜೆಗೊಂದು ಹಯಾತ್ ಖಾನ್ ಮನೆ ಸೃಷ್ಟಿಯಾದೀತು

0
3325

 

ಇತ್ತೀಚೆಗೆ ಗೆಳೆಯ ಬಶೀರ್ ಅಹ್ಮದ್‍ರು ಒಂದು ಮಾಹಿತಿಯನ್ನು ಹಂಚಿಕೊಂಡಿದ್ದರು. ಒಂದೇ ಕುಟುಂಬದ ಮೂರು ಮಂದಿ IPS ಅಧಿಕಾರಿಗಳಾಗಿರುವ ಕತೆ. ಆ ಮೂವರ ಪೋಟೋವನ್ನು ಅವರು ಹಂಚಿಕೊಂಡಿದ್ದರು. ಓರ್ವ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಿಜವಾಗಿ,

ಮುಸ್ಲಿಮ್ ಸಮುದಾಯದ ಒಳಗಡೆ ಗಂಭೀರ ಚರ್ಚೆಗೆ ಒಳಗಾಗಬೇಕಾದ ಸಂಗತಿ ಇದು. ಒಂದೇ ಕುಟುಂಬದ 3 ಮಂದಿ ಹೇಗೆ IPS ಅಧಿಕಾರಿಗಳಾದರು? ಅದರ ಹಿಂದೆ ಆ ಮಕ್ಕಳ ಹೆತ್ತವರ ಪರಿಶ್ರಮ ಏನು? ಆ ಮಕ್ಕಳಲ್ಲಿ IPS ಕನಸನ್ನು ಹೇಗೆ ಮತ್ತು ಏಕೆ ಬಿತ್ತಿದರು? ಸ್ಪರ್ಧಾತ್ಮಕ ಪರೀಕ್ಷೆಗೆ ತಮ್ಮ ಮಕ್ಕಳನ್ನು ಹೇಗೆ ಅಣಿಗೊಳಿಸಿದರು? ಅದಕ್ಕಾಗಿ ಅವರು ಏನೇನು ಮಾಡಿದರು? ಆ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅಭಿರುಚಿ ಮೂಡಿಸಿದ್ದು ಹೇಗೆ? ಎಷ್ಟು ಹಗಲು ಮತ್ತು ರಾತ್ರಿಯನ್ನು ಆ ಹೆತ್ತವರು ಈ ಮಕ್ಕಳಿಗಾಗಿ ಕಳೆದರು…

ಇವು ತಕ್ಷಣ ಹೊಳೆದ ಪ್ರಶ್ನೆಗಳು ಮಾತ್ರ. ಎಳೆ ಪ್ರಾಯದಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ IPS ಅಧಿಕಾರಿಗಳಾಗಿಸುವ ವರೆಗಿನ ಈ ದೀರ್ಘ ಪ್ರಯಾಣದ ಬಗ್ಗೆ ಆ ಹೆತ್ತವರಲ್ಲಿ ಅನೇಕ ಸಂಗತಿಗಳಿರಬಹುದು. ಅವು ಈ ಸಮುದಾಯದ ಪಾಲಿಗೆ ಲಭ್ಯವಾಗಬೇಕಾದರೆ, ಮೊದಲು ಆ ಬಗ್ಗೆ ಸಮುದಾಯದಲ್ಲಿ ಕುತೂಹಲ ಹುಟ್ಟಿಕೊಳ್ಳಬೇಕು. ಆ ಸಾಧನೆಯೆಡೆಗೆ ಬೆರಗಿ ನಿಂದ ನೋಡಬೇಕು. ಈ ಸಮುದಾಯದ ವಾಟ್ಸಾಪ್ ಚರ್ಚೆಗಳಲ್ಲಿ ಆ ಮೂವರ ಬಗ್ಗೆ ಚರ್ಚೆಗಳಾಗಬೇಕು. ಅವರ ಪರಿಶ್ರಮ ಮತ್ತು ಯಶಸ್ಸು ಪ್ರತಿ ಮನೆಯ ಮಾತು- ಕತೆಯಾಗಬೇಕು. ಆ ಮಾತು-ಕತೆಯನ್ನು ಪ್ರತಿ ಮನೆಯ ಮಕ್ಕಳು ಆಲಿಸಬೇಕು. ಅವರೊಳಗಡೆ IPS, IAS, IRSನಂಥ ಕನಸುಗಳು ಗರಿಗೆದರಬೇಕು. ಮಕ್ಕಳು ಫುಟ್ಬಾಲ್ ಆಡುತ್ತಲೋ ಬ್ಯಾಟು ಬೀಸುತ್ತಲೋ IPS ಕನಸು ಕಾಣಬೇಕು. ಹಾಗಂತ,

ಬಶೀರ್ ಅಹ್ಮದ್‍ರು ಹಂಚಿಕೊಂಡ ಸಂಗತಿ ಮೊತ್ತಮೊದಲ ಪ್ರಕರಣವೂ ಅಲ್ಲ ಮತ್ತು ಸಾಧನೆಯ ಛಲ ಇದ್ದರೆ ಇದು ಅಸಾಧ್ಯವೂ ಅಲ್ಲ.

2017 ನವೆಂಬರ್‍ನಲ್ಲಿ ಆಓಂ ಪತ್ರಿಕೆಯ ಒಂದು ವರದಿಯನ್ನು ಪ್ರಕಟಿಸಿತ್ತು. ‘Jaipur: This ಕಾಯಂಖನಿ family is all IAS, IPS ಅಂಡ್ RAS’ (ಈ ಕಾಯಮ್‍ಖಾನಿ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್ ಮತ್ತು ಆರ್‍ಎಎಸ್) ಎಂಬುದು ಆ ವರದಿಯ ಶೀರ್ಷಿಕೆ.

ಜೈಪುರದ ಹಯಾತ್ ಮುಹಮ್ಮದ್ ಖಾನ್ ಅವರ ಮಕ್ಕಳ ಕತೆಯಿದು. ಇದು ಸುದ್ದಿಯಾಗುವುದಕ್ಕೆ ಕಾರಣ ಏನೆಂದರೆ, ಹಯಾತ್ ಮುಹಮ್ಮದ್‍ರ ಮಗ ಝಾಕಿರ್ ಹುಸೇನ್‍ರು ಐಎಎಸ್ ಅಧಿಕಾರಿಯಾಗಿ ಭಡ್ತಿ ಹೊಂದಿದುದು. ಇವರ ದೊಡ್ಡಣ್ಣ ಅಶ್ಫಾಕ್ ಹುಸೇನ್‍ರು ಅದಾಗಲೇ ಐಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ಅಶ್ಫಾಕ್ ಹುಸೇನ್‍ರ ಮಗಳು ಅಥವಾ ಹಝಾತ್ ಮುಹಮ್ಮದ್‍ರ ಮೊಮ್ಮಗಳಾದ ಫರ್ಹಾ ಖಾನ್ ಅವರು ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಣಿಯಾಗಿದ್ದಾರೆ. ಹಾಗೆಯೇ ಹಯಾತ್ ಮುಹಮ್ಮದ್‍ರ ಮಗ ಲಿಯಾಕತ್ ಅಲಿ ಖಾನ್‍ರು ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಆಗಿದ್ದು, ಅವರ ಮಗಳು ಶಾಹೀನ್ ಅಲಿ ಖಾನ್ ಕೂಡ ಭಾರತೀಯ ಕಂದಾಯ ಸೇವಾ ಇಲಾಖೆ (RAS)ಯಲ್ಲಿ ಅಧಿಕಾರಿಯಾಗಿದ್ದಾರೆ. ಹಯಾತ್ ಮುಹಮ್ಮದ್‍ರ ಮಗಳ ಮಗ ಸಲೀಮ್ ಕೂಡ ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಯಾಗಿದ್ದಾರೆ. ಹಯಾತ್ ಖಾನ್‍ರ ಕಿರಿಯ ಸಹೋದರ ಅಬ್ದುಲ್ ಸಮದ್‍ರ ಮಗ ಝಾಕಿರ್ ಅಹ್ಮದ್ ಖಾನ್ ಸೇನೆಯಲ್ಲಿ ಕರ್ನಲ್ ಆಗಿರುವುದು ಮಾತ್ರ ಅಲ್ಲ, ಅವರ ಇನ್ನಿಬ್ಬರು ಮಕ್ಕಳಾದ ಶಾಕಿಬ್ ಹಾಗೂ ಇಶ್ರತ್ ಕೂಡ ಸೇ ನೆಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದಾರೆ. ಇದೇ ವೇಳೆ, ಹಯಾತ್ ಮುಹಮ್ಮದ್ ಖಾನ್‍ರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರ ಒಟ್ಟು ಐವರು ಮಕ್ಕಳಲ್ಲಿ ಮೂವರು ಐಎಎಸ್ ಮತ್ತು ಒಬ್ಬರು ಐಪಿಎಸ್.

ಇನ್ನೊಂದು ಇಂಥದ್ದೇ ಸಾಧಕ ಕುಟುಂಬವಿದೆ.

ಇದು 2019ರ ಸುದ್ದಿ. Four Siblings from UP crack civil services examination within 3 years (ನಾಲ್ವರು ಸಹೋದರ-ಸಹೋದರಿಯರು 3 ವರ್ಷಗಳ ಅಂತರದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು)- ಎಂಬ ಶೀರ್ಷಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿತ್ತು. ಉತ್ತರ ಪ್ರದೇಶದ ಪ್ರತಾಪ್‍ಗಢ್‍ನ ಅನಿಲ್ ಮಿಶ್ರಾ ಅವರ ಕುಟುಂಬ ಈ ಸಾಧನೆಯನ್ನು ಮೆರೆದಿತ್ತು. ಅನಿಲ್ ಮಿಶ್ರಾ ಬ್ಯಾಂಕ್ ಮ್ಯಾನೇಜರ್. ಅವರ ನಾಲ್ವರು ಮಕ್ಕಳಲ್ಲಿ ಕ್ಷಮಾ ದೊಡ್ಡವಳು. ವಿಶೇಷ ಏನೆಂದರೆ, UPSC ಪರೀಕ್ಷೆಯನ್ನು ಎಲ್ಲರಿಗಿಂತ ಕೊನೆಯಲ್ಲಿ ಮುಗಿಸಿದವರು ಕ್ಷಮಾ. ಅದೂ ಮದುವೆಯಾಗಿ 8 ವರ್ಷಗಳ ಬಳಿಕ- 2015ರಲ್ಲಿ. ಸತತ ನಾಲ್ಕು ಪ್ರಯತ್ನಗಳ ಬಳಿಕ ಕ್ಷಮಾರಿಗೆ ಈ ಯಶಸ್ಸು ಪ್ರಾಪ್ತವಾಗಿತ್ತು. ಇದಕ್ಕಿಂತ ಮೊದಲು 2013ರಲ್ಲೇ ಯೋಗೇಶ್ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. 2014ರಲ್ಲಿ ಮಾಧವಿ UPSC ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ನೊಂದಿಗೆ ತೇರ್ಗಡೆಯಾದರು. ಅದೇ ವರ್ಷ ಲೋಕೇಶ್ ಕೂಡ ತೇರ್ಗಡೆಯಾದರು. ಮೂರು ವರ್ಷಗಳ ಅಂತರದಲ್ಲಿ ಈ ನಾಲ್ವರೂ ಉನ್ನತ ಅಧಿಕಾರಿಗಳಾಗುವ ಹಂತಕ್ಕೆ ತಲುಪಿದರು. ಅಂದಹಾಗೆ,

ಇಂಥ ಸಾಧಕ ಕುಟುಂಬಗಳ ಪಟ್ಟಿ ಇನ್ನೂ ಇರಬಹುದು. ಸದ್ಯ ಮುಸ್ಲಿಮ್ ಸಮುದಾಯ ತನ್ನೊಳಗನ್ನು ಮುಟ್ಟಿ ನೋಡುವುದಕ್ಕೆ ಮತ್ತು ಗಂಭೀರ ಅವಲೋಕನದ ಕಡೆಗೆ ಸಜ್ಜಾಗುವುದಕ್ಕೆ ಈ ಮೂರು ಉದಾಹರಣೆಗಳು ಧಾರಾಳ ಸಾಕು. ಕೇವಲ ಈ ಮೂರೇ ಮೂರು ಕುಟುಂಬಗಳಲ್ಲಿ ಸುಮಾರು 15ರಷ್ಟು ಉನ್ನತ ದರ್ಜೆಯ ಅಧಿಕಾರಿಗಳು ತಯಾರಾದುದು ಹೇಗೆ? ಪ್ರತಿಭೆಗಳೆಲ್ಲ ಒಂದೇ ಕಡೆ ರಾಶಿ ಬಿದ್ದದ್ದು ಹೇಗೆ? ಇದು ಅವರವರ ಅದೃಷ್ಟ ಎಂದು ತಳ್ಳಿ ಹಾಕಬಹುದಾದ ಸಂಗತಿಯೇ ಅಥವಾ ಇವರನ್ನು ಎದುರಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಪ್ರತಿ ಮನೆಗಳೂ ಇಂಥ ಅಧಿಕಾರಿಗಳನ್ನು ರೂಪಿಸುವುದಕ್ಕೆ ಪಣ ತೊಡಬೇಕಾದ ಸಂದರ್ಭವೇ?

ಪ್ರತಿ ಮಕ್ಕಳಲ್ಲೂ ಪ್ರತಿಭೆ ಇದ್ದೇ ಇದೆ. ಆ ಪ್ರತಿಭೆಗೆ ನಮ್ಮಿಂದ ಎಷ್ಟು ಪೋಷಣೆ ಸಿಗುತ್ತದೆ ಎಂಬುದರ ಆಧಾರದಲ್ಲಿ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಮಿಶ್ರಾ ಕುಟುಂಬದ ಯೋಗೇಶ್ UPSC ಪರೀಕ್ಷೆಯಲ್ಲಿ ತೇರ್ಗಡೆ ಆಗದೇ ಇರುತ್ತಿದ್ದರೆ ಉಳಿದ ಮೂವರು UPSC ಪರೀಕ್ಷೆಗೆ ಶ್ರಮ ವಹಿಸುತ್ತಿದ್ದರೋ ಅನ್ನುವ ಪ್ರಶ್ನೆ ಪ್ರಸ್ತುತ. ಯೋಗೇಶ್‍ನ ಮೇಲೆ ಮಿಶ್ರಾ ದಂಪತಿ ಹಾಕಿರು ವಷ್ಟು ಶ್ರಮವನ್ನು ಉಳಿದ ಮೂವರು ಮಕ್ಕಳ ಮೇಲೆ ಹಾಕಿರುವ ಸಾಧ್ಯತೆ ಇಲ್ಲ. ಲೋಕೇಶ್‍ರನ್ನು UPSC ಪರೀಕ್ಷೆಗೆ ಸಜ್ಜುಗೊಳಿಸುವುದಕ್ಕೆ ಆ ಹೆತ್ತವರು ಪಟ್ಟಿರುವ ಶ್ರಮವು ಉಳಿದ ಮೂವರು ಮಕ್ಕಳ ಮೇಲೆ ವ್ಯಯಿಸಿರುವ ಶ್ರಮಕ್ಕಿಂತ ಹಲವು ಪಟ್ಟು ಅಧಿಕ ಇರಬಹುದು. ಯಾಕೆಂದರೆ,

UPSC ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವ ವರೆಗೆ ಅದೊಂದು ಕನ್ನಡಿಯ ಗಂಟು. ಆವರೆಗೆ ಆ ಗಂಟನ್ನು ಅವರ ಮಕ್ಕಳಲ್ಲಿ ಯಾರೂ ತನ್ನದಾಗಿಸಿಕೊಂಡಿಲ್ಲ. ಆದ್ದರಿಂದ ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವುದು ಎಲ್ಲಕ್ಕಿಂತ ಮುಖ್ಯ. ಲೋಕೇಶ್‍ಗೂ ಹೇಳಿಕೊಳ್ಳುವುದಕ್ಕೆ ಅವರ ಕುಟುಂಬದಲ್ಲಿ ಬೇರೆ ಮಾದರಿಗಳಿರಲಿಲ್ಲ. ಆದರೆ ಯಾವಾಗ ಲೋಕೇಶ್ ಯಶಸ್ವಿಯಾದರೋ ಉಳಿದ ಮೂವರೂ ಅರ್ಧ ಯಶಸ್ಸನ್ನು ಅದಾಗಲೇ ಪಡೆದು ಕೊಂಡರು. ಇದು ಸಾಧ್ಯ ಎಂಬ ವಿಶ್ವಾಸ ಅವರಲ್ಲಿ ತನ್ನಿಂತಾನೇ ಬೆಳೆಯಿತು. ಪರೀಕ್ಷೆಯನ್ನು ಎದುರಿಸುವ ಪಟ್ಟುಗಳನ್ನು ಹೇಳಿಕೊಡುವುದಕ್ಕೆ ಲೋಕೇಶ್ ಇದ್ದಾನೆ ಎಂಬ ಧೈರ್ಯ ಅವರಿಗೆ ಪರೀಕ್ಷೆಯ ಅರ್ಧಭಾಗವನ್ನು ಗೆಲ್ಲಿಸಿ ಕೊಟ್ಟಿತು. ಇನ್ನರ್ಧಕ್ಕಷ್ಟೇ ಹೆತ್ತವರು ಶ್ರಮ ಹಾಕಿದರೆ ಸಾಕಾಗಿತ್ತು. ಇದು ಯಶಸ್ಸಿನ ಗುಟ್ಟು ಕೂಡ.

ಹಯಾತ್ ಮುಹಮ್ಮದ್ ಖಾನ್‍ರ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್, ಆರ್ ಏಎಸ್ ಇತ್ಯಾದಿ ಉನ್ನತ ಅಧಿಕಾರಿಗಳಾಗಿರುವುದರ ಹಿಂದೆ ಇರುವುದೂ ಇದೇ ಗುಟ್ಟು. ಇವರ ಐವರು ಮಕ್ಕಳಲ್ಲಿ ಹಿರಿಯವ ಯಾವಾಗ ಐಪಿಎಸ್ ಅಧಿಕಾರಿಯಾದರೋ ಅದು ಉಳಿದ ನಾಲ್ವರು ಮಕ್ಕಳ ಮೇಲೆ ಸಕಾರಾತ್ಮಕ ಪರಿ ಣಾಮ ಮತ್ತು ಪ್ರಭಾವವನ್ನು ಬೀರಿತು. ನಮ್ಮೆದುರು ಅಣ್ಣ ಇದ್ದಾನೆ ಎಂಬುದು ತಮ್ಮಂದಿರ ಪಾಲಿನ ದೊಡ್ಡ ಆಮ್ಲಜನಕ. ಅವರನ್ನು ಮಾನಸಿಕವಾಗಿ ಆ ಅಣ್ಣ ಆವರಿಸುತ್ತಾನೆ. ಅವರಿಗರಿವಿಲ್ಲದೆಯೇ ಅವರನ್ನು ಆತ ಮುಂದಕ್ಕೊಯ್ಯುತ್ತಾನೆ.

ಸದ್ಯ ಮುಸ್ಲಿಮ್ ಸಮುದಾಯದಲ್ಲಿ ಇಂಥದ್ದೊಂದು ಬದಲಾವಣೆ ಬರಬೇಕಾಗಿದೆ. ಪ್ರತಿ ಮನೆಯ ಹೆತ್ತವರಲ್ಲೂ ಇಂಥದ್ದೊಂದು ಕನಸನ್ನು ಬಿತ್ತಬೇಕಾಗಿದೆ. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಅವರು ಕಾಣುವಂತೆ ಮಾಡಬೇಕಾಗಿದೆ. ಅದಕ್ಕಾಗಿ ಪ್ರೇರಣೆ ನೀಡಬೇಕಾಗಿದೆ. ನಿಜವಾಗಿ,

ಇದು ಮುಸ್ಲಿಮ್ ಸಮುದಾಯದ ಪಾಲಿಗೆ ತೀರಾ ತೀರಾ ಕಠಿಣ ಅಲ್ಲ. ಸಮುದಾಯದಲ್ಲಿ ಮಸೀದಿ ಮತ್ತು ಮದ್ರಸ ಎಂಬ ವಿಶೇಷ ಸೊತ್ತು ಇದೆ. ಇತರ ಯಾವ ಸಮುದಾಯದಲ್ಲೂ ಇಲ್ಲದ ಮತ್ತು ಬಹೂಪಯೋಗಿ ಸೌಲಭ್ಯ ಇದು. ಮಸೀದಿಯನ್ನು ಬರೇ ನಮಾಝïಗಾಗಿ ಮತ್ತು ಮದ್ರಸವನ್ನು ಬರೇ ಇಸ್ಲಾಮಿನ ಮೂಲಭೂತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಮಾತ್ರ ಮೀಸ ಲಿಡದೇ ಸಮುದಾಯದ ಸಬಲೀಕರಣಕ್ಕಾಗಿಯೂ ಬಳಸಿಕೊಂಡರೆ ಈ ಸಾಧನೆ ಅಸಾಧ್ಯವಲ್ಲ. ಅಂದಹಾಗೆ,

ಪ್ರತಿ ಮಸೀದಿಗೂ ಒಂದು ಆಡಳಿತ ಸಮಿತಿಯಿದೆ ಮತ್ತು ಪ್ರತಿ ಮಸೀದಿ ವ್ಯಾಪ್ತಿಯಲ್ಲೂ ಒಂದಕ್ಕಿಂತ ಹೆಚ್ಚು ಸಂಘಟನೆಗಳಿವೆ. ನಮ್ಮ ಗುರಿ ತಲುಪುವ ದೃಷ್ಟಿಯಿಂದ ಇದು ಬಹಳ ಅನು ಕೂಲಕರ ವ್ಯವಸ್ಥೆ. ಸದ್ಯ ಈ ಮಸೀದಿ ಆಡಳಿತ ಸಮಿತಿ ಮತ್ತು ಈ ಸಂಘಟನೆಗಳ ನಡುವೆ ಸಂವಹನ ಸಾಧ್ಯವಾಗಬೇಕು. ಒಂದೇ ಕಡೆ ಎಲ್ಲರೂ ಕುಳಿತು ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ನ್ನೂ ಸಬಲೀಕರಣಗೊಳಿಸುವುದಕ್ಕೆ ಪೂರಕವಾದ ಕಾರ್ಯತಂತ್ರವನ್ನು ರೂಪಿಸಬೇಕು. ಸಂಘಟನಾತ್ಮಕ ಭಿನ್ನಾಭಿಪ್ರಾಯಗಳೋ ಆಡಳಿತ ಸಮಿತಿಯೊಂದಿಗಿನ ವೈಮನಸ್ಯವೋ ಇದಕ್ಕೆ ಅಡ್ಡಿ ಬರಬಾರದು. ಮುಂದಿನ ಇಷ್ಟು ವರ್ಷಗಳಲ್ಲಿ ಈ ಮಸೀದಿ ವ್ಯಾಪ್ತಿಯ ಒಟ್ಟು ಮನೆಗಳಿಂದ ಇಷ್ಟು ಐಎಎಸ್, ಐಪಿಎಸ್ ಮತ್ತಿತರ ಉನ್ನತ ಅಧಿಕಾರಿಗಳು ತಯಾರಾಗಬೇಕು ಎಂಬ ಗುರಿಯ ನ್ನು ಇಟ್ಟುಕೊಳ್ಳ ಬೇಕು. ಬಳಿಕ ಆ ಗುರಿಯನ್ನು ತಲುಪುವುದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕು. ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ಸಂಪೂರ್ಣ ವಿವರವೂ ಮಸೀದಿಯ ಕಂ ಪ್ಯೂಟರ್‍ನಲ್ಲಿ ದಾಖಲುಗೊಂಡಿರಬೇಕು. ಯಾವ್ಯಾವ ಮನೆಯಲ್ಲಿ ಎಷ್ಟೆಷ್ಟು ಮಂದಿಯಿದ್ದಾರೆ ಎಂಬುದರಿಂದ ಹಿಡಿದು ಆ ಮನೆಯಲ್ಲಿ ಕಲಿಯುವ ಮಕ್ಕಳೆಷ್ಟು, ವಿಧವೆ, ವಿವಾಹ ಪ್ರಾಯಕ್ಕೆ ಬಂದ ಹೆಣ್ಣು-ಗಂಡು, ವೃದ್ಧರು, ರೋಗಿಗಳು, ಮನೆಯ ವರಮಾನ, ದುಡಿಯುವವರು, ಉದ್ಯೋಗ ಅರಸುವವರು, ಕಲಿಕೆ ನಿಲ್ಲಿಸಿದವರು ಇತ್ಯಾದಿ ಎಲ್ಲವೂ ಮಸೀದಿ ಕಂಪ್ಯೂಟರ್‍ನಲ್ಲಿ ಸುರಕ್ಷಿತವಾಗಿ ಇರಬೇಕು. ಈ ಎಲ್ಲ ಡಾಟಾಗಳನ್ನು ಹರಡಿಕೊಂಡು ಮಸೀದಿ ಆಡಳಿತ ಸಮಿತಿ ಮತ್ತು ಸಂಘಟನೆಗಳು ಪಕ್ಕಾ ಯೋಜನೆಗಳನ್ನು ರೂಪಿಸಬೇಕು. ಮುಖ್ಯವಾಗಿ,

ಮದ್ರಸಕ್ಕೆ ಬರುವ ಮಕ್ಕಳಿಗೆ ಪ್ರತಿದಿನ ಸಾಧಕರ ಕುರಿತು ವಿವರಿಸುವ 15 ನಿಮಿಷದ ಸ್ಫೂರ್ತಿ ತರಗತಿ ಇರಬೇಕು. ಪ್ರತಿದಿನ ಮದ್ರಸದಿಂದ ಉನ್ನತ ಅಧಿಕಾರಿಯಾಗುವ ಕನಸಿನೊಂದಿಗೆ ಮಕ್ಕಳು ಮನೆಗೆ ಹೊರಡಬೇಕು. ಮನೆಯಲ್ಲೂ ಹೆತ್ತವರ ಮಾತು-ಕತೆಯಲ್ಲಿ ಸಾಧಕರ ಬಗ್ಗೆ ಉಲ್ಲೇಖಗಳಾಗುತ್ತಿರಬೇಕು. ಪ್ರತಿ ಮನೆಯ ಮಕ್ಕಳೂ ಆಕಾಶ, ನಕ್ಷತ್ರ, ಸೂರ್ಯ, ಚಂದ್ರ, ವಿಮಾನ, ರಾಕೆಟ್, ಕಂಪ್ಯೂಟರ್, ವಾಹನಗಳು, ಮಿನಾರಗಳು ಹೀಗೆ ಪ್ರತಿಯೊಂದನ್ನೂ ಬೆರಗಿನಿಂದ ನೋಡುತ್ತಾ ಬೆಳೆಯುವಂತಾಗಬೇಕು. ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‍ ಗಳು, ಉನ್ನತ ಶಿಕ್ಷಣ ಪಡೆದ ವಿದ್ವಾಂಸರು, ಜರ್ನಲಿಸ್ಟ್ ಗಳು, ಅರ್ಥತಜ್ಞರ ಬಗ್ಗೆ ಓದುತ್ತಾ, ಆಲಿಸುತ್ತಾ ಬೆಳೆಯಬೇಕು. ಇದೊಂದು ದೀರ್ಘ ಪ್ರಯಾಣ. ದೂರದೃಷ್ಟಿಯ ಯೋಜನೆಗಳ ಹೊರತು ಈ ಪ್ರಯಾಣದ ಕೊನೆಯನ್ನು ತಲುಪಲಾಗದು. ಇಲ್ಲಿ ಮಕ್ಕಳ ತರಬೇತಿ ಮಾತ್ರ ಆಗಬೇಕಾದುದಲ್ಲ. ಹೆತ್ತವರ ತರಬೇತಿಯೂ ಆಗಬೇಕು. ಹೆತ್ತವರನ್ನು ಮಸೀದಿಗೋ ಮದ್ರಸಕ್ಕೋ ಆಹ್ವಾನಿಸಿ ಸ್ಫೂರ್ತಿದಾಯಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಅವರಲ್ಲಿ ಹೊಸ ಸ್ಫೂರ್ತಿ, ಭರವಸೆಯನ್ನು ತುಂಬಬೇಕು. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಕಾಣುವಂತೆ ಅವರನ್ನು ಪ್ರೇರೇಪಿಸಬೇಕು. ಅವರಲ್ಲಿ ಕನಸನ್ನು ತುಂಬಬೇಕು. ಎಷ್ಟೆಂದರೆ, ಹಗಲೂ-ರಾತ್ರಿ ಅವರು ಈ ಕನಸಿನೊಂದಿಗೆ ಬದುಕಬೇಕು ಮತ್ತು ಅವರು ಈ ಕನಸನ್ನು ನನಸು ಮಾಡುವುದಕ್ಕಾಗಿಯೇ ಬದುಕಬೇಕು. ಒಂದುವೇಳೆ,

ಪ್ರತೀ ಹೆತ್ತವರು, ಉಸ್ತಾದರು, ಸಂಘಟನೆಗಳು ಮತ್ತು ಮಸೀದಿ ಆಡಳಿತ ಸಮಿತಿಯವರು ಜೊತೆಯಾದರೆ ಮತ್ತು ಈ ಮೇಲಿನ ಗುರಿಯನ್ನು ತಲುಪುವ ಉದ್ದೇಶಕ್ಕಾಗಿ ಒಂದಾದರೆ, ಹಯಾತ್ ಮುಹಮ್ಮದ್ ಖಾನ್‍ರ ಮನೆ ಹೆಜ್ಜೆಗೊಂದರಂತೆ ಸೃಷ್ಟಿಯಾದೀತು.