ಸನ್ಮಾರ್ಗ ವಾರ್ತೆ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ನಾಲ್ಕನೆ ಬ್ಲಾಕ್ನ ಅಂಗಡಿಯ ವ್ಯಾಪಾರಿ ಜಲೀಲ್ ಹತ್ಯಾ ಘಟನೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ಬಲವಾಗಿ ಖಂಡಿಸಿದ್ದಾರೆ.
ಬೈಕ್ನಲ್ಲಿ ಬಂದು ಇಬ್ಬರು ದುಷ್ಕರ್ಮಿಗಳು ತನ್ನಷ್ಟಕ್ಕೆ ದುಡಿದು ಜೀವನ ನಡೆಸುತ್ತಿದ್ದ ಅಮಾಯಕ ವ್ಯಕ್ತಿ ಜಲೀಲ್ರಿಗೆ ಚೂರಿ ಇರಿದು ಪರಾರಿಯಾಗಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಕರಾವಳಿ ಭಾಗದ ಶಾಂತಿ ಪ್ರಿಯರನ್ನು ಕಾಡುತ್ತಿದೆ. ಕೆಲವು ತಿಂಗಳುಗಳ ಹಿಂದೆ ಇದೇ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪಾಝಿಲ್ ಹತ್ಯೆ ನಡೆಯಿತು, ಅದಕ್ಕೆ ಮುಂಚೆ ಮಸೂದ್, ಪ್ರವೀಣ್ ನೆಟ್ಟಾರು ಹತ್ಯೆ ನಡೆಯಿತು. ಜಿಲ್ಲೆಯ ಪೊಲೀಸ್ ವ್ಯವಸ್ಥೆ ಜಾಗೃತ ಸ್ಥಿತಿಯಲ್ಲಿಲ್ಲ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಗೊಳಿಸುವಂತೆ ಈಗ ಅಮಾಯಕ ಜಲೀಲ್ರ ಹತ್ಯೆ ನಡೆದಿದೆ. ಕೂಡಲೇ ಮಂಗಳೂರು ಪೊಲೀಸ್ ಕಮಿಷನರ್ ಈ ಸ್ಥಿತಿಗೆ ಬದಲಾವಣೆ ತರಬೇಕು. ತ್ವರಿತವಾಗಿ ಜಲೀಲ್ ಹಂತಕರನ್ನು ಬಂಧಿಸಿ ಕಾನೂನಿನ ಮುಂದೆ ನಿಲ್ಲಿಸಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹಿಸಿದೆ.
ಬಹುಶಃ ಚುನಾವಣೆ ಹತ್ತಿರುವಾಗುತ್ತಿರುವಂತೆ ಸಮಾಜವಿರೋಧಿ ಶಕ್ತಿಗಳು ದಾಂಧಲೆಗಿಳಿಯುತ್ತಿರುವುದು ಯಾವುದೋ ಸ್ಪಷ್ಟ ಅಜೆಂಡಾದೊಂದಿಗಾಗಿದೆ ಎಂದು ಅನಿಸುತ್ತದೆ. ಹಾಗಿದ್ದರೆ ಈ ಹತ್ಯಾ ಘಟನೆಗಳ ಹಿಂದೆ ಯಾರಿದ್ದಾರೆ, ಯಾವ ಶಕ್ತಿಗಳಿವೆ, ಯಾವ ಉದ್ದೇಶ ಇದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಾದದ್ದು ಕರ್ತವ್ಯವಾಗಿದೆ. ಸುರತ್ಕಲ್ ನಲ್ಲಿ ಫಾಝಿಲ್ ಹತ್ಯಾ ಘಟನೆಯ ನಂತರ ಕಿಡಿಗೇಡಿಗಳು ದಕ್ಷಿಣ ಕನ್ನಡದ ಸೌಹಾರ್ದ ಕದಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ನಡೆದಿರುವ ಜಲೀಲ್ರ ಹತ್ಯೆಗಿಂತ ಮೊದಲು ಕಿಡಿಗೇಡಿಗಳಿಂದ ಇದೇ ದಕ್ಷಿಣ ಕನ್ನಡ ದಲ್ಲಿ ಅನೈತಿಕ ಪೊಲೀಸ್ ಗಿರಿ ಘಟನೆಯೂ ನಡೆಯಿತು. ಅಮಾಯಕ ಮುಸ್ಲಿಂ ಯುವಕನಿಗೆ ಸಮಾಜ ಘಾತುಕ ಶಕ್ತಿಗಳು ಮಾರಣಾಂತಿಕವಾಗಿ ಥಳಿಸಿದರು. ಆಗಲೇ ನಮ್ಮ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಸಕ್ರಿಯ ಗೊಳ್ಳಬೇಕಿತ್ತು. ಎಚ್ಚೆತ್ತುಕೊಳ್ಳ ಬೇಕಿತ್ತು. ಹಾಗಾಗಿಲ್ಲ. ಹಾಗಾಗಿರುತ್ತಿದ್ದರೆ ಅಮಾಯಕ ಜಲೀಲ್ ಹತ್ಯಾ ಘಟನೆ ನಡೆಯುತ್ತಿರಲಿಲ್ಲ. ಅವರ ಸಾವು ಸಂಭವಿಸುತ್ತಿರಲಿಲ್ಲ
ಇಂತಹ ಅಮಾಯಕರ ಸಾವುಗಳಿಗೆ ನ್ಯಾಯವೆಲ್ಲಿದೆ? ಕಿಡಿಗೇಡಿ ಕೃತ್ಯಗಳಿಗೆ ಯಾರು ಹೊಣೆಗಾರರು. ಕಿಡಿಗೇಡಿಗಳು ತಾಂಡವಾಡುವುದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗುತ್ತಿರುವುದೇಕೆ ಇಂತಹ ಎಲ್ಲ ಪ್ರಶ್ನೆಗಳು ಜಿಲ್ಲೆಯ ಕಾನೂನು ವ್ಯವಸ್ಥೆಯ ಅರಾಜಕ ಸ್ಥಿತಿಯನ್ನು ಬಹಿರಂಗ ಗೊಳಿಸುತ್ತಿದೆ. ಜೊತೆಗೆ ಪೊಲೀಸರ ಅನಾಸ್ಥೆಯನ್ನೇ ಎತ್ತಿ ತೋರಿಸುತ್ತಿವೆ.
ಇಂದು ಕರಾವಳಿಯಲ್ಲಿ ಜನರು ಬೀದಿಗಿಳಿಯಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕಿನಲ್ಲಿ ಬಂದು ಚೂರಿಯಿಂದ ಇರಿದು ಜಲೀಲರಂತಹ ಅಮಾಯಕರನ್ನು ಕೊಂದು ಹೋಗುತ್ತಾರೆಂಬುದು ಜಿಲ್ಲೆಯ ಕಾನೂನು ವ್ಯವಸ್ಥೆಯ ಘೋರ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಅಶಾಂತ, ಆತಂಕದ ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಸರಕಾರವನ್ನೂ ಮುಖ್ಯವಾಗಿ ದಕ್ಷಿಣ ಕನ್ನಡದ ಪೊಲೀಸ್ ವಿಭಾಗವನ್ನೇ ಹೊಣೆಯನ್ನಾಗಿ ಖಂಡಿತ ಮಾಡಬೇಕಾಗುತ್ತದೆ. ಆದ್ದರಿಂದ ಕೂಡಲೇ ಈ ವಾತಾವರಣ ತಿಳಿಗೊಳಿಸುವಲ್ಲಿ ಸರಕಾರ ಸೂಕ್ತ ಕ್ರಮ ಜರಗಿಸಬೇಕು. ಪೊಲೀಸರು ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕು. ಜಿಲ್ಲೆಯ ಜನತೆ ಶಾಂತಿ ಕಾಪಾಡಬೇಕು. ಇನ್ನಷ್ಟು ಅಮಾಯಕರನ್ನು ಕಳಕೊಳ್ಳುವ ಪರಿಸ್ಥಿತಿ ಜಿಲ್ಲೆಯಲ್ಲಿ ಸೃಷ್ಟಿಯಾಗಬಾರದು. ಸರಕಾರ ಕೊಲೆಯಾದ ಜಲೀಲ್ ಕುಟುಂಬಕ್ಕೆ ಯಾವುದೇ ತಾರತಮ್ಯ ಮಾಡದೆ ಸೂಕ್ತ ನಷ್ಟ ಪರಿಹಾರ ಕೊಡಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹಿಸಿದೆ.












